ಪಡಿತರ ವಿತರಕರಿಗೆ ಕಮಿಷನ್ ಹಣವನ್ನು ಡಿಬಿಟಿ ಮೂಲಕ ಪ್ರತಿ ತಿಂಗಳೂ ಪಾವತಿಗೆ ಆಗ್ರಹ
ವಿವಿಧ ಬೇಡಿಕೆ ಈಡೇರಿಕೆ ನಿಟ್ಟಿನಲ್ಲಿ ಸರ್ಕಾರ ಗಮನ ಸೆಳೆಯಲು ಕಾರ್ಯಕ್ರಮ ಆಯೋಜನೆ
ಮೈಸೂರು: ಪಡಿತರ ವಿತರಕರ ವಿವಿಧ ಬೇಡಿಕೆಗಳ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಜ.6ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿರುವ ಪಡಿತರ ವಿತರಕರಿಗೆ ಕಮಿಷನ್ ಹಣವನ್ನು ಡಿಬಿಟಿ ಮೂಲಕ ಪ್ರತಿ ತಿಂಗಳೂ ಪಾವತಿಸಬೇಕು ಎಂದು ಆಗ್ರಹಿಸಲಾಗುತ್ತದೆ.
ರಾಜ್ಯದಲ್ಲಿ ಸುಮಾರು 20 ಸಾವಿರ ಪಡಿತರ ವಿತರಕರಿದ್ದು, ಇವರಿಗೆ ಕಮಿಷನ್ ನೀಡಿಕೆ ತಾಂತ್ರಿಕ ಕಾರಣದಿಂದ ವಿಳಂಬವಾಗುತ್ತಿದೆ. ಹೀಗಾಗಿ, ಡಿಬಿಟಿ ವ್ಯವಸ್ಥೆ ಮೂಲಕ ನೀಡಬೇಕು ಎಂದು ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಮಿಷನ್ ಸಹ ಹೆಚ್ಚಿಸಬೇಕು. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ ಜಾರಿಯಲ್ಲಿದ್ದು, ಸಮರ್ಪಕ ವಿತರಣೆಗೆ ಏಕರೂಪ ತಂತ್ರಜ್ಞಾನ ಒದಗಿಸುವುದರೊಡನೆ ಸರ್ವರ್ ಸಮಸ್ಯೆ ಬಗೆಹರಿಸಬೇಕು. ಪಡಿತರ ವಿತರಕರಿಗೆ ಸರ್ಕಾರದಿಂದ ಉಚಿತವಾಗಿ ಕಂಪ್ಯೂಟರ್, ಬಯೋಯಂತ್ರ ಹಾಗೂ ಪ್ರಿಂಟರ್ ಯಂತ್ರವನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಉಪ್ಪು, ಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಬೆಲ್ಲ ಹಾಗೂ ವಿವಿಧ ಬಗೆಯ ಕಾಳುಗಳನ್ನು ನೀಡಿದರೆ ರಾಜ್ಯದ ಪಡಿತರ ಚೀಟಿದಾರರಿಗೆ ಅನುಕೂಲವಾಗುತ್ತದೆ. ಅಪೌಷ್ಟಿಕತೆ ತೊಡೆದು ಹಾಕಬಹುದಾಗಿದೆ ಎಂದು ಸಲಹೆ ನೀಡಿದರು.
ಸುಮಾರು 6 ವರ್ಷದಿಂದ ಬರಬೇಕಾಗಿರುವ ಇ-ಕೆವೈಸಿ ಹಣವನ್ನು ಬಿಡುಗಡೆಗೊಳಿಸಲು ಸರ್ಕಾರ ಆದೇಶಿಸಬೇಕು, ಭಾರತ್ ರೈಸ್, ಭಾರತ್ ದಾಲ್, ಭಾರತ್ ಗೋಧಿ, ಭಾರತ್ ಸಕ್ಕರೆ, ಭಾರತ್ ಅಡುಗೆ ಎಣ್ಣೆ ಮೊದಲಾದ ಕಾರ್ಡ್‌ದಾರರಿಗೆ ಬೇಕಾದವನ್ನು ನ್ಯಾಯಬೆಲೆ ಅಂಗಡಿಯಲ್ಲಿ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಗೋಪಾಲ್, ರವಿ ಮಂಚೇಗೌಡನಕೊಪ್ಪಲು, ನಂಜನಗೂಡು ದೊರೆಸ್ವಾಮಿ, ಶಿವಣ್ಣ ಇನ್ನಿತರರಿದ್ದರು.