ತಂಬಾಕು ಬೆಳೆಗಾರರಿಂದ ಪ್ರತಿಭಟನೆ

ಹುಣಸೂರು ತಾಲೂಕು ಕಟ್ಟೆಮಳಲವಾಡಿ ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಲೆ ಕುಸಿತದಿಂದ ಆಕ್ರೋಶಿತರಾದ ರೈತರು ತಂಬಾಕು ಮಾರುಕಟ್ಟೆ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಲೆ ಕುಸಿತದಿಂದ ಆಕ್ರೋಶಿತರಾದ ರೈತರು ತಂಬಾಕು ಮಾರುಕಟ್ಟೆ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಲೆ ತೀವ್ರ ಕುಸಿತ ಹಿನ್ನೆಲೆ
  • ಮಾರುಕಟ್ಟೆ ಬಂದ್ ಮಾಡಿ ಆಕ್ರೋಶ
ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮತ್ತೆ ತಂಬಾಕು ಬೆಲೆ ತೀವ್ರ ಕುಸಿತದಿಂದ ಕುಪಿತಗೊಂಡ ತಂಬಾಕು ಬೆಳೆಗಾರರು ಬುಧವಾರ ಮೂರು ತಂಬಾಕು ಹರಾಜು ಮಾರುಕಟ್ಟೆಯನ್ನು ಬಂದ್ ಮಾಡಿ ಕಚೇರಿ ಹಾಗೂ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಾರುಕಟ್ಟೆ 2 ಮತ್ತು 3 ಹಾಗೂ 6/4ಗಳಲ್ಲಿ ಹಿಂದಿನ ದಿನ ಕೆ.ಜಿ. ತಂಬಾಕಿಗೆ 270-280 ರೂ. ನೀಡಿದ್ದರು. ಬುಧವಾರ 190-205 ರೂ.ವರೆಗೆ ಇಳಿಯಿತು. ಇದ್ದಕ್ಕಿದ್ದಂತೆ 50-70 ರೂ.ಗಳ ಕುಸಿತ ರೈತರನ್ನು ಕಂಗಾಲಾಗಿಸಿತು. ಒಮ್ಮೆಲೆ ಆಕ್ರೋಶಿತರಾದ ಬೆಳೆಗಾರರು ತಂಬಾಕು ಖರೀದಿ ಕಂಪನಿಗಳ ಬೈಯರ್ಸ್‌ ಹಾಗೂ ತಂಬಾಕು ಮಂಡಳಿ ಅಧಿಕಾರಿಗಳ ವಿರುದ್ಧ ಹರಿಹಾಯ್ದು ಹರಾಜನ್ನು ನಿಲ್ಲಿಸುವಂತೆ ಆಗ್ರಹಿಸಿ ಮಾರುಕಟ್ಟೆಯಿಂದ ಹೊರಬಂದರು.
ವಾಹನ ಸಂಚಾರ ತಡೆ: ಮಾರುಕಟ್ಟೆ ಬಂದ್ ಮಾಡಿಸಿದ ನೂರಾರು ರೈತರು ನಂತರ ಮಾರುಕಟ್ಟೆ ಮುಂಭಾಗದ ಹುಣಸೂರು-ಕೆ.ಆರ್.ನಗರ ಮುಖ್ಯರಸ್ತೆಯನ್ನು ಬಂದ್ ಮಾಡಿ ತೆಂಗಿನಗರಿ, ಹೊಗೆಸೊಪ್ಪು ಪುಡಿಗಳನ್ನು ಒಂದುಗೂಡಿಸಿ ಬೆಂಕಿ ಹಾಕಿದರು. ಅಲ್ಲದೆ ಕೇಂದ್ರ-ರಾಜ್ಯ ಸರ್ಕಾರ, ತಂಬಾಕು ಮಂಡಳಿ, ತಂಬಾಕು ಖರೀದಿ ಕಂಪನಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಪೊಲೀಸರು ರೈತರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿದರು. ಮತ್ತೆ ಹರಾಜು ಮಾರುಕಟ್ಟೆ ಪ್ರವೇಶಿಸಿದ ರೈತರು ಮಂಡಳಿ ಅಧಿಕಾರಿಗಳೊಂದಿಗೆ ಬೆಲೆ ಇಳಿಕೆಯ ಬಗ್ಗೆ ವಾಗ್ವಾದ ನಡೆಸಿದರು. ಆಕ್ರೋಶಿತರಾದ ಬೆಳೆಗಾರರು ಒಮ್ಮೆಲೆ ಬೆಲೆ ಇಳಿಕೆಗೆ ಕಾರಣವೇನೆಂದು ಪ್ರಶ್ನಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮೂರು ಹರಾಜು ಮಾರುಕಟ್ಟೆಗಳಿಗೆ ಹಾಗೂ ಹರಾಜು ಅಧೀಕ್ಷಕರ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಹಾಗೂ ಎಲ್ಲ ನೌಕರರನ್ನು ಹೊರ ಕಳುಹಿಸಿ ಕಚೇರಿಯ ಗೇಟ್ ಹಾಗೂ ಮುಖ್ಯ ದ್ವಾರಕ್ಕೂ ಬೀಗ ಜಡಿದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಗಾವಡಗೆರೆ ಆರ್‌ಎಸ್‌ಎಸ್‌ಎನ್ ಅಧ್ಯಕ್ಷ ಸಣ್ಣೇಗೌಡ, ರೈತ ಸಂಘದ ಅಗ್ರಹಾರರಾಮೇಗೌಡ, ತೊಂಡಾಳು ಪ್ರಕಾಶ್, ವಿವಿಧ ಗ್ರಾಮಗಳ ತಂಬಾಕು ಬೆಳೆಗಾರರಾದ ಸ್ವಾಮಿಗೌಡ, ಈರೇಗೌಡ, ಧನಂಜಯ್, ಲೋಕೇಶ್,ಸೋಮಶೇಖರ್, ಮಹೇಂದ್ರ, ಸತೀಶ, ಅಜಿತ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ರೈತರು ಭಾಗವಹಿಸಿದ್ದರು.
ಹಿರಿಯ ಅಧಿಕಾರಿಗಳಿಗೆ ಮಾಹಿತಿ; ಈವರೆಗೆ 60 ಮಿಲಿಯನ್ ಕೆ.ಜಿ.ತಂಬಾಕು ಮಾರಾಟವಾಗಿದೆ. ಇನ್ನೂ ರೈತರ ಬಳಿ 25-30 ಮಿಲಿಯನ್ ಕೆ.ಜಿಯಷ್ಟು ತಂಬಾಕಿದೆ. ಹರಾಜಿನಲ್ಲಿ ಐಟಿಸಿ, ಜಿಪಿಐ, ಪಿಎಸ್‌ಎಸ್‌ಎಚ್, ಡೆಕ್ಕನ್, ಪಿಟಿಪಿ, ಅಲಯನ್ಸ್ ಕಂಪನಿಗಳು ಮಾತ್ರ ಭಾಗವಹಿಸುತ್ತಿವೆ. ಬೆಳವಣಿಗೆಗಳ ಬಗ್ಗೆ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹರಾಜು ಅಧೀಕ್ಷಕ ಸಿದ್ದರಾಜು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net