ದಂಡನಾತ್ಮಕ ತೆರಿಗೆ ಹೆಚ್ಚಳದಿಂದ ತಂಬಾಕು ಹರಾಜು ಪ್ರಕ್ರಿಯೆ ಕುಂಠಿತ ಮತ್ತು ರೈತರಿಗೆ ಮೂರು ಪಟ್ಟು ಆಘಾತ: ಕೇಂದ್ರದ ತುರ್ತು ಮಧ್ಯಸ್ಥಿಕೆ ಅಗತ್ಯ

ಬಜೆಟ್
ಬಜೆಟ್
Published on
ಮೈಸೂರು:ಭಾರತದಾದ್ಯಂತ ಇರುವ ತಂಬಾಕು ಬೆಳೆಗಾರರು ಸಿಗರೇಟ್ ಉತ್ಪನ್ನಗಳ ಮೇಲಿನ ತೆರಿಗೆ 70%ಗಿಂತಲೂ ಹೆಚ್ಚು ಏರಿಕೆ ಆದ ನಂತರ ಹಿಂದೆಂದೂ ಕಾಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಹಠಾತ್ ಮತ್ತು ಅಸಮಾನ ತೆರಿಗೆ ಕ್ರಮಗಳು ಸಂಪೂರ್ಣ ತಂಬಾಕು ಉದ್ಯಮವನ್ನು ಅಸ್ಥಿರಗೊಳಿಸಿವೆ; ಇದು ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ, ವ್ಯಾಪಾರಿಗಳನ್ನು ಮಾರುಕಟ್ಟೆಯಿಂದ ದೂರ ಮಾಡಿದೆ ಮತ್ತು ಲಕ್ಷಾಂತರ ರೈತ ಕುಟುಂಬಗಳನ್ನು ತೀವ್ರ ಅನಿಶ್ಚಿತತೆಗೆ ತಳ್ಳಿದೆ.

ಸ್ಥಗಿತಗೊಂಡ ಹರಾಜು, ಸ್ತಬ್ಧಗೊಂಡ ಮಾರುಕಟ್ಟೆಗಳು

ಕರ್ನಾಟಕದಲ್ಲಿ, ವ್ಯಾಪಾರಿಗಳು ಭಾಗವಹಿಸದ ಕಾರಣ ತಂಬಾಕು ಹರಾಜು ಪ್ರಕ್ರಿಯೆಯು ಸಂಪೂರ್ಣವಾಗಿ ಕುಸಿದಿದೆ, ಇದರ ಪರಿಣಾಮವಾಗಿ ಹರಾಜು ಪದೇ ಪದೇ ಮುಂದೂಡಲ್ಪಡುತ್ತಿದೆ. ಈ ಸ್ಥಗಿತ ಕ್ರಮದಿಂದ ಈಗ ಆಂಧ್ರಪ್ರದೇಶದ ಹರಾಜಿನ ಮೇಲೂ ನೇರ ಪರಿಣಾಮ ಉಂಟಾಗುತ್ತಿದೆ. ಏಕೆಂದರೆ ನೀತಿ ಅನಿಶ್ಚಿತತೆ ಮತ್ತು ವೆಚ್ಚ ಏರಿಕೆಯ ನಡುವೆ ಖರೀದಿದಾರರು ಹೂಡಿಕೆ ಮಾಡಲು ಸಿದ್ಧವಾಗುತ್ತಿಲ್ಲ. ಮಾರಾಟದ ಅವಧಿಯು ಮುಗಿಯುತ್ತಾ ಬಂದಿದ್ದರೂ, ರೈತರು ಮಾರಾಟವಾಗದ ಉತ್ಪನ್ನಗಳು, ಹೆಚ್ಚುತ್ತಿರುವ ಸಾಲ ಮತ್ತು ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ರೈತರಿಗೆ ಮೂರು ಆಘಾತ
ಪ್ರಮುಖ ತಂಬಾಕು ಬೆಳೆಗಾರ ರಾಜ್ಯಗಳು, ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರು ಮೂರು ವಿಧದ ಆಘಾತಗಳನ್ನು ಎದುರಿಸುತ್ತಿದ್ದಾರೆ: ಹರಾಜು ಪ್ರಕ್ರಿಯೆಯಲ್ಲಿ ತೀವ್ರ ವಿಳಂಬ ಮತ್ತು ವ್ಯತ್ಯಯ.
ಅಸಹಜ ತೆರಿಗೆ ಏರಿಕೆಯಿಂದಾಗಿ ಜಾಗತಿಕ ಸ್ಪರ್ಧಾತ್ಮಕತೆಯನ್ನು ಕಳೆದುಕೊಂಡು ರಫ್ತು ಪ್ರಮಾಣದಲ್ಲಿ ಕುಸಿತ.
ಸಿಗರೇಟ್‌ಗಳ ಮೇಲಿನ ದಂಡನಾತ್ಮಕ ತೆರಿಗೆಯಿಂದಾಗಿ ಕಾನೂನುಬದ್ಧ ವ್ಯಾಪಾರ ದುರ್ಬಲಗೊಂಡು ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿರುವುದು.

ರೈತರಿಂದ ರಾಜಕಾರಣಕ್ಕೆ ಮನವಿ

ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ದೇಶದಾದ್ಯಂತ ಇರುವ ಎಲ್ಲಾ ತಂಬಾಕು ಸಂಘಗಳು ಜಂಟಿಯಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳು, ವಿತ್ತ ಸಚಿವರು, ವಾಣಿಜ್ಯ ಸಚಿವರು, ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಂಸದರಿಗೆ ತಕ್ಷಣದ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಪತ್ರಗಳನ್ನು ಸಲ್ಲಿಸಿವೆ.
ರೈತರೊಂದಿಗೆ ನಡೆಸಿದ ವ್ಯಾಪಕ ಸಭೆಗಳ ಆಧಾರದ ಮೇಲೆ, ತಂಬಾಕು ಬೆಳೆಯುವ ಎಲ್ಲಾ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳು ಮತ್ತು ಸಂಸದರು ಮಾನ್ಯ ಪ್ರಧಾನ ಮಂತ್ರಿಗಳು, ವಿತ್ತ ಸಚಿವರು ಮತ್ತು ವಾಣಿಜ್ಯ ಸಚಿವರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಪ್ರಸ್ತುತ ಇರುವ ವಾಸ್ತವ ಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ ಮತ್ತು ರೈತರ ಜೀವನೋಪಾಯ, ರಫ್ತು ಹಾಗೂ ಸರ್ಕಾರದ ಆದಾಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಅತ್ಯಂತ ಅಪರೂಪದ ಮತ್ತು ಮಹತ್ವದ ಹೆಜ್ಜೆಯಾಗಿ, ರೈತ ಪ್ರತಿನಿಧಿಗಳು ತಂಬಾಕು ಮಂಡಳಿಯ ಅಧ್ಯಕ್ಷರು ಮತ್ತು ಗೌರವಾನ್ವಿತ ಸಂಸದರೊಂದಿಗೆ ಭಾರತದ ಗೌರವಾನ್ವಿತ ವಿತ್ತ ಸಚಿವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಯು ಸಂಪೂರ್ಣವಾಗಿ ಕುಸಿದಿರುವುದನ್ನು ವಿವರಿಸಿ, ತರ್ಕಬದ್ಧ ತೆರಿಗೆ ತಿದ್ದುಪಡಿಯ ಮೂಲಕ ಸರ್ಕಾರದ ಆದಾಯಕ್ಕೆ ಧಕ್ಕೆಯಾಗದಂತೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರಗಳು ಮತ್ತು ಪ್ರತಿಪಕ್ಷಗಳಿಂದ ಬೆಂಬಲ

ಆಂಧ್ರಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿಗಳು ಮತ್ತು ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು ಈ ವಿಷಯವನ್ನು ಕೇಂದ್ರ ಸರ್ಕಾರದೊಂದಿಗೆ ತುರ್ತಾಗಿ ಚರ್ಚಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ. ಅಲ್ಲದೆ, ರಾಷ್ಟ್ರಮಟ್ಟದಲ್ಲಿ ಈ ವಿಚಾರಕ್ಕೆ ಬೆಂಬಲ ಸೂಚಿಸಲು ತಮ್ಮ ಪಕ್ಷದ ಸದನ ಸದಸ್ಯರಿಗೆ ತಿಳಿಸಿದ್ದಾರೆ.
ರೈತ ನಿಯೋಗಗಳು ಪ್ರತಿಪಕ್ಷಗಳ ನಾಯಕರನ್ನೂ ಭೇಟಿ ಮಾಡಿದ್ದು, ಅವರು ಈ ಬಿಕ್ಕಟ್ಟಿನ ಗಂಭೀರತೆಯನ್ನು ಒಪ್ಪಿಕೊಂಡಿದ್ದಾರೆ. ರೈತರು, ಉದ್ಯೋಗ, ರಫ್ತು ಮತ್ತು ರಾಷ್ಟ್ರೀಯ ಆದಾಯದ ಮೇಲೆ ಇದು ಬೀರುವ ಪರಿಣಾಮವನ್ನು ಮನಗಂಡು, ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಅವರು ತಮ್ಮ ಸಂಸದರಿಗೆ ಸೂಚಿಸಿದ್ದಾರೆ.
ಸಮಯ ಮೀರುತ್ತಿದೆ: ಇಂದೇ ಕೊನೆಯ ದಿನ
ಹಲವು ಬಾರಿ ಮನವಿಗಳನ್ನು ಸಲ್ಲಿಸಿದರೂ, ಸಭೆಗಳು ನಡೆದರೂ ಮತ್ತು ಭರವಸೆಗಳು ದೊರೆತಿದ್ದರೂ ಸಹ, ಹರಾಜು ಪ್ರಕ್ರಿಯೆಯು ವಿಳಂಬವಾಗುತ್ತಲೇ ಇದೆ. ಇದು ರೈತರನ್ನು ತೀವ್ರ ಆತಂಕಕ್ಕೆ ದೂಡಿದೆ. ಆಂಧ್ರಪ್ರದೇಶದಲ್ಲಿ ಪರಿಸ್ಥಿತಿ ವಿಶೇಷವಾಗಿ ಆತಂಕದಾಯಕವಾಗಿದ್ದು, ಕರ್ನಾಟಕದಲ್ಲಿನ ಹರಾಜು ವಿಳಂಬ, ಕುಸಿಯುತ್ತಿರುವ ರಫ್ತು ಬೇಡಿಕೆ ಮತ್ತು ಅಸಹಜ ತೆರಿಗೆ ಏರಿಕೆಯ ಒಟ್ಟಾರೆ ಪರಿಣಾಮದಿಂದಾಗಿ ಅಲ್ಲಿನ ರೈತರು ಸರಿಪಡಿಸಲಾಗದ ನಷ್ಟ ಉಂಟಾಗಬಹುದು ಎಂದು ಆತಂಕಗೊಂಡಿದ್ದಾರೆ.
ತಂಬಾಕು ಕ್ಷೇತ್ರವು ರೈತರು, ಕೃಷಿ ಕಾರ್ಮಿಕರು, ಗ್ರೇಡರ್‌ಗಳು, ಸಾರಿಗೆದಾರರು, ಗೋದಾಮು ಕಾರ್ಮಿಕರು, ಕಾರ್ಖಾನೆ ನೌಕರರು, ರಫ್ತುದಾರರು ಮತ್ತು ರಿಟೇಲ್ ವ್ಯಾಪಾರಿಗಳು ಸೇರಿದಂತೆ 4.5 ಕೋಟಿಗೂ ಹೆಚ್ಚು ಭಾರತೀಯರ ಜೀವನೋಪಾಯಕ್ಕೆ ಆಸರೆಯಾಗಿದೆ. ಈ ಕ್ಷೇತ್ರದಲ್ಲಿ ಉಂಟಾಗುವ ಯಾವುದೇ ದೀರ್ಘಕಾಲದ ಅಡಚಣೆಯು ಕೇವಲ ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸುವುದಲ್ಲದೆ, ಸರ್ಕಾರದ ಆದಾಯವನ್ನು ಕುಂಠಿತಗೊಳಿಸುತ್ತದೆ ಮತ್ತು ಅಕ್ರಮ ವ್ಯಾಪಾರಕ್ಕೆ ಪ್ರಚೋದನೆ ನೀಡುತ್ತದೆ.

ಕೇಂದ್ರ ಸರ್ಕಾರಕ್ಕೆ ತುರ್ತು ಮನವಿ

ಮೂರು ರಾಜ್ಯಗಳ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅಂತಿಮ ಮತ್ತು ತುರ್ತು ಮನವಿಯನ್ನು ಸಲ್ಲಿಸಿವೆ:
ಸಿಗರೇಟ್‌ಗಳ ಮೇಲಿನ ಅತಿಯಾದ ತೆರಿಗೆ ಏರಿಕೆಯನ್ನು ತಕ್ಷಣವೇ ಮರುಪರಿಶೀಲಿಸಿ ಮತ್ತು ತರ್ಕಬದ್ಧಗೊಳಿಸಿ..
ರೈತರು ಮತ್ತು ಸರ್ಕಾರಿ ಖಜಾನೆ ಎರಡನ್ನೂ ರಕ್ಷಿಸುವ 'ಆದಾಯ- ತಟಸ್ಥ' ತೆರಿಗೆಯನ್ನು ಜಾರಿಗೊಳಿಸಿ.
ಖರೀದಿದಾರರು ಮತ್ತು ರಫ್ತುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
ರೈತರ ಜೀವನೋಪಾಯಕ್ಕೆ ಸರಿಪಡಿಸಲಾಗದ ಹಾನಿಯಾಗುವುದನ್ನು ತಡೆಯಲು ತಕ್ಷಣವೇ ಹರಾಜು ಪ್ರಕ್ರಿಯೆಯನ್ನು ಪುನರಾರಂಭಿಸಲು ಅನುಕೂಲ ಮಾಡಿಕೊಡಿ.
ಸಕಾಲಿಕ ಮಧ್ಯಸ್ಥಿಕೆಗೆ ಇಂದೇ ಕೊನೆಯ ದಿನ. ಇನ್ನು ಹೆಚ್ಚಿನ ವಿಳಂಬವಾದರೆ ಅದು ತಂಬಾಕು ವಲಯವನ್ನು ಮತ್ತು ಅದನ್ನು ನಂಬಿರುವ ಲಕ್ಷಾಂತರ ಜನರನ್ನು ಸಂಪೂರ್ಣ ತೀವ್ರ ಬಿಕ್ಕಟ್ಟಿಗೆ ತಳ್ಳುವ ಅಪಾಯವಿದೆ.
ಭಾರತದಾದ್ಯಂತ ಇರುವ ತಂಬಾಕು ಬೆಳೆಗಾರರು, ಕಾರ್ಮಿಕರು ಮತ್ತು ಸಂಬಂಧಿತ ಪಾಲುದಾರರ ಹಿತದೃಷ್ಟಿಯಿಂದ ಪ್ರಕಟಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net