ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿರುವುದು ಎಷ್ಟು ಸಮಂಜಸ?
ಮೈಸೂರು: ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಪಾರಂಪರೆ ಉಳಿಸುವ ಜವಾಬ್ದಾರಿ ಸರ್ಕಾರದ ಹೊಣೆ. ಆದರೆ, ಬೇಲಿಯೇ ಎದ್ದು ಹೊಲ ಮೇಯುವಂತೆ ಆಗಿದೆ. ಬೆಟ್ಟದ ಸುತ್ತ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಕಾಮಗಾರಿ ಮಾಡುವ ಮುನ್ನ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಆದರೆ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಈ ಕೆಲಸ ಮಾಡಿಲ್ಲ. ಇವರ ತಾಳಕ್ಕೆ ಸಚಿವರು, ಸಂಸದರು, ಶಾಸಕರು ಕುಣಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ಇತಿಹಾಸ ತಜ್ಞರು, ಹೋರಾಟಗಾರರು, ಪರಿಸರವಾದಿಗಳು, ರಾಜಮನೆತನದವರು ವಿರೋಧಕ್ಕೂ ಬಗ್ಗದೆ ಪ್ರಸಾದ ಯೋಜನೆಯ ದಾಸೋಹ ಭವನದ ಹೆಸರಿನಲ್ಲಿ ಹಣ ಲೂಟಿ ಮಾಡಿ ಪರಿಸರ ಹಾಳು ಮಾಡುತ್ತಿದ್ದಾರೆ. ಪಾರಂಪರಿಕ ತಜ್ಞರಿದ್ದರೂ ಅವರಿಗೆ ಬಿಡಿಗಾಸಿನ ಬೆಲೆ ಇಲ್ಲದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿರುವುದು ಎಷ್ಟು ಸಮಂಜಸ? ಪ್ರಾಧಿಕಾರದ ಅಧ್ಯಕ್ಷರ ತೀರ್ಮಾನವೇ ಅಂತಿಮವಾದರೆ ಜನಪ್ರತಿನಿಧಿಗಳಿಗೆ ಕೆಲಸವಾದರೂ ಏನು? ಎಂದು ಪ್ರಶ್ನಿಸಿದರು.
ಈಗಾಗಲೇ ಬೆಟ್ಟ ಸುತ್ತಮುತ್ತ ಭೂ ಕಬಳಿಕೆ ಮಾಡಿ ಮನೆ ನಿರ್ಮಾಣ ಮಾಡಲಾಗಿದೆ. ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ರಿಯಲ್ ಎಸ್ಟೇಟ್ ಕಚೇರಿಯಾಗಿದೆ. ಅರಣ್ಯ ಇಲಾಖೆಯವರು ತಮ್ಮ ಕೆಲಸದಲ್ಲಿ ವಿಫಲವಾಗಿದ್ದಾರೆ. ಈಗಾಗಲೇ ಕಾಡು ಪ್ರಾಣಿಗಳು ಹೆಚ್ಚಾಗಿದ್ದು ಅಧಿಕಾರಿಗಳು ಇದನ್ನು ಗಮನ ಹರಿಸುತ್ತಿಲ್ಲ ಎಂದು ದೂರಿದರು.
ಬೆಟ್ಟದ ಸಂಚಾರ ಮಾರ್ಗದ ಮಧ್ಯೆ ರಸ್ತೆ ಅಲ್ಲಲ್ಲಿ ಕುಸಿಯುತ್ತಿದೆ. ಬೆಟ್ಟದ ವಾಸ್ತವಾಂಶವನ್ನು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಾರದೆ ಅವೈಜ್ಞಾನಿಕ ಕಾಮಗಾರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಅಧಿಕಾರಿಗಳು ಬ್ರೋಕರ್‌ಗಳ ಸಹಾಯದಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಮೆಟ್ಟಿಲು ಮೂಲಕ ಬರುವ ಭಕ್ತರು ಕುಡಿಯುವ ನೀರು, ಶೌಚಗೃಹ ಇಲ್ಲದೆ ಪರದಾಡುತ್ತಿದ್ದು ಸಮಸ್ಯೆಗಳು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ ಎಂದು ಹರಿಹಾಯ್ದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಸಾಯಿ ಚಾಮರಾಜು, ಪ್ಯಾಲೇಸ್ ಬಾಬು, ಹರೀಶ್ ಚಿನ್ನಪ್ಪ, ಶಿವುಗೌಡ, ಮಾದಪ್ಪ ಸುನೀಲ್, ಗೋಪಿ, ಗೈಡ್ ಸ್ವಾಮಿ, ಚೆಲುವರಾಯಸ್ವಾಮಿ, ಹೊಣಕೆರೆ ಸ್ವಾಮಿ ಇತರರಿದ್ದರು.