ರೈತ, ದಲಿತ ಸಂಘಟನೆಗಳಿಂದ ಧರಣಿ

ಹುಣಸೂರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದ ಮುಂಭಾಗ ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳ ಆರಂಭವನ್ನು ವಿರೋಧಿಸಿ ರೈತರು ವಿವಿಧ ಪ್ರಗತಿಪರ ಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಹೊಸೂರು ಕುಮಾರ್, ವಿಷಕಂಠಪ್ಪ, ಧನಂಜಯ, ಅತ್ತಿಕುಪ್ಪೆ ರಾಮಕೃಷ್ಣ, ಚಿಕ್ಕಹುಣಸೂರು ರಾಜು, ಸ್ವಾತಿ ಇತರರಿದ್ದಾರೆ.
ಹುಣಸೂರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದ ಮುಂಭಾಗ ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳ ಆರಂಭವನ್ನು ವಿರೋಧಿಸಿ ರೈತರು ವಿವಿಧ ಪ್ರಗತಿಪರ ಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಹೊಸೂರು ಕುಮಾರ್, ವಿಷಕಂಠಪ್ಪ, ಧನಂಜಯ, ಅತ್ತಿಕುಪ್ಪೆ ರಾಮಕೃಷ್ಣ, ಚಿಕ್ಕಹುಣಸೂರು ರಾಜು, ಸ್ವಾತಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ಪ್ರಯತ್ನಕ್ಕೆ ವಿರೋಧ
ಹುಣಸೂರು: ರಾಜ್ಯ ಸರ್ಕಾರ ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕಾರ್ಯಕ್ಕೆ ಮುಂದಾಗಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್(ಎಐಡಿಎಸ್‌ಒ), ರೈತಸಂಘ, ದಲಿತ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಮಂಗಳವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕೊಡಗು ಹೊಸೂರು ಕಾಲನಿ ಗ್ರಾಮಸ್ಥರು ರಾಜ್ಯ ಸರ್ಕಾರ ಅನುಸರಿಸುತ್ತಿರುವ ಬಡಮಕ್ಕಳ ಶಿಕ್ಷಣ ವಿರೋಧಿ ನೀತಿಗೆ ಧಿಕ್ಕಾರ, ನಮ್ಮ ಶಾಲೆ ನಮ್ಮ ಹಕ್ಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆದರು.
ಈ ವೇಳೆ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕೆಪಿಎಸ್ ಮ್ಯಾಗ್ನೆಟ್ ಶಾಲೆ ಸ್ಥಾಪನೆ ಬಡಮಕ್ಕಳ ಶಿಕ್ಷಣ ಕಸಿಯಬೇಕೆನ್ನುವುದೇ ಆಗಿದೆ. ಕೆಪಿಎಸ್ ಶಾಲೆ ಸ್ಥಾಪಿಸಲಿ. ಆದರೆ ಅಕ್ಕಪಕ್ಕದ ಶಾಲೆಗಳ ವಿಲೀನಕ್ಕೆ ನಾವು ಒಪ್ಪುವುದಿಲ್ಲ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಮೂಲಸೌಕರ್ಯವನ್ನು ಕಲಿಸಬೇಕಾದ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನವಾಗಿ ವಿಲೀನದ ಕೃತ್ಯ ನಡೆಸಿದೆ. ಬಡಮಕ್ಕಳು ವಿದ್ಯಾವಂತರಾಗಬಾರದೆನ್ನುವುದೇ ಸರ್ಕರದ ನಿರ್ಧಾರವಾಗಿದೆಯೇ? ಶಿಕ್ಷಣ ಇಲಾಖೆ ಈ ಯೋಜನೆಯನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲವೆಂದು ಎಚ್ಚರಿಸಿದರು.
ರೈತಮುಖಂಡ ಚಿಕ್ಕಹುಣಸೂರು ರಾಜು, ದಲಿತ ಮುಖಂಡ ಅತ್ತಿಕುಪ್ಪೆ ರಾಮಕೃಷ್ಣ ಮಾತನಾಡಿ, ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗಳಿಂದ ಆರ್ಥಿಕ ಸಹಕಾರ ಮತ್ತು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳಿಂದ ಸಾಲಸೌಲಭ್ಯಗಳನ್ನು ಪಡೆದು ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹುನ್ನಾರ ನಡೆಸಿರುವುದು ಖಂಡನೀಯವೆಂದರು.
ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ ಮಾತನಾಡಿ, ಸರ್ಕಾರ ತನ್ನ ಮೂಲಕರ್ತವ್ಯವನ್ನು ಮರೆತು ಜನರನ್ನು ಕತ್ತಲೆಗೆ ತಳ್ಳುವ ಹೀನಕಾರ್ಯಕ್ಕೆ ಕೈ ಹಾಕಿದೆ. ಕಳೆದ ವರ್ಷ ಹೊಂಗನೂರಿನ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸುತ್ತಮುತ್ತಲಿನ 7 ಹಳ್ಳಿ ಶಾಲೆಯನ್ನು ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವಿಲೀನಗೊಳಿಸಲು ಸರ್ಕಾರ ಆದೇಶಿಸಿತ್ತು. ಹಾಗೆಯೇ ಅರಸೀಕರೆ ತಾಲೂಕಿನಲ್ಲಿ 5 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಿ ಸುತ್ತಮುತ್ತಲ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನುವಿಲೀನಗೊಳಿಸಲು ಸರ್ಕಾರ ವಾರದ ಹಿಂದೆ ಆದೇಶ ಹೊರಡಿಸಿದೆ. ಗ್ರಾಮಸ್ಥರು ಈ ಕುರಿತು ಎಚ್ಚರವಹಿಸಿ ತಮ್ಮೂರಿನ ಶಾಲೆಗಳನ್ನು ಉಳಿಸಿಕೊಳ್ಳಬೇಕೆಂದು ಕೋರಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲವೆಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಉಪಾಧ್ಯಕ್ಷ ವಿಷಕಂಠಪ್ಪ, ಧನಂಜಯ, ಎಐಡಿಎಸ್‌ಒ ಜಿಲ್ಲಾ ಸಮಿತಿ ಸದಸ್ಯ ಎಸ್.ಟಿ.ಸುನಿಲ್, ಎಸ್‌ಎಫ್‌ಐನ ಜೀವನ್, ರಂಜು, ಕೊಡಗು ಹೊಸೂರು ಕಾಲನಿಯ ಮಂಜೇಗೌಡ, ರಾಜೇಗೌಡ, ಉಮ್ಮತ್ತೂರಿನ ರವಿ, ಭಾಸ್ಕರ್, ಅಂಬೇಡ್ಕರ್ ನಗರದ ಜೀವನ್, ಮಹದೇಔ, ಹರೀಶ್, ಕಟೆಮಳಲವಾಡಿ ಕೊಪ್ಪಲು ಗ್ರಾಮದ ದೇವರಾಜ್, ಉಜನಿಗೌಡ ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net