ನಂತರ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಪರಿಶಿಷ್ಟ ದೊಂಬರ ಕಾಲನಿಯಲ್ಲಿ 30 ನಿರ್ಗತಿಕ ಕುಟುಂಬಗಳು ಕಳೆದ 30 ವರ್ಷಗಳಿಂದ ಮೂಲ ಸೌಲಭ್ಯಗಳ ಕೊರತೆಯ ನಡುವೆಯೇ ಅತ್ಯಂತ ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಸಮಿತಿಯ ಸತತ ಹೋರಾಟದ ನಂತರ ಆಶ್ರಯ ಯೋಜನೆಯಡಿ ನಿವೇಶನದ ಹಕ್ಕು ಪತ್ರಗಳನ್ನು ತಾಲೂಕು ಆಡಳಿತ ನೀಡಿದೆ. ಅಲೆಮಾರಿ ನಿಗಮಗಳಿಂದ 10 ಕುಟುಂಬಗಳಿಗೆ ಮನೆಗಳು, ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆಯಡಿ 4 ಮನೆಗಳು ಮಂಜೂರಾಗಿದ್ದು, ಈ ಬಡ ಕುಟುಂಬಗಳು ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಉಳಿದ ಕುಟುಂಬಗಳು ಮನೆ ಕಟ್ಟಲು 2 ಲಕ್ಷ ರೂ. ಸಾಲುತ್ತಿಲ್ಲವೆಂದು ಮನೆ ನಿರ್ಮಾಣ ಮಾಡಿಕೊಂಡಿಲ್ಲ. ಮನೆಗೆ 5 ಲಕ್ಷ ರೂ. ಮೀಸಲಿಡಬೇಕೆಂದು ಒತ್ತಾಯಿಸಲಾಗುತ್ತಿದೆ. ಕಾಲನಿಗೆ ರಸ್ತೆ, ಚರಂಡಿ, ಬೀದಿದೀಪ, ಅಂಬೇಡ್ಕರ್ ಭವನ, ಅಂಗನವಾಡಿ ಕಟ್ಟಡ ಮುಂತಾದ ಸೌಲಭ್ಯಗಳಿಲ್ಲದೆ ದಯನೀಯ ಸ್ಥಿತಿಯಲ್ಲಿ ವಾಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯಿಂದ 20 ಗುಂಟೆ ಸ್ಮಶಾನ ಮಂಜೂರಾಗಿದೆ ಎಂದು ಹೇಳಿತ್ತಿದ್ದರು. ಆ ಜಾಗವು ಕಲ್ಲುಮಂಟಿಯಾಗಿರುವುದರಿಂದ ಶವಸಂಸ್ಕಾರ ಮಾಡಲು ಆಗದೆ ಈ ಅಲೆಮಾರಿ ಕುಟುಂಬಗಳು ಪರದಾಡುತ್ತಿದ್ದಾರೆ ಎಂದು ದೂರಿದರು.