ರೈತರಿಗೆ ಶೀಘ್ರ ಸಾಲ ಸೌಲಭ್ಯ ಒದಗಿ

ಹುಣಸೂರು ತಾಲೂಕು ಬಿಳಿಕೆರೆ ಎಂಡಿಸಿಸಿ ಬ್ಯಾಂಕ್ ಶಾಖೆ ಎದುರು ರೈತ ಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಪ್ರಧಾನ ವ್ಯವಸ್ಥಾಪಕ ವಿನೋದ್ ಅವರಿಗೆ  ಮನವಿ  ಸಲ್ಲಿಸಿದರು. ಹೊಸೂರು ಕುಮಾರ್, ಅಗ್ರಹಾರ ರಾಮೇಗೌಡ, ಅಣ್ಣಯ್ಯನಾಯಕ, ಉಂಡುವಾಡಿ ಚಂದ್ರೇಗೌಡ, ನಾಗಣ್ಣ, ಸೋಮಣ್ಣ, ಬಸವರಾಜು ವೆಂಕಟಪತಿ ನಾಯಕ ಇದ್ದರು.
ಹುಣಸೂರು ತಾಲೂಕು ಬಿಳಿಕೆರೆ ಎಂಡಿಸಿಸಿ ಬ್ಯಾಂಕ್ ಶಾಖೆ ಎದುರು ರೈತ ಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಪ್ರಧಾನ ವ್ಯವಸ್ಥಾಪಕ ವಿನೋದ್ ಅವರಿಗೆ ಮನವಿ ಸಲ್ಲಿಸಿದರು. ಹೊಸೂರು ಕುಮಾರ್, ಅಗ್ರಹಾರ ರಾಮೇಗೌಡ, ಅಣ್ಣಯ್ಯನಾಯಕ, ಉಂಡುವಾಡಿ ಚಂದ್ರೇಗೌಡ, ನಾಗಣ್ಣ, ಸೋಮಣ್ಣ, ಬಸವರಾಜು ವೆಂಕಟಪತಿ ನಾಯಕ ಇದ್ದರು.
Published on
ಹುಣಸೂರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಶೀಘ್ರ ಸಾಲ ಸೌಲಭ್ಯ ಒದಗಿಸಲು ಆಗ್ರಹಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಬಿಳಿಕೆರೆ ಗ್ರಾಮದ ಎಂಡಿಸಿಸಿ ಬ್ಯಾಂಕ್ ಶಾಖೆ ಮುಂಭಾಗ ಪ್ರತಿಭಟನೆ ನಡೆಸಿದರು.
ರೈತರಿಗೆ ಸಾಲಸೌಲಭ್ಯ ಶೀಘ್ರ ಕಲ್ಪಿಸಲಿ, ಸಾಲ ತೀರಿಸಿದ್ದರೂ ನೋಟಿಸ್ ನೀಡುವ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ... ಎಂಬಿತ್ಯಾದಿ ಘೋಷಣೆಗಳನ್ನು ರೈತರು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಳೆದ 5-6 ತಿಂಗಳಿಂದ ಸಾಲ ವಿತರಣೆ ಮಾಡದೆ ರೈತರು ಕಂಗಾಲಾಗಿದ್ದಾರೆ. ಈ ಸಮಸ್ಯೆ ಬಗ್ಗೆ ರೈತರು ನಿತ್ಯ ಬ್ಯಾಂಕ್‌ಗಳಿಗೆ ಅಲೆದಾಡುತ್ತಿದ್ದು, ಬ್ಯಾಂಕ್ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಬಗೆಹರಿದಿಲ್ಲ. ಆ.19ರೊಳಗೆ ರೈತ ಪ್ರತಿನಿಧಿಗಳಿಗೆ ಸಾಲ ವಿತರಣೆ ಕುರಿತು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ನೀಡಿದ್ದ ಭರವಸೆಯೂ ಹುಸಿಯಾಗಿದೆ. ಸಹಕಾರ ಕ್ಷೇತ್ರವನ್ನು ಇಂದು ಬಂಡವಾಳ ಶಾಹಿಗಳು ಖಾಸಗಿ ಕ್ಷೇತ್ರವನ್ನಾಗಿ ಮಾಡಿಕೊಂಡು ಸೇವಾ ಮನೋಭಾವ ಇದಲ್ಲದೆ ರೈತರನ್ನು ದುಸ್ಥಿತಿಗೆ ತಳ್ಳುತ್ತಿದ್ದಾರೆ ಎಂದು ದೂರಿದರು.
ಬಡ್ಡಿರಹಿತ ಸಾಲ ಸೌಲಭ್ಯಕ್ಕೆ ಅವಕಾಶ ಇದ್ದರೂ ಇಂದು ಖಾಸಗಿ ಸಂಸ್ಥೆಗಳ ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ಹುಣಸೂರು ತಾಲೂಕಿನಲ್ಲಿ ಧರ್ಮಾಪುರ, ಹೆಗ್ಗಂದೂರು, ದೊಡ್ಡಹೆಜ್ಜೊರು, ಗಾಗೇನಹಳ್ಳಿ, ಅರಸುಕಲ್ಲಹಳ್ಳಿ ಇತರ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಸಾಲ ತೀರುವಳಿ ಮಾಡಿ 5 ತಿಂಗಳಾದರೂ ಮರುಸಾಲ ನೀಡದೆ ಇರುವುದನ್ನು ಖಂಡಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ ಮಾತನಾಡಿ, ಸಹಕಾರಿ ಕ್ಷೇತ್ರವು ರೈತರಿಗೆ ಸಹಕಾರಿಯಾದ ಯಾವುದೇ ಕೆಲಸವನ್ನು ಮಾಡದೆ ತೊಂದರೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿದ್ದ ಎಂಡಿ ದೂರವಾಣಿ ಮೂಲಕ ರೈತ ಮುಖಂಡರೊಂದಿಗೆ ಮಾತನಾಡಿದರು. ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸುವುದಾಗಿಯೂ, ತಾಲೂಕಿನ ಧರ್ಮಾಪುರ ಸೊಸೈಟಿಯಲ್ಲಿ ಇಂದಿನಿಂದಲೇ ಸಾಲ ವಿತರಣೆ ಆರಂಭಿಸುವುದಾಗಿ ಮಾಹಿತಿ ನೀಡಿದರು. ತಾಲೂಕಿನ 20 ಸೊಸೈಟಿಗಳಲ್ಲಿ ಚುನಾವಣೆ ಆಗದೆ ತೊಂದರೆಯುಂಟಾಗುತ್ತಿದ್ದು, ಶೀಘ್ರ ಚುನಾವಣೆ ನಡೆಸಲು ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಸಮಸ್ಯೆ ಶೀಘ್ರ ಬಗೆಹರಿಸಿದ್ದರೆ ಜಿಲ್ಲಾ ಕೇಂದ್ರ ಕಚೇರಿ ಮುಂಭಾಗ ಧರಣಿ ಹೂಡುವುದಾಗಿ ಇದೇ ವೇಳೆ ರೈತರು ಎಚ್ಚರಿಕೆ ನೀಡಿದರು.
ಜಿಲ್ಲಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಿನೋದ್ ರೈತರಿಂದ ಮನವಿ ಸ್ವೀಕರಿಸಿದರು. ಬಿಳಿಕೆರೆ ಶಾಖೆ ವ್ಯವಸ್ಥಾಪಕ ಜಗದೀಶ್, ಜಿಲ್ಲಾ ಖಜಾಂಚಿ ಈಶ್ವರ್, ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಉಂಡವಾಡಿ ಚಂದ್ರೇಗೌಡ, ತಾಲೂಕು ರೈತ ಸಂಘದ ಗೌರವಾಧ್ಯಕ್ಷ ರಾಮಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಧರ್ಮಾಪುರ ಗ್ರಾಮ ಘಟಕದ ಅಧ್ಯಕ್ಷ ವೆಂಕಟಾಚಲಪತಿ ನಾಯಕ, ಚೌಡಿಕಟ್ಟೆ ನಾಗಣ್ಣ, ಅಣ್ಣಯ್ಯನಾಯಕ, ಪೈಲ್ವಾನ್ ಸೋಮಣ್ಣ, ಹರಳಹಳ್ಳಿ ಬಸವರಾಜು, ಶ್ಯಾನುಭೋಗನಹಳ್ಳಿ ಹರೀಶ, ಕುರುಬರ ಹೊಸಹಳ್ಳಿ ವೆಂಕಟೇಶ್ ಹಾಗೂ ಗ್ರಾಮ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ರೈತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net