ಸುರಕ್ಷತೆ ಜತೆಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮುಖ್ಯ

ವಿ.ವಿ.ಮೊಹಲ್ಲಾದಲ್ಲಿರುವ ಸೆಸ್ಕ್‌ನ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಲೈನ್‌ಮ್ಯಾನ್ ದಿವಸ್ ಕಾರ್ಯಕ್ರಮವನ್ನು ಸೆಸ್ಕ್ ಅಧ್ಯಕ್ಷ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಕೆ.ಎಂ.ಮುನಿಗೋಪಾಲ್ ರಾಜು, ಸುನೀಲ್ ಕುಮಾರ್, ಡಿ.ಜೆ. ದಿವಾಕರ್, ಡಿ.ಸಂದೀಪ್ ಇನ್ನಿತರರಿದ್ದರು.
ವಿ.ವಿ.ಮೊಹಲ್ಲಾದಲ್ಲಿರುವ ಸೆಸ್ಕ್‌ನ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಲೈನ್‌ಮ್ಯಾನ್ ದಿವಸ್ ಕಾರ್ಯಕ್ರಮವನ್ನು ಸೆಸ್ಕ್ ಅಧ್ಯಕ್ಷ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಕೆ.ಎಂ.ಮುನಿಗೋಪಾಲ್ ರಾಜು, ಸುನೀಲ್ ಕುಮಾರ್, ಡಿ.ಜೆ. ದಿವಾಕರ್, ಡಿ.ಸಂದೀಪ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ
  • ಲೈನ್‌ಮನ್ ದಿವಸ್ ಕಾರ್ಯಕ್ರಮ
ಮೈಸೂರು: ಗ್ರಾಹಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಿಬ್ಬಂದಿ ಸುರಕ್ಷತೆ ಮತ್ತು ಎಚ್ಚರಿಕೆಯ ಕೆಲಸ ಅತ್ಯಂತ ಮುಖ್ಯವಾಗಿದೆ ಎಂದು ಸೆಸ್ಕ್ ಅಧ್ಯಕ್ಷ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಗರದ ವಿ.ವಿ.ಮೊಹಲ್ಲಾದಲ್ಲಿರುವ ಸೆಸ್ಕ್ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಲೈನ್‌ಮನ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಒಂದು ತಪ್ಪು ಅಥವಾ ದುಡುಕಿನ ನಿರ್ಧಾರದಿಂದ ವಿದ್ಯುತ್ ಅವಘಡಗಳು ಸಂಭವಿಸಿದರೆ ಅದು ಸಿಬ್ಬಂದಿಯ ಕುಟುಂಬಕ್ಕೆ ದೊಡ್ಡ ನಷ್ಟವಾಗುವುದರ ಜತೆಗೆ ಸಂಸ್ಥೆಗೂ ಕಪ್ಪುಚುಕ್ಕೆ ಆಗಲಿದೆ. ಆದ್ದರಿಂದ ಲೈನ್‌ಮನ್‌ಗಳು ತಮ್ಮ ಸುರಕ್ಷತೆ ಜತೆಗೆ ಕುಟುಂಬ ಮತ್ತು ಸಂಸ್ಥೆಯ ಹಿತವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಸಂಸ್ಥೆ ಮತ್ತು ಸಿಬ್ಬಂದಿ ನಡುವೆ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ಕೆಲಸ ನಡೆಯುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗಾಗಿ ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಯಾವುದೇ ಅವಘಡಗಳು ಸಂಭವಿಸದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ.
 ಆದ್ದರಿಂದ ವಿದ್ಯುತ್ ಅವಘಡಗಳನ್ನು ತಗ್ಗಿಸುವಲ್ಲಿ ಹಾಗೂ ಲೈನ್‌ಮನ್‌ಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಫೀಡರ್‌ಗಳ ನಿರ್ವಹಣೆಗೆ ಕ್ರಮಕೈಗೊಳ್ಳಲಾಗಿದೆ. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ವಿದ್ಯುತ್ ಅವಘಡ ತಪ್ಪಿಸಬಹುದು ಎಂದು ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಮಾತನಾಡಿ, ಸೆಸ್ಕ್ ವತಿಯಿಂದ ಮಾ.4ರಿಂದ 10ರವರೆಗೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಸಿಬ್ಬಂದಿಯ ಸುರಕ್ಷತೆ ಮಾತ್ರವಲ್ಲದೆ ಸಾರ್ವಜನಿಕರ ಸುರಕ್ಷತೆಯೂ ಮುಖ್ಯವಾಗಿದ್ದು, ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಎಲ್ಲರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ಸೆಸ್ಕ್ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಲೈನ್‌ಮನ್‌ಗಳು ಅಪಾಯ ಉಂಟಾಗುವ ಸಾಧ್ಯತೆ ಇರುವ ಸ್ಥಳಗಳಿಗೆ ತೆರಳಿ, ಸಮಸ್ಯೆ ಪರಿಶೀಲಿಸಿ ಸರಿಪಡಿಸುವ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು. ಸುರಕ್ಷತೆ ಪ್ರಮುಖವಾಗಿದ್ದು, ಎಲ್ಲರೂ ಈ ಬಗ್ಗೆ ಗಮನ ನೀಡಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಮಾತನಾಡಿ, ಲೈನ್‌ಮನ್ ದಿನದ ಮಹತ್ವ ತಿಳಿಸಿದರು. 
ಇದೇ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯನಿರ್ವಹಿಸಿ, ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸಿ ಸೆಸ್ಕ್‌ನ ವಿಶ್ವಾಸಾರ್ಹತೆ ಹೆಚ್ಚಿಸಿರುವ 10 ಲೈನ್‌ಮ್ಯಾನ್‌ಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಲೈನ್‌ಮನ್‌ಗಳಿಗೆ ಸುರಕ್ಷತೆ ಮತ್ತು ಜವಾಬ್ದಾರಿಯ ಕುರಿತಂತೆ ಸುರಕ್ಷತಾ ಮಂತ್ರವನ್ನು ಬೋಧಿಸಲಾಯಿತು. 
ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ವಿವಿ ಮೊಹಲ್ಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಡಿ.ಸಂದೀಪ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ(659)ದ ಉಪಾಧ್ಯಕ್ಷ ಎಚ್.ವಿ.ಸಂದೀಪ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net