ಚಿನ್ನತಂಬಿ ಪ್ರಕರಣ ಸಿಬಿಐಗೆ ಒತ್ತಾಯಿಸಿ ಪ್ರತಿಭಟನೆ

ಚಿನ್ನದ ಗಿರವಿ ಹಗರಣವನ್ನು ಸಿಬಿಐಗೆ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಕೆಆರ್‌ಎಸ್ ಪಕ್ಷದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ರವಿಕೃಷ್ಣಾ ರೆಡ್ಡಿ,  ಸೋಮಸುಂದರ್,  ರವಿಕುಮಾರ್ ಇನ್ನಿತರರಿದ್ದರು.
ಚಿನ್ನದ ಗಿರವಿ ಹಗರಣವನ್ನು ಸಿಬಿಐಗೆ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಕೆಆರ್‌ಎಸ್ ಪಕ್ಷದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ರವಿಕೃಷ್ಣಾ ರೆಡ್ಡಿ, ಸೋಮಸುಂದರ್, ರವಿಕುಮಾರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಆರ್‌ಎಸ್ ಪಕ್ಷದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
ಮೈಸೂರು: ನೂರಾರು ಗ್ರಾಹಕರಿಗೆ ವಂಚಿಸಿರುವ ಸುಂದರ್‌ರಾಜ್ ಅಲಿಯಾಸ್ ಚಿನ್ನತಂಬಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ವಂಚಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್)ಪಕ್ಷದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಕಳೆದ ಒಂದು ದಶಕದಿಂದ ನಡೆಯುತ್ತಿರುವ ಕೋಟ್ಯಂತರ ಮೌಲ್ಯದ ಚಿನ್ನದ ಗಿರವಿ ಹಗರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಪ್ರಭಾವಿಗಳು ನೇರವಾಗಿ ಶಾಮೀಲಾಗಿದ್ದಾರೆ. 
ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ. ದೂರುದಾರರ ಅರ್ಜಿಗಳನ್ನು ತಿರುಚಿರುವ ಸಿಸಿಬಿ ಪೊಲೀಸರ ನಡೆಯೇ ಇದಕ್ಕೆ ಸಾಕ್ಷಿ. ಹೀಗಾಗಿ ತಕ್ಷಣವೇ ಈ ಹಗರಣವನ್ನು ಸಿಬಿಐಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಆರೋಪಿ ಚಿನ್ನತಂಬಿ ಮತ್ತು ಆತನ ಬೆಂಬಲಿಗರು ಬೇನಾಮಿ ಹೆಸರಿನಲ್ಲಿ ಮಾಡಿರುವ ಎಲ್ಲ ಸ್ಥಿರ ಮತ್ತು ಚರಾಸ್ತಿ, ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು. ವಶಪಡಿಸಿಕೊಂಡ ಆಸ್ತಿಗಳನ್ನು 60 ದಿನಗಳ ಮಿತಿಯೊಳಗೆ ನಿಯೋಜಿತ ನ್ಯಾಯಾಲಯದ ಅನುಮತಿ ಪಡೆದು ಶೀಘ್ರವಾಗಿ ಹರಾಜು ಹಾಕಬೇಕು. 
ಸಂತ್ರಸ್ತ ಠೇವಣಿದಾರರಿಗೆ ಮತ್ತು ಗ್ರಾಹಕರಿಗೆ ಹಣ ಅಥವಾ ಚಿನ್ನದ ಮೌಲ್ಯ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.
ಆರೋಪಿ ಚಿನ್ನತಂಬಿಗೆ ರಕ್ಷಣೆ ನೀಡಿ, ಸಂತ್ರಸ್ತರ ದೂರುಗಳನ್ನು ಸರಿಯಾದ ರೀತಿಯಲ್ಲಿ ದಾಖಲಿಸಿಕೊಳ್ಳದೆ, ತಾವೇ ನಕಲಿ ಮಾದರಿಯ ದೂರು ಸೃಷ್ಟಿಸಿ ಪ್ರಭಾವಿಗಳನ್ನು ರಕ್ಷಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ಇಲಾಖಾ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು. 
ಒಂದು ವೇಳೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ, ನೊಂದವರಿಗೆ ತ್ವರಿತ ನ್ಯಾಯ ದೊರಕಿಸಿಕೊಡುವಲ್ಲಿ ಮತ್ತು ಕಾಯ್ದೆಯಡಿ ಶಾಸನಬದ್ಧ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲರಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ, ರಾಜ್ಯ ಉಪಾಧ್ಯಕ್ಷ ಸೋಮಸುಂದರ್, ಮುಖಂಡರಾದ ರವಿಕುಮಾರ್, ಶ್ರೀನಿವಾಸ ಶಾಸ್ತ್ರಿ, ನಾಗೇಂದ್ರ, ರವೀಂದ್ರ, ನಾಗರಾಜ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net