ರೇಷ್ಮೆ ಕಾರ್ಖಾನೆ ಪರ ಧ್ವನಿ ಎತ್ತಿದ ಪ್ರಮೋದಾದೇವಿ ಒಡೆಯರ್

ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
Published on
ಮೈಸೂರು: ತಿ.ನರಸೀಪುರದ ಕೆಎಸ್‌ಐಸಿ ರೇಷ್ಮೆ ಕಾರ್ಖಾನೆ ಮುಚ್ಚುವ ವಿಚಾರದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕಾರ್ಖಾನೆಯನ್ನು ಮುಚ್ಚುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಭರವಸೆ ನೀಡಿದ್ದಾರೆ. ಸಚಿವರ ಹೇಳಿಕೆಗೆ ಪ್ರಮೋದಾದೇವಿ ಒಡೆಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಮೋದಾದೇವಿ ಒಡೆಯರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಮೈಸೂರು ರೇಷ್ಮೆ ತನ್ನ ಪಾರಂಪರಿಕ ಮೈಸೂರು ವಿನ್ಯಾಸದ ಸೀರೆಗಳು ಮತ್ತು ಪಂಚೆಗಳಿಗಾಗಿ ಪ್ರಸಿದ್ಧಿಯಾಗಿದೆ. ಮೈಸೂರು ರೇಷ್ಮೆಗೆ ಲಭಿಸಿರುವ ಭೌಗೋಳಿಕ ಸೂಚಕ (ಜಿಐ) ಗುರುತು ಅದರ ವೈಶಿಷ್ಟೃತೆಯನ್ನು ಹಾಗೂ ಉತ್ಪಾದನೆಯಾಗುವ ರೇಷ್ಮೆಯ ಉನ್ನತ ಗುಣಮಟ್ಟವನ್ನು ಪ್ರಮಾಣೀಕರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೈಸೂರು ರೇಷ್ಮೆ ಭಾರತದ ಶ್ರೀಮಂತ ಜವಳಿ ಪರಂಪರೆಗೆ ಸಾಕ್ಷಿಯಾಗಿ ಉಳಿದಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ತನ್ನ ಸೊಬಗು, ಕರಕುಶಲತೆ, ವಿಶಿಷ್ಟತೆ ಹಾಗೂ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದೊಂದಿಗೆ ಮೈಸೂರು ರೇಷ್ಮೆ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಿರುವ ಅಮೂಲ್ಯ ಪರಂಪರೆಯಾಗಿದೆ. ಜಾಗತಿಕ ಫ್ಯಾಷನ್ ಕ್ಷೇತ್ರವು ಸುಸ್ಥಿರ ಮತ್ತು ಪಾರಂಪರಿಕ ಜವಳಿಗಳತ್ತ ಹೆಚ್ಚಾಗಿ ಮುಖಮಾಡುತ್ತಿರುವ ಈ ಸಂದರ್ಭದಲ್ಲಿ ಮೈಸೂರು ರೇಷ್ಮೆ ವಿಶ್ವದ ಅತ್ಯುತ್ತಮ ರೇಷ್ಮೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಕಾಯ್ದುಕೊಂಡು, ಪರಂಪರೆಯ ನೇಯ್ಗೆ ಸಂಪ್ರದಾಯವನ್ನು ಉಳಿಸಿಕೊಂಡು ಅದನ್ನು ಆಧುನೀಕರಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ತಿ.ನರಸೀಪುರ ಪ್ರದೇಶದ ಹವಾಮಾನ ಹಾಗೂ ಭೌಗೋಳಿಕ ಪರಿಸ್ಥಿತಿಗಳು, ರೇಷ್ಮೆ ಬೆಳೆಗೆ ಬೇಕಾದ ಮರಗಿಡಗಳು ಹಾಗೂ ಸಾಕಷ್ಟು ಹರಿಯುವ ನೀರಿನ ಲಭ್ಯತೆ ರೇಷ್ಮೆ ಕೃಷಿಗೆ ಅತ್ಯಂತ ಸೂಕ್ತವಾದ ವಾತಾವರಣವನ್ನು ಒದಗಿಸುತ್ತವೆ. ಈ ಪರಿಸ್ಥಿತಿಗಳಲ್ಲಿ ಸ್ವಲ್ಪವೂ ವ್ಯತ್ಯಾಸವಾದರೂ ರೇಷ್ಮೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಿ.ನರಸೀಪುರದಲ್ಲಿರುವ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ (ಕೆಎಸ್‌ಐಸಿ) ಕಾರ್ಖಾನೆಯ ಜಾಗವನ್ನು ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಕೆ ಮಾಡುವ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಮುಚ್ಚಲಾಗುತ್ತದೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾಗಿ ಎಲ್ಲರ ಪರವಾಗಿ ಮನವಿ ಮಾಡಿದೆ. ಈ ಸಂದರ್ಭ ಅವರು ಎಲ್ಲರ ಭಾವನೆಗಳನ್ನು ಗೌರವಿಸಿ ತಿ.ನರಸೀಪುರದಲ್ಲಿರುವ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಭರವಸೆ ನೀಡಿರುವುದನ್ನು ತಿಳಿಸಲು ನನಗೆ ಸಂತೋಷವಾಗಿದೆ. ಈ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಭರವಸೆಗೆ ಎಲ್ಲರ ಪರವಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net