ಒಳಮೀಸಲಾತಿ ವಿರೋಧಿಸಿ ಪಿರಿಯಾಪಟ್ಟಣದಲ್ಲಿ ಪ್ರತಿಭಟನೆ

ಒಳ ಮೀಸಲಾತಿ ಕುರಿತ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ದಸಂಸ ಮುಖಂಡರು ಪಿರಿಯಾಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ಒಳ ಮೀಸಲಾತಿ ಕುರಿತ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ದಸಂಸ ಮುಖಂಡರು ಪಿರಿಯಾಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಸಂಚಾರ ತಡೆದು ಸರ್ಕಾರದ ವಿರುದ್ಧ ಆಕ್ರೋಶ
ಪಿರಿಯಾಪಟ್ಟಣ: ಒಳ ಮೀಸಲಾತಿ ಕುರಿತ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯು ಬಲಗೈ ಸಮುದಾಯಕ್ಕೆ ದ್ರೋಹವಾಗಲಿದೆ ಎಂದು ಆರೋಪಿಸಿ ತಾಲೂಕು ಬಲಗೈ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ದಸಂಸ ಮುಖಂಡ ಎಸ್.ರಾಮು ಮಾತನಾಡಿ, ಬಲಗೈ ಸಮುದಾಯದ ಚುನಾಯಿತ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಖರ್ಗೆ, ಡಾ.ಎಚ್.ಸಿ.ಮಹಸದೇವಪ್ಪ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರರು ಒಳ ಮೀಸಲಾತಿಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸಾಮರ್ಥ್ಯ ಇಲ್ಲದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಎಲ್ಲರೂ ನಮ್ಮೊಂದಿಗೆ ಹೋರಾಟಕ್ಕೆ ಬನ್ನಿ ಎಂದು ಕರೆ ನೀಡಿದರು.
ನಾವು ಒಂದು ಉದ್ಯೋಗ ಪಡೆಯಲು ಮೂವತ್ತು ವರ್ಷಗಳ ಕಾಲ ಕಾಯಬೇಕಾದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಿಮ್ಮ ಕುಟುಂಬಗಳು ಸಮೃದ್ಧಿ ಜೀವನ ನಡೆಸುತ್ತಿವೆ. ನಿಮ್ಮ ಸಮುದಾಯಕ್ಕೆ ಸೇರಿದ ಬಡವರು ಒಳ ಮೀಸಲಾತಿ ಅನ್ಯಾಯದಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ದೂರಿದರು.
ಕೊಳ್ಳೇಗಾಲದಲ್ಲಿ ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಪ್ರಕರಣ ಅತ್ಯಂತ ಖಂಡನೀಯ. ಕೂಡಲೇ ಇದನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಟಿ.ಈರಯ್ಯ ಮಾತನಾಡಿ, ಸರ್ಕಾರವು ಜಾತಿಗಳನ್ನು ಒಡೆದು ಆಳುವ ಸಂಚು ಮಾಡುತ್ತಿದೆ, ಮೀಸಲಾತಿಯನ್ನು ಸರಿಪಡಿಸದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ನಾಶವಾಗಲಿದೆ ಎಂದು ಭವಿಷ್ಯ ನುಡಿದರು.
ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರಸ್ತೆ ಸಂಚಾರ ತಡೆ ನಡೆಸಿದರು. ಬಳಿಕ ಬಿ.ಎಂ.ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಶಕೀಲಾ ಭಾನು ಅವರಿಗೆ ಮನವಿ ಸಲ್ಲಿಸಿದರು.
ದಸಂಸ ಮುಖಂಡರಾದ ಸಿ.ತಮ್ಮಣ್ಣಯ್ಯ, ಧನರಾಜ್, ಈರಾಜ್, ಪ್ರದೀಪ್, ಪಿ.ಮಹದೇವ್, ಸೋಮಶೇಖರ್, ಪಿ.ಪಿ.ಮಹದೇವ್, ಎಚ್.ಡಿ.ರಮೇಶ್, ಗಿರೀಶ್, ಚೆನ್ನಯ್ಯ, ಶಿವರಾಜ್, ರಾಜಣ್ಣ, ಹೇಮಂತ್, ಚೆಲುವರಾಜ್, ಜಗದೀಶ್, ಕಾಮರಾಜ್, ಚನ್ನಬಸವ, ವೆಂಕಟೇಶ್, ಸ್ವಾಮಿ ನಂದಿಪುರ, ದೇವೇಂದ್ರ, ಮಂಜು ಆಯತನಹಳ್ಳಿ, ಗೋಪಾಲ್, ಆರ್.ಡಿ.ಮಹದೇವ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net