ಯುವ ಸಂಭ್ರಮದ ಶೀರ್ಷಿಕೆ ಗೀತೆ ಬಿಡುಗಡೆ

R. Aishwarya released the title song of Yuva Sambraham
ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಶನಿವಾರ ಯುವ ಸಂಭ್ರಮದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದರು. ಜಿ.ಎಸ್.ಸೋಮಶೇಖರ್, ಪ್ರತಿಭಾ, ಮಂಟೇಲಿಂಗು, ಲಿಂಗರಾಜು ಇತರರಿದ್ದರು.
Published on: 

ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ಮುನ್ನುಡಿ ಬರೆಯುವ ಯುವ ಮನಸ್ಸುಗಳ ನೆಚ್ಚಿನ ಯುವ ಸಂಭ್ರಮಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ‘ದಸರಾ ಬಂತು ಸಂಭ್ರಮ ಬಂತು.. ಯುವ ಸಂಭ್ರಮ ಮೊದಲೇ ಬಂತು’ ಎಂಬ ಯುವ ಸಂಭ್ರಮದ ಶೀರ್ಷಿಕೆ ಗೀತೆಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ನಗರ ಪಾಲಿಕೆಯ ಉಪ ಆಯುಕ್ತ ಸೋಮಶೇಖರ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿದೆ. ಸಾಹಿತ್ಯವನ್ನು ನಾಗೇಂದ್ರ ಮತ್ತು ಗೌರಿ ರಚಿಸಿದ್ದು, ಗುರುಕಿರಣ್ ಮತ್ತು ಅನನ್ಯ ಭಟ್ ಹಾಡಿದ್ದಾರೆ.

ನಗರದ ಸೆಂಟ್ರೋ ಮಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಂಭ್ರಮ ಉಪ ಸಮಿತಿಯ ಉಪ ವಿಶೇಷಾಧಿಕಾರಿಯೂ ಆದ, ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಯುವ ಸಂಭ್ರಮದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಈ ಬಾರಿಯ ಯುವ ಸಂಭ್ರಮವನ್ನು ವಿಭಿನ್ನವಾಗಿ ಆಯೋಜಿಸಲಾಗುತ್ತಿದ್ದು, ಸೆ.28ರಿಂದ ಅ.5ರವರೆಗೆ ಒಟ್ಟು ಎಂಟು ದಿನಗಳ ಕಾಲ ಮಾನಸಗಂಗೋತ್ರಿಯ ಮುಕ್ತ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಪ್ರತಿದಿನ ಸಂಜೆ 4.30ರಿಂದ ರಾತ್ರಿ 9 ರವರೆಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಗೂ ನಟಿ ಸಪ್ತಮಿ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅ.7ರಂದು ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರ ಸಂಗೀತ ಹಾಗೂ ನೃತ್ಯೋತ್ಸವದೊಂದಿಗೆ ಅದ್ದೂರಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಒಟ್ಟಾರೆ ಸುಮಾರು 10 ದಿನಗಳ ಕಾಲ ಸಾಂಸ್ಕೃತಿಕ ಹಬ್ಬ ನಡೆಯಲಿದೆ ಎಂದರು.

350ಕ್ಕೂ ಹೆಚ್ಚು ಕಾಲೇಜುಗಳ ಭಾಗಿ

ಹೊರ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳು ಮೈಸೂರಿಗೆ ಬಂದು ಅರ್ಜಿ ಸಲ್ಲಿಸುವ ತೊಂದರೆಯನ್ನು ತಪ್ಪಿಸಲು ಈ ಬಾರಿ ಯುವ ಸಂಭ್ರಮದ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲ್ ಹಾಗೂ ಆನ್‌ಲೈನ್‌ಗೊಳಿಸಲಾಗಿತ್ತು. 350ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಲಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.

ಸುಮಾರು 21 ಕಾಲೇಜುಗಳಿಂದ ಅರ್ಜಿ ಸಲ್ಲಿಸಿರುವ ದಿವ್ಯಾಂಗ ವಿದ್ಯಾರ್ಥಿಗಳಿಗೆ ಪ್ರತಿದಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ತಂಡಕ್ಕೂ ನಿರ್ದಿಷ್ಟ ಸಮಯ ಹಾಗೂ ಸ್ಲಾಟ್ ನಿಗದಿಪಡಿಸಲಾಗಿದೆ. ಪ್ರತಿದಿನವೂ ಒಂದೊಂದು ವಿಷಯಾಧಾರಿತವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಆರ್. ಐಶ್ವರ್ಯ ತಿಳಿಸಿದರು.

ಮಹಿಳೆಯರಿಗೆ ಒಂದು ದಿನ ಮೀಸಲು

ಈ ಬಾರಿಯ ಯುವ ಸಂಭ್ರಮದಲ್ಲಿ ಒಂದು ದಿನವನ್ನು ಸಂಪೂರ್ಣವಾಗಿ ಮಹಿಳಾ ದಿನ ದಿನ ಆಚರಿಸಲಾಗುತ್ತಿದೆ. ಅಂದು ವೇದಿಕೆ ನಿರ್ವಹಣೆ, ಭದ್ರತೆ ಹಾಗೂ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಮಹಿಳೆಯರೇ ವಹಿಸಲಿದ್ದಾರೆ. ಈ ಮೂಲಕ ಮಹಿಳಾ ಸಬಲೀಕರಣದ ಸಂದೇಶ ಸಾರಲಾಗುವುದು. ಅಂದು ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಪಿಂಕ್ ಬಣ್ಣದ ಉಡುಪು ಧರಿಸಲಿದ್ದಾರೆ ಎಂದು ಆರ್.ಐಶ್ವರ್ಯ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಅ.2 ಮತ್ತು 3ರಂದು ಚಿತ್ರಸಂತೆ ಆಯೋಜಿಸಲಾಗುತ್ತಿದೆ. ಆಹಾರ ಪ್ರಿಯರಿಗಾಗಿ ಲೈಟ್ ಸ್ನ್ಯಾಕ್ಸ್ ಒಳಗೊಂಡ ಫುಡ್ ಮಾರ್ಕೆಟ್ ಹಾಗೂ ಫ್ಲೀ ಮಾರ್ಕೆಟ್‌ಗಳನ್ನೂ ಆಯೋಜಿಸಲಾಗಿದೆ.

ಪಾಲಿಕೆ ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ಯುವ ಸಂಭ್ರಮ ಉಪಸಮಿತಿ ಕಾರ್ಯದರ್ಶಿ ಪ್ರತಿಭಾ, ಮಂಟೇಲಿಂಗು, ಸಮನ್ವಯಾಧಿಕಾರಿ ಲಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೊರ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ವಸತಿ ಹಾಗೂ ಡಾರ್ಮಿಟರಿ ವ್ಯವಸ್ಥೆ ಕಲ್ಪಿಸಲು ಪ್ರತ್ಯೇಕ ಉಪ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿದಿನ ಸಂಜೆ 4.30ರಿಂದ ರಾತ್ರಿ 9ರವರೆಗೆ ಮಾತ್ರ ಕಾರ್ಯಕ್ರಮಗಳು ನಡೆಯಲಿವೆ. ಕಾಲೇಜುಗಳ ಸಂಖ್ಯೆಯನ್ನು 350ಕ್ಕೆ ಸೀಮಿತಗೊಳಿಸಿರುವುದರಿಂದ ಕಾರ್ಯಕ್ರಮಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು.

-ಆರ್.ಐಶ್ವರ್ಯ

ಉಪ ವಿಶೇಷಾಧಿಕಾರಿ, ಯುವ ಸಂಭ್ರಮ ಉಪ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net