ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಸುನಂದಾ, ಪುಷ್ಪಲತಾ, ಕಮಲಾಕ್ಷಿ, ಚಂದ್ರಿಕಾ, ರಾಣಿ, ಜಲಜಾ, ಹೇಮಾವತಿ, ಎನ್.ಕೆ.ಬಾಲಾಜಿರಾವ್, ಧನಂಜಯ ಇನ್ನಿತರರಿದ್ದರು.
ಮೈಸೂರು: ಗಣತಂತ್ರ ಉಳಿಸಿ, ಸಾರ್ವಭೌಮತೆ ರಕ್ಷಿಸಿ, ಸಮಾನತೆಗಾಗಿ ಹೋರಾಡಿ, ಲಿಂಗ ತಾರತಮ್ಯ ವಿರೋಧಿಸಿ, ಜೀವನೋಪಾಯದ ಮೇಲಿನ ದಾಳಿ ವಿರೋಧಿಸಿ, ದುಡಿಯುವ ಮಹಿಳೆಯರ ಹಕ್ಕುಗಳು ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಮಹಿಳಾ ದಿನ ಮೂಲ ಚರಿತ್ರೆಯನ್ನು ರಕ್ಷಿಸುವ ಪಣತೊಡುತ್ತ ಶೋಷಣೆ ಮತ್ತು ದಬ್ಬಾಳಿಕೆ ವಿರುದ್ಧ ನಡೆದ ಹೋರಾಟ ನೆನೆಯುವ ದಿನವಾಗಿದೆ. ಮಹಿಳೆಯರ ಮೇಲಿನ ದಬ್ಬಾಳಿಕೆಗೆ ಕಾರಣ ಕೊನೆಗೊಳಿಸುವ ನಿಟ್ಟಿನಲ್ಲಿ ಹಾಗೂ ಪರ್ಯಾಯಗಳ ಇರುವಿಕೆ ಮತ್ತು ಅದನ್ನು ಗಳಿಸಲು ಒಗ್ಗೂಡಿ ಹೋರಾಡುವ ಅವಶ್ಯಕತೆ ಇದೆ ಎಂದು ಪ್ರತಿಭಟನಾಕಾರರು ಹೇಳಿದರು.
ಎಲ್ಲರಿಗೂ ಉದ್ಯೋಗ ಸೃಷ್ಟಿಯಾಗಬೇಕು. ಎಲ್ಲ ಮಹಿಳಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಮತ್ತು ಸಮಾನ ವೇತನ ಜಾರಿ ಆಗಬೇಕು. ಮಹಿಳೆಯರ ವೇತನ ರಹಿತ ಕೆಲಸ ಗುರುತಿಸಬೇಕು. ವೇತನ ನಿಗದಿಗಾಗಿ, ಸಮಾನ ಕೆಲಸಕ್ಕೆ ಸಮಾನ ವೇತನ ಕಡ್ಡಾಯವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಎಲ್ಲ ಯೋಜನಾ ಕೆಲಸಗಾರರನ್ನು ಉದ್ಯೋಗಿಗಳೆಂದು ಗುರುತಿಸಬೇಕು. ದುಡಿಯುವ ಮಹಿಳಾ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳಿಗೆ ಮಾತೃತ್ವ ರಜೆ ಹಾಗೂ ಆರೈಕೆ ಕೊಠಡಿ ಸೌಲಭ್ಯ ಕಲ್ಪಿಸಬೇಕು. ಮಹಿಳೆಯರಿಗೆ ತಿಂಗಳಲ್ಲಿ ಎರಡು ದಿನ ಮುಟ್ಟಿನ ರಜೆ ಪ್ರತ್ಯೇಕ ವಿರಾಮ ಕೊಠಡಿಗಳು ಮತ್ತು ಶೌಚಗೃಹ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಪೋಕ್ಸೋ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಅದಕ್ಕಾಗಿ ಆಂತರಿಕ ಹಾಗೂ ಸ್ಥಳೀಯ ಸಮಿತಿ ರಚಿಸಬೇಕು. ಮಹಿಳೆಯರ ಮತ್ತು ಮಕ್ಕಳನ್ನು ರಾತ್ರಿ ವೇಳೆ ಮತ್ತು ಅಪಾಯಕಾರಿ ಕೆಲಸಗಳಲ್ಲಿ ದುಡಿಸುವುದನ್ನು ನಿಷೇಧಿಸಬೇಕು. ದೌರ್ಜನ್ಯ ತಡೆಗಟ್ಟುವ ಕ್ರಮಗಳು ಮತ್ತು ಕಠಿಣ ಶಿಕ್ಷೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು. ನ್ಯಾ.ವರ್ಮಾ ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ದ್ವೇಷ ಅಪರಾಧ ಹೇಳಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳಬೇಕು. ಪಿಡಿಎಸ್ ವ್ಯವಸ್ಥೆಯನ್ನು ಸಾರ್ವತ್ರಿಕ ಗೊಳಿಸಬೇಕು. ಶ್ರೀಮಂತರ ಮೇಲೆ ತೆರಿಗೆ ವಿಧಿಸಬೇಕು. ಸಾರ್ವಜನಿಕ ಸೇವೆಗಳಿಗೆ ಆರೋಗ್ಯ ಹಾಗೂ ಶಿಕ್ಷಣಕ್ಕೆ ಅನುದಾನ ನೀಡಬೇಕು.
ಗ್ರಾಮೀಣ ಸಂಜೀವಿನಿಯಾದ ನರೇಗಾ ಉಳಿವಿಗಾಗಿ, ನಗರಕ್ಕೂ ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ವರ್ಷದಲ್ಲಿ 200 ದಿನ ಕೆಲಸ, 600 ರೂ. ಕೂಲಿ ನೀಡಬೇಕು. ಮಹಿಳಾ ಕೂಲಿಕಾರ ವಿರೋಧಿ ವಿಬಿ ಗ್ರಾಮ್ ಜಿ ವಾಪಸಾಗಬೇಕು. ಮರ್ಯಾದೆಗೇಡು ಹತ್ಯೆ ತಡೆಗಾಗಿ ತಕ್ಷಣವೇ ವಿಶೇಷ ಕಾನೂನು ಜಾರಿಗೊಳಿಸಬೇಕು. ಯೋಜನಾ ಕಾರ್ಮಿಕರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರಿಗೂ ರಜೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.