ವಿದ್ಯಾರ್ಥಿಗಳಲ್ಲಿ ವೃತ್ತಿಪರ ಅರ್ಹತೆ ಅತ್ಯವಶ್ಯಕ: ಶಾಸಕ ಡಿ.ರವಿಶಂಕರ್ ಸಲಹೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ   ಕಾರ್ಯಗಾರವನ್ನು ಡಿ.ರವಿಶಂಕರ್ ಉದ್ಘಾಟಿಸಿದರು. ಪ್ರೊ.ಅಶೋಕ್‌ಕುಮಾರ್ ಗಾಬಾ, ಅಮಿತ್‌ಶರ್ಮಾ, ಎಸ್.ವಿ.ಶ್ರೀಕಾಂತ್, ಪ್ರೊ.ಎ.ಪಿ.ಜ್ಞಾನಪ್ರಕಾಶ್, ಪ್ರೊ.ಎಸ್.ಕೆ.ನವೀನ್‌ಕುಮಾರ್, ಡಾ.ಸಿ.ಎಸ್.ಆನಂದ್‌ಕುಮಾರ್, ಪ್ರೊ.ಎಂ.ರಾಮನಾಥಂ ನಾಯ್ಡು, ಡಾ.ಎ.ಆನಂದ್‌ಗೌಡ, ಪ್ರೊ. ಎಸ್ .ನಿರಂಜನ್‌ರಾಜ್ ಇತರರು ಇದ್ದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಗಾರವನ್ನು ಡಿ.ರವಿಶಂಕರ್ ಉದ್ಘಾಟಿಸಿದರು. ಪ್ರೊ.ಅಶೋಕ್‌ಕುಮಾರ್ ಗಾಬಾ, ಅಮಿತ್‌ಶರ್ಮಾ, ಎಸ್.ವಿ.ಶ್ರೀಕಾಂತ್, ಪ್ರೊ.ಎ.ಪಿ.ಜ್ಞಾನಪ್ರಕಾಶ್, ಪ್ರೊ.ಎಸ್.ಕೆ.ನವೀನ್‌ಕುಮಾರ್, ಡಾ.ಸಿ.ಎಸ್.ಆನಂದ್‌ಕುಮಾರ್, ಪ್ರೊ.ಎಂ.ರಾಮನಾಥಂ ನಾಯ್ಡು, ಡಾ.ಎ.ಆನಂದ್‌ಗೌಡ, ಪ್ರೊ. ಎಸ್ .ನಿರಂಜನ್‌ರಾಜ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶೈಕ್ಷಣಿಕ ಜ್ಞಾನದೊಂದಿಗೆ ಕೌಶಲವನ್ನು ಬೆಳೆಸುವುದರಿಂದ ಯುವಜನರ ಉದ್ಯೋಗರ್ಹತೆ ಹೆಚ್ಚು
  • ಪದವಿ ಪಡೆದಿದ್ದರೆ ಸಾಲದು, ತಾಂತ್ರಿಕ ಯುಗಕ್ಕೆ ತಕ್ಕಂತೆ ಕೌಶಲ ಅಭಿವೃದ್ಧಿಗೊಳಿಸಿಕೊಂಡು ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು
ಮೈಸೂರು:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕೇವಲ ಪದವಿಗೆ ಸೀಮಿತವಾಗದೆ. ವಿದ್ಯಾರ್ಥಿಗಳು ಜೀವನದಲ್ಲಿ ಅಗತ್ಯವಾದ ಕೌಶಲ ಮತ್ತು ವೃತ್ತಿಪರ ಅರ್ಹತೆಗಳನ್ನು ಹೊಂದುವುದು ಅತ್ಯವಶ್ಯಕ ಎಂದು ಕೆಎಸ್‌ಒಯು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶಾಸಕ ಡಿ.ರವಿಶಂಕರ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಎನ್‌ಸಿವಿಇಟಿ ದ್ವಿ-ಮಾನ್ಯತೆ : ಕೆಎಸ್‌ಒಯುನಲ್ಲಿ ಕೌಶಲಾಭಿವೃದ್ಧಿ, ಮೌಲ್ಯಮಾಪನ, ಮತ್ತು ಪ್ರಮಾಣಪತ್ರ ನೀಡಿಕೆ ಕಾರ್ಯಗಳ ಅನುಷ್ಠಾನ ಕುರಿತು ಒಂದು ದಿನದ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಜ್ಞಾನದೊಂದಿಗೆ ಕೌಶಲವನ್ನು ಬೆಳೆಸುವುದರಿಂದ ಯುವಜನರ ಉದ್ಯೋಗರ್ಹತೆ ಹೆಚ್ಚುವುದಲ್ಲದೆ, ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಅವರು ಸಮರ್ಥವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಲು ಪದವಿ ಪಡೆದಿದ್ದರೆ ಸಾಲದು, ತಾಂತ್ರಿಕ ಯುಗಕ್ಕೆ ತಕ್ಕಂತೆ ಕೌಶಲ ಅಭಿವೃದ್ಧಿಗೊಳಿಸಿಕೊಂಡು ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಹಿಂದೆ ಪದವಿ ಪಡೆದರೆ ಸಾಕು ಯಾವ ಉನ್ನತ ಹುದ್ದೆಯನ್ನು ಬೇಕಾದರೂ ಪಡೆಯಬಹುದು ಎನ್ನುವ ಕಾಲ ಇತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕೇವಲ ಪದವಿ ಪಡೆದರು ಸಾಲದು, ಜೀವನ ರೂಪಿಸಿಕೊಳ್ಳಲು ಕೌಶಲವೂ ಅಗತ್ಯವಾಗಿದೆ ಎಂದು ಹೇಳಿದರು.
ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದು, ಯುವಜನಾಂಗವು ಶಿಕ್ಷಣದ ಮಹತ್ವ ಅರಿತು ಮುಂದೆ ಸಾಗಬೇಕು. ಕೃಷಿ,ಆರೋಗ್ಯ, ಕೈಗಾರಿಕಾ ಸೇರಿದಂತೆ ಹಲವು ಕ್ಷೇತ್ರದಲ್ಲಿ ಎಐ ಮೂಲಕ ಪ್ರಗತಿ ಸಾಧಿಸಲಾಗುತ್ತಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ದೇಶದ ಅಭಿವೃದ್ದಿಗೆ ಶಿಕ್ಷಣ ಮತ್ತು ಆರೋಗ್ಯ ಮುಖ್ಯವಾಗಿದ್ದು, ಇದರಿಂದಲ್ಲೇ ಕ್ರಾಂತಿಕಾರಿ ಬದಲಾವಣೆಗಳಾಗಲು ಸಾಧ್ಯ ಎನ್ನುವುದನ್ನು ಅರಿಯಬೇಕು ಎಂದರು.
ಕೆಎಸ್‌ಒಯು ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿಯಿಂದ (ಎನ್‌ಸಿವಿಇಟಿ)ದ್ವಿ-ಪ್ರಮಾಣಪತ್ರ ಪ್ರದಾನ ಸಂಸ್ಥೆಯಾಗಿ ಮಾನ್ಯತೆ ಪಡೆದಿದ್ದು, ಈ ಸಂಬಂಧ ಎನ್‌ಸಿವಿಇಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ದ್ವಿ-ಮಾನ್ಯತೆಯಡಿ ಕೌಶಲಾಧಾರಿತ ಕಾರ್ಯಕ್ರಮಗಳನ್ನು ರೂಪಿಸುವುದು, ಅನುಷ್ಠಾನಗೊಳಿಸುವುದು, ಮೌಲ್ಯಮಾಪನ ನಡೆಸುವುದು ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡುವ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಪಿ. ಜ್ಞಾನಪ್ರಕಾಶ್ ಮಾತನಾಡಿ, ಬದಲಾಗುತ್ತಿರುವ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣದ ಸ್ವರೂಪದಲ್ಲೂ ಬದಲಾವಣೆ ಅಗತ್ಯವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ಜತೆಗೆ ಪ್ರಾಯೋಗಿಕ ಜ್ಞಾನ ಮತ್ತು ಉದ್ಯೋಗಕ್ಕೆ ಪೂರಕವಾದ ಕೌಶಲಗಳನ್ನು ಒದಗಿಸುವ ಮೂಲಕ ಅವರ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ವಿಶ್ವವಿದ್ಯಾಲಯಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಿಶೇಷವಾಗಿ ಮುಕ್ತ ಮತ್ತು ದೂರ ಶಿಕ್ಷಣ (ಓಡಿಎಲ್) ವ್ಯವಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲಾಧಾರಿತ ತರಬೇತಿ ಮತ್ತು ವೃತ್ತಿಪರ ಅರ್ಹತೆಗಳನ್ನು ಪಡೆಯಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ಹೊಸದೆಹಲಿಯ ಎನ್‌ಸಿವಿಇಟಿ ಕಾರ್ಯಕಾರಿ ಸದಸ್ಯ ಪ್ರೊ. ಅಶೋಕ್‌ಕುಮಾರ್ ಗಾಬಾ,ಎನ್‌ಸಿವಿಇಟಿ ಹಿರಿಯ ಸಲಹೆಗಾರ ಅಮಿತ್‌ಶರ್ಮಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಎನ್‌ಸಿವಿಇಟಿ ನಿಯಮಾವಳಿ, ಕೌಶಲಾಭಿವೃದ್ಧಿ ವ್ಯವಸ್ಥೆ, ವೃತ್ತಿಪರ ಅರ್ಹತೆಗಳ ಅಭಿವೃದ್ಧಿ, ಮೌಲ್ಯಮಾಪನ ಹಾಗೂ ಪ್ರಮಾಣಪತ್ರ ಪ್ರದಾನ ಪ್ರಕ್ರಿಯೆಗಳ ಕುರಿತು ಮಾಹಿತಿ, ಮಾರ್ಗದರ್ಶನ ನೀಡಿದರು.
ಉದ್ಯೋಗಾರ್ಹತೆ ಮತ್ತು ವೃತ್ತಿಪರ ಶಿಕ್ಷಣ, ಎನ್‌ಸಿವಿಇಟಿ ಪಾತ್ರ ಮತ್ತು ಜವಾಬ್ದಾರಿಗಳು, ಓಡಿಎಲ್ ವ್ಯವಸ್ಥೆಗೆ ಅನುಗುಣವಾದ ಕೌಶಲ ಅರ್ಹತೆಗಳ ಅಭಿವೃದ್ಧಿ, ಬಹು-ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ಮೌಲ್ಯಮಾಪನ ವಿಧಾನಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಿತು.
ಎಆರ್‌ಟಿಜೆಎಸ್ ಸಿಇಒ ಎಸ್.ವಿ.ಶ್ರೀಕಾಂತ್, ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್.ಆನಂದ್‌ಕುಮಾರ್, ವಿವಿಧ ವಿಭಾಗಗಳ ಡೀನ್‌ರಾದ ಪ್ರೊ.ಎಂ.ರಾಮನಾಥಂ ನಾಯ್ಡು, ಡಾ.ಎ.ಆನಂದ್‌ಗೌಡ, ಸಿಐಕ್ಯೂಎ ನಿರ್ದೇಶಕ ಪ್ರೊ. ಎಸ್ .ನಿರಂಜನ್‌ರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net