ಸರಗೂರು ತಾಲೂಕಿನ ಈಡಿಗರ ಸಮುದಾಯ ಭವನದಲ್ಲಿ ವರ್ತಕರಿಗೆ ಮತ್ತು ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ , ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಟಿ.ರವಿಕುಮಾರ್, ಚೈತ್ರಾ ಸ್ವಾಮಿ ಇತರರು ಇದ್ದರು.
ಸರಗೂರು : ವರ್ತಕರು ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ನೀಡಬೇಕು. ಕಡ್ಡಾಯವಾಗಿ ಎಫ್‌ಎಸ್‌ಎಸ್‌ಐ ಪರವಾನಗಿ ಪಡೆಯಿರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ಪಟ್ಟಣದ ಈಡಿಗರ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ತಾಲೂಕು ಆಹಾರ ಸುರಕ್ಷತಾಧಿಕಾರಿಗಳ ಕಚೇರಿ ವತಿಯಿಂದ ವರ್ತಕರಿಗೆ ಮತ್ತು ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಹಮ್ಮಿಕೊಂಡಿದ್ದ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ವರ್ತಕರು ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ನೀಡಬೇಕು, ಯಾವುದೇ ರೀತಿಯ ಕಲಬೆರಕೆ ಆಹಾರವನ್ನು ನೀಡಬಾರದು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಭಾರತದಲ್ಲಿ ಆಹಾರದ ಸುರಕ್ಷತೆ, ಗುಣಮಟ್ಟ, ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಆಮದುಗಳನ್ನು ನಿಯಂತ್ರಿಸುವ ಪ್ರಮುಖ ಶಾಸನವಾಗಿದೆ. ಇದು ಗ್ರಾಹಕರಿಗೆ ಸುರಕ್ಷಿತ ಆಹಾರವನ್ನು ಖಚಿತಪಡಿಸಿಕೊಳ್ಳಲು ವಿಜ್ಞಾನ ಆಧಾರಿತ ಮಾನದಂಡಗಳನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಆಹಾರ ವಸ್ತುಗಳ ತಯಾರಿಕೆ, ಪ್ಯಾಕೇಜಿಂಗ್ ಮತ್ತು ಲೇಬಲಿಂಗ್‌ಗಾಗಿ ವಿಜ್ಞಾನ ಆಧಾರಿತ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಆಹಾರದಲ್ಲಿ ಕಲಬೆರಕೆ ತಡೆಗಟ್ಟಲು, ಕಲುಷಿತ ಆಹಾರವನ್ನು ನಿಯಂತ್ರಿಸಲು ಮತ್ತು ಸುರಕ್ಷಿತ ಆಹಾರದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ನಿಬಂಧನೆಗಳಿದ್ದು ಅವುಗಳನ್ನು ಪಾಲಿಸಬೇಕು. ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದರೆ, ವಿಶೇಷವಾಗಿ ಕಲಬೆರಕೆ ಆಹಾರ ಮಾರಾಟ ಮಾಡಿದರೆ, 2 ಲಕ್ಷ ರೂ. ವರೆಗಿನ ದಂಡ ಅಥವಾ ಜೈಲು ಶಿಕ್ಷೆಯಾಗಬಹುದು ಎಂದು ತಿಳಿಸಿದರು.
ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಮತ್ತು ಮಾದರಿಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಇದು ಗ್ರಾಹಕರ ಆರೋಗ್ಯವನ್ನು ರಕ್ಷಿಸಲು ಮತ್ತು ಆಹಾರ ಉದ್ಯಮದಲ್ಲಿ ಜವಾಬ್ದಾರಿಯನ್ನು ಉತ್ತೇಜಿಸಲು ಇರುವ ಸಮಗ್ರ ಕಾನೂನಾಗಿದೆ ಎಂದರು