ಮೈಸೂರು: ಯಾವಾಗಲೂ ಕಂಪ್ಯೂಟರ್ ಒಂದು ಸಾಧನವಷ್ಟೇ ಕಲಾವಿದನ ಕೌಶಲಕ್ಕೆ ಹೆಚ್ಚು ಆದ್ಯತೆ, ಮಹತ್ವ ಇದ್ದೇ ಇದೆ ಎಂದು ಅನಿಮೇಶನ್ ತಂತ್ರಜ್ಞ ಬಿ.ಎನ್.ವಿಚಾರ್ ಹೇಳಿದರು.
ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ)ದಲ್ಲಿ ಸೋಮವಾರ ಆಯೋಜಿಸಿದ್ದ ಶಿಲ್ಪಕಲೆ ಮತ್ತು ಮುದ್ರಣ ಕಲೆ ಕಾರ್ಯಾಗಾರ ಮತ್ತು ವಿದ್ಯಾರ್ಥಿಗಳಿಂದ ಶೈಕ್ಷಣಿಕ ಪ್ರವಾಸದಲ್ಲಿ ರಚಿಸಿದ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇತರ ಕಲಾವಿದರ ಕೃತಿಗಳನ್ನು ಗಮನಿಸಿ, ಪ್ರೋತ್ಸಾಹಿಸಿ. ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ದಿನವೂ ಗಮನಿಸುವುದರಿಂದ ಸಾಕಷ್ಟು ಕಲಿಯಬಹುದು, ಅದು ನಮ್ಮ ಅಹಂಕಾರವನ್ನು ತೊಡೆದುಹಾಕುತ್ತದೆ. ಹೊಸ ಕಲಿಕೆಗೆ ಪ್ರೇರೇಪಿಸುತ್ತದೆ ಎಂದು ಸಲಹೆ ನೀಡಿದರು.
ಅನಿಮೇಶನ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಾವಾದಲ್ಲಿ ಕಲಿತ ಜ್ಞಾನ ಅತ್ಯಂತ ಉಪಯುಕ್ತವಾಗಲಿದೆ. ಹೊಸತನ್ನು ಕಲಿಯುವ ಹಸಿವಿದ್ದಾಗ ಮಾತ್ರ ನಿಮಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತವೆ. ಯಾವುದೇ ಕ್ಷೇತ್ರದಲ್ಲಿ ಮೂಲಜ್ಞಾನ ಅತ್ಯಗತ್ಯ ಎಂದರು.
ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಪ್ರಸಾದ್ ಮಾತನಾಡಿ, ಕಾವಾ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಉತ್ತಮ ಚಾಪನ್ನು ಮೂಡಿಸಲು ಪ್ರಯತ್ನಿಸಿ. ಎಲ್ಲೆಡೆ ಕಾವಾ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಗೌರವವಿದೆ ಎಂದು ಹೇಳಿದರು.
ಆಡಳಿತಾಧಿಕಾರಿ ನಿರ್ಮಲಾ ಮಠಪತಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಕನಸನ್ನು ಹೊಂದುವುದು ಕಲಾಕ್ಷೇತ್ರದಲ್ಲಿ ಉತ್ತಮ ಸಾಧನೆಗೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಶಿಲ್ಪಕಲಾವಿದ ಉಲ್ಲಾಸ್ಕರ್ ಡೇ, ಮುದ್ರಣ ಕಲೆ ಪರಿಣಿತ ಜಿ.ಎಂ.ಮುತ್ತುರಾಜ್ ತಮ್ಮ ಅನುಭವವನ್ನು ಹಂಚಿಕೊಂಡರು. ಕಾವಾ ಶಿಲ್ಪಕಲೆ ವಿಭಾಗದ ಮುಖ್ಯಸ್ಥ ಕೆ.ರಾಘವೇಂದ್ರ, ಶೈಕ್ಷಣಿಕ ಸಂಯೋಜಕ, ಗ್ರಾಫಿಕ್ಸ್ ವಿಭಾಗದ ಮುಖ್ಯಸ್ಥ ಎ.ಪಿ.ಚಂದ್ರಶೇಖರ್ ಇದ್ದರು.
ಕಾವಾದ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಇತ್ತೀಚೆಗೆ ಹಂಪಿ ಮತ್ತು ಬಾದಾಮಿ ಪ್ರವಾಸದಲ್ಲಿ ರಚಿಸಿದ ಚಿತ್ರಗಳ ಪ್ರದರ್ಶನ ಮಾಡಲಾಯಿತು.