ಮೈಸೂರು ಅಭಿವೃದ್ಧಿ ಪ್ರಾಧಿಕಾರ ಖಾಸಗಿಯವರಿಗೆ ನೀಡಿದ್ದನ್ನು ಖಂಡಿಸಿ ಪ್ರತಿಭಟನೆ
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕಟ್ಟಡವನ್ನು ಖಾಸಗಿಯವರಿಗೆ ನೀಡಬಾರದು ಎಂದು ಆಗ್ರಹಿಸಿ ಇಟ್ಟಿಗೆಗೂಡು ಹಾಗೂ ನಜರ್‌ಬಾದ್ ನಿವಾಸಿಗಳು ಶುಕ್ರವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
Published on:
Copied
Follow Us
ಮೈಸೂರು: ಮೈಸೂರು ಮೃಗಾಲಯ ಬಳಿಯಲ್ಲಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಕಟ್ಟಡವನ್ನು ಖಾಸಗಿಯವರಿಗೆ ನೀಡಬಾರದು ಎಂದು ಆಗ್ರಹಿಸಿ ಇಟ್ಟಿಗೆಗೂಡು ಹಾಗೂ ನಜರ್‌ಬಾದ್ ನಿವಾಸಿಗಳು ಶುಕ್ರವಾರ ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರಾಧಿಕಾರ ನಿರ್ಮಿಸಿರುವ ಕಟ್ಟಡದ ಜಾಗದಲ್ಲಿ ಈ ಹಿಂದೆ ಸರ್ಕಾರಿ ಮಾಧ್ಯಮಶಾಲೆ ಇತ್ತು. ಮಕ್ಕಳ ಕೊರತೆಯಿಂದ ಆ ಶಾಲೆಯನ್ನು ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಲಾಯಿತು. ಹಲವು ವರ್ಷಗಳ ನಂತರ ಶಾಲೆಯ ಕಟ್ಟಡವನ್ನು ಕೆಡವಿ ನೂತನ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಯಿತು. ಸದರಿ ಕಟ್ಟಡದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಪ್ರಾರಂಭಿಸಲು ಉದ್ದೇಶಿಸಲಾಗಿತ್ತು. ಅದರೆ, ಇದೀಗ ಈ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಖಾಸಗಿಯವರಿಗೆ ನೀಡಲು ಪ್ರಾಧಿಕಾರ ಮುಂದಾಗಿರುವುದು ಸರಿಯಲ್ಲ. ಪ್ರಾಧಿಕಾರ ಕೂಡಲೇ ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲೆಯ ಜಾಗದಲ್ಲಿ ನಿರ್ಮಾಣವಾಗಿರುವ ಕಟ್ಟಡವು ಶೈಕ್ಷಣಿಕ ಉದ್ದೇಶಕ್ಕೆ ಅಥವಾ ಸರ್ಕಾರದ ಉದ್ದೇಶಕ್ಕೆ ಬಳಕೆ ಮಾಡಿದರೆ ಉತ್ತಮ. ಆದರೆ, ಖಾಸಗಿಯವರಿಗೆ ಕಟ್ಟಡ ನೀಡುವುದು ಸರಿಯಲ್ಲ. ಒಂದು ಬಾರಿ ಖಾಸಗಿಯವರಿಗೆ ನೀಡಿದರೆ ಆ ಕಟ್ಟಡದ ಸಂರಕ್ಷಣೆ ಮಾಡುವುದು ಸವಾಲಿನ ವಿಚಾರವಾಗುತ್ತದೆ. ಹಾಗಾಗಿ ಕೂಡಲೇ ಪ್ರಾಧಿಕಾರ ತನ್ನ ನಿರ್ಧಾರ ಬದಲಾಯಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಗೋಕುಲ್ ಗೋವರ್ಧನ್, ಎಸ್.ವಾಣೀಶ್ ಕುಮಾರ್, ಜೆ.ಹರೀಶ್, ಆರ್.ಶಂಕರ, ಅರುಣ್ ಕುಮಾರ್, ರಾಜೇಶ್, ಪ್ರಶಾಂತ್, ರವಿ, ಹೇಮ, ರವಿಕಿರಣ್ ಹಾಗೂ ಇತರರು ಪಾಲ್ಗೊಂಡಿದ್ದರು.