ಪ್ರಿ-ಡಯಾಬಿಟೀಸ್ : ನಿರ್ಲಕ್ಷ್ಯ ಬೇಡ, ಇದು ಮಧುಮೇಹದ ಮುನ್ಸೂಚನೆ

ಪ್ರಿ-ಡಯಾಬಿಟೀಸ್
ಪ್ರಿ-ಡಯಾಬಿಟೀಸ್
Published on
ಮೈಸೂರು: ಇಂದು ಭಾರತ ಹಾಗೂ ಪ್ರಪಂಚದಾದ್ಯಂತ 'ಪ್ರಿ-ಡಯಾಬಿಟೀಸ್' (ಮಧುಮೇಹ ಪೂರ್ವ ಹಂತ) ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಬೆಳೆಯುತ್ತಿದೆ. ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇದ್ದಕ್ಕಿದ್ದಂತೆ ಬರುತ್ತದೆ ಎಂದು ಅನೇಕರು ಭಾವಿಸುತ್ತಾರೆ, ಆದರೆ ಸತ್ಯವೇನೆಂದರೆ ಇದು ನಿಧಾನವಾಗಿ ಬರುವ ಕಾಯಿಲೆಯಾಗಿದೆ.

ಏನಿದು ಪ್ರಿ-ಡಯಾಬಿಟೀಸ್?

ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಮಧುಮೇಹ ಎಂದು ಕರೆಯುವ ಮಟ್ಟವನ್ನು ತಲುಪುವ ಮೊದಲು, ಅದು ಒಂದು ಅಪಾಯಕಾರಿ ಹಂತದಲ್ಲಿರುತ್ತದೆ. ಈ ಹಂತದಲ್ಲಿ ಸಕ್ಕರೆ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ, ಆದರೆ ಮಧುಮೇಹ ಎಂದು ಘೋಷಿಸುವಷ್ಟು ಹೆಚ್ಚಿರುವುದಿಲ್ಲ. ಈ ಹಂತವನ್ನೇ 'ಪ್ರಿ-ಡಯಾಬಿಟೀಸ್' ಎಂದು ಕರೆಯಲಾಗುತ್ತದೆ ಮತ್ತು ಇದನ್ನು ನಾವು ನಿರ್ಲಕ್ಷಿಸಬಾರದು.

ಗುಪ್ತವಾಗಿ ಹೆಚ್ಚುತ್ತಿರುವ ಅಪಾಯ

ಪ್ರಿ-ಡಯಾಬಿಟೀಸ್ ಹಂತದಲ್ಲಿ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ, ಹೀಗಾಗಿ ಅನೇಕರಿಗೆ ತಮಗೆ ಈ ಸಮಸ್ಯೆ ಇದೆ ಎಂಬುದೇ ತಿಳಿಯುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಚಿಕ್ಕ ವಯಸ್ಸಿನಲ್ಲೇ ಈ ಸಮಸ್ಯೆಗೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಆರಂಭದಲ್ಲೇ ಇದನ್ನು ಪತ್ತೆಹಚ್ಚುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು, ಭವಿಷ್ಯದಲ್ಲಿ ಬರಬಹುದಾದ ಟೈಪ್-2 ಮಧುಮೇಹ ಹಾಗೂ ಅದರಿಂದಾಗುವ ಹೃದಯದ ಸಮಸ್ಯೆ, ನರಗಳ ದೌರ್ಬಲದ ಮತ್ತು ಕಿಡ್ನಿ ಸಮಸ್ಯೆಗಳನ್ನು ತಡೆಯಬಹುದು.

ಯುವಜನರಲ್ಲಿ ಹೆಚ್ಚುತ್ತಿರುವುದೇಕೆ?

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಮಧುಮೇಹ ಹೆಚ್ಚಾಗಲು ಅವರ ಬದಲಾದ ಜೀವನಶೈಲಿಯೇ ಮುಖ್ಯ ಕಾರಣ.
ಇಂದಿನ ಯುವಕರು ದೈಹಿಕ ವ್ಯಾಯಾಮ ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ.
ಸರಿಯಾದ ಸಮಯಕ್ಕೆ ನಿದ್ದೆ ಮಾಡುತ್ತಿಲ್ಲ ಮತ್ತು ನಿದ್ದೆಯ ಕೊರತೆ ಅನುಭವಿಸುತ್ತಿದ್ದಾರೆ.
ಹೆಚ್ಚಿನ ಸಮಯವನ್ನು ಮೊಬೈಲ್ ಅಥವಾ ಕಂಪ್ಯೂಟರ್ ಮುಂದೆ ಕಳೆಯುತ್ತಾರೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಇದರೊಂದಿಗೆ ಸಂಸ್ಕರಿಸಿದ ಆಹಾರ (processed food), ತಂಪು ಪಾನೀಯಗಳು ಮತ್ತು ಜಂಕ್ ಫುಡ್ ಸೇವನೆ ಹೆಚ್ಚಾಗಿದೆ.
ಮಕ್ಕಳು ಮತ್ತು ಹದಿಹರೆಯದವರಲ್ಲಿ ಬೊಜ್ಜು ಏರುತ್ತಿದ್ದು, ಇದು ಮಧುಮೇಹದ ಮೊದಲ ಹಂತಕ್ಕೆ ದಾರಿ ಮಾಡಿಕೊಡುತ್ತದೆ. ಶಾಲೆಯಲ್ಲಿ ಆಟೋಟಗಳು ಕಡಿಮೆ ಆಗಿರುವುದು ಮತ್ತು ಓದಿನ ಒತ್ತಡ ಕೂಡ ಇದಕ್ಕೆ ಕಾರಣವಾಗಿದೆ.

25-35 ವಯಸ್ಸಿನವರಲ್ಲಿ ಹೆಚ್ಚು ಆತಂಕ

25 ರಿಂದ 35 ವರ್ಷ ವಯಸ್ಸಿನ ಉದ್ಯೋಗಿಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿ ಕಂಡುಬರುತ್ತಿದೆ. ಕೆಲಸದ ಒತ್ತಡ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಮತ್ತು ಹೊರಗಡೆ ಊಟ ಮಾಡುವ ಅಭ್ಯಾಸವೇ ಇದಕ್ಕೆ ಕಾರಣವಾಗಿದೆ. ಸಮಯದ ಅಭಾವದಿಂದಾಗಿ ಅನೇಕರು ತ್ವರಿತವಾಗಿ ಸಿಗುವ ಅನಾರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದಾರೆ.

ಪರಿಹಾರವೇನು?

ಒಂದು ಒಳ್ಳೆಯ ವಿಷಯವೇನೆಂದರೆ, 'ಪ್ರಿ-ಡಯಾಬಿಟೀಸ್' ಹಂತವನ್ನು ನಾವು ಬದಲಾಯಿಸಬಹುದು ಮತ್ತು ಸರಿಪಡಿಸಿಕೊಳ್ಳಬಹುದು.
ದಿನನಿತ್ಯದ ಜೀವನದಲ್ಲಿ ಸರಳ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಉತ್ತಮ ಗುಣಮಟ್ಟದ ಆಹಾರ ಸೇವನೆ, ದಿನಾಲೂ ಸ್ವಲ್ಪ ವ್ಯಾಯಾಮ ಅಥವಾ ನಡಿಗೆ, ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹತೋಟಿಗೆ ತರಬಹುದು.
ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ, ಮುಂದಿನ ಪೀಳಿಗೆಯನ್ನು ಮಧುಮೇಹದ ಹೊರೆಯಿಂದ ತಪ್ಪಿಸಬಹುದು.
(ಮಾಹಿತಿ: ಡಾ. ಸತೀಶ್ ಕುಮಾರ್ ಎಂ.ಜಿ, ಹಿರಿಯ ಸಲಹೆಗಾರರು - ಇಂಟರ್ನಲ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆ, ಮೈಸೂರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net