ದೇಶದಲ್ಲಿ ಜನಸಂಖ್ಯೆ ದೊಡ್ಡ ಸಮಸ್ಯೆ

ಜಾತ್ರಾ ಮಹೋತ್ಸವ
ಜಾತ್ರಾ ಮಹೋತ್ಸವ
Published on
ದೇಶದಲ್ಲಿ ಜನಸಂಖ್ಯೆಯದ್ದೇ ದೊಡ್ಡ ಸಮಸ್ಯೆಯಾಗಿದ್ದು, ದೇಶ ಎಲ್ಲ ರಂಗದಲ್ಲೂ ಪ್ರಗತಿ ಸಾಧಿಸಿ ಎಷ್ಟೇ ಅಭಿವೃದ್ಧಿಯಾದರೂ ಅದನ್ನು ಜನಸಂಖ್ಯೆ ತಿನ್ನುತ್ತಿದೆ. ಹಾಗಾಗಿ, ಜನಸಂಖ್ಯೆ ನಿಯಂತ್ರಣದ ಕಡೆಗೆ ನಾವು ಹೆಚ್ಚು ಒತ್ತು ನೀಡಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ನೂತನ ಸತಿ-ಪತಿಗಳು ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮದಲ್ಲಿ ನಂಬಿಕೆ ಇಡಬೇಕು. ಒಂದು ಅಥವಾ ಎರಡು ಮಕ್ಕಳು ಸಾಕು ಎಂಬ ನಿರ್ಧಾರ ಮಾಡಬೇಕು. ಆಗ ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಜತೆಗೆ ನಿಮಗೂ ಉಜ್ವಲ ಭವಿಷ್ಯ ಇರುತ್ತದೆ ಎಂದರು.
ಬಡತನ, ನಿರುದ್ಯೋಗ ಸಮಸ್ಯೆಗಳು ಸಮಾಜದಿಂದ ಹೋಗಬೇಕು. ಅವನ್ನು ಹೋಗಲಾಡಿಸಲು ಎಲ್ಲರೂ ಹೋರಾಟ ಮಾಡಬೇಕು. ಮುಖ್ಯವಾಗಿ ರಾಷ್ಟ್ರದ ಜನ ಸಂಖ್ಯೆ ಕಡಿಮೆಯಾಗಬೇಕು. ಹುಟ್ಟಿದ ಮಗು ಆರೋಗ್ಯವಾಗಿರಬೇಕು. ವಿದ್ಯಾವಂತ ಆಗಬೇಕು ಎಂಬ ಗುರಿ ನಮ್ಮದಾಗಬೇಕು ಎಂದರು.
ಮದುವೆ ಎನ್ನುವುದು ಜೀವನದಲ್ಲಿ ನಡೆಯುವ ಪವಿತ್ರ ಕಾರ್ಯ. ಅದು ಇಂದು ಶ್ರೀಸುತ್ತೂರು ಮಠದ ಪವಿತ್ರ ಕ್ಷೇತ್ರದಲ್ಲಿ ಗುರುಗಳ ಆಶೀರ್ವಾದದಿಂದ ಆಗುತ್ತಿದೆ. ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾದ ಎಲ್ಲರೂ ಗುರುಗಳ ಆಶೀರ್ವಾದದಿಂದ ಚೆನ್ನಾಗಿ ಬಾಳಬೇಕು. ತಮ್ಮ ಕುಟುಂಬಕ್ಕೆ ಮತ್ತು ಇಡೀ ಸಮಾಜಕ್ಕೆ ಆದರ್ಶ ದಂಪತಿಗಳಾಗಬೇಕು ಎಂದರು.
ಒಂದು ಮದುವೆಗೆ ಲಕ್ಷಗಟಲೇ ಹಣ ಖರ್ಚು ಮಾಡುತ್ತೇವೆ. ಹಾಗಾಗಿ ಸಾಮೂಹಿಕ ವಿವಾಹದಿಂದ ಅನಗತ್ಯ ವೆಚ್ಚ ಕಡಿಮೆ ಮಾಡಬಹುದು. ಸಾಮೂಹಿಕ ವಿವಾಹ ಮಾಡುವುದು ಪವಿತ್ರ ಮತ್ತು ಆದರ್ಶ ಕೆಲಸವಾಗಿದೆ. ಸಾಮೂಹಿಕ ಮದುವೆ ಎಲ್ಲೆಡೆ ಹೆಚ್ಚಾಗಿ ನಡೆಯಬೇಕು. ಆ ಮೂಲಕ ದುಂದು ವೆಚ್ಚ ಕಡಿಮೆ ಮಾಡುವ ಜತೆಗೆ ಹಣ ಉಳಿಸಿ ಉತ್ತಮ ಜೀವನ ನಡೆಸಬಹುದು ಎಂದರು.
ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸುತ್ತೂರು ಜಾತ್ರೆಗೆ ತನ್ನದೇ ಆದ ಇತಿಹಾಸ ಇದೆ. ದಾಸೋಹ, ಸಾಂಸ್ಕೃತಿಕ ಮೇಳ, ಗಾಳಿಪಟ ಮೇಳ, ಕೃಷಿ ಮೇಳ...ಹೀಗೆ ಸಾರ್ವಜನಿಕರ ಜೀವನಕ್ಕೆ ಹತ್ತಿರುವಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 6 ದಿನಗಳು ನಡೆಯುವ ಜಾತ್ರೆಯ ಎಲ್ಲ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಜನ ಭಾಗಿಯಾಗುತ್ತಾರೆ. ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳ ಜತೆಗೆ ಅಕ್ಷರ ದಾಸೋಹವೂ ನಿರಂತರವಾಗಿ ನಡೆಯುತ್ತಿದೆ.
ಶ್ರೀ ಮಠದ ಸುಮಾರು 400 ವಿದ್ಯಾಸಂಸ್ಥೆಗಳು ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಮಠದ ವಿದ್ಯಾಸಂಸ್ಥೆಗಳಲ್ಲಿ ಕಲಿತಿರುವ ಲಕ್ಷಾಂತರ ಜನ ಜೀವನ ರೂಪಿಸಿಕೊಂಡಿದ್ದಾರೆ ಎಂದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಜತೆಗೆ ಹಿಂದೆ ಇದ್ದ ಎಲ್ಲ ಸ್ವಾಮೀಜಿಗಳನ್ನು, ಅವರ ಸೇವೆಯನ್ನು ನಾವು ಸ್ಮರಿಸಬೇಕಾಗಿದೆ. ಇಂದು 135 ಜೋಡಿ ಸತಿಪತಿಗಳಾಗುತ್ತಿದ್ದಾರೆ. ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು. ಸಾಮೂಹಿಕ ವಿವಾಹಗಳಾದರೆ ಕಡಿಮೆ ಖರ್ಚು ಇರುತ್ತದೆ. ಇಲ್ಲಿನ ಎಲ್ಲ ಖರ್ಚನ್ನು ಮಠವೇ ವಹಿಸಿಕೊಳ್ಳುತ್ತದೆ. ಸಾಮೂಹಿಕ ಮದುವೆಗಳಿಗೆ ಶ್ರೀಮಠ ಹೆಚ್ಚು ಒತ್ತು ನೀಡುತ್ತಿದೆ. ನಮ್ಮ ಸರ್ಕಾರವೂ ಒತ್ತು ನೀಡುತ್ತಿದೆ. ಇಂತಹ ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಶಿಮಠವು ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಮುಖ್ಯವಾಗಿ ಗ್ರಾಮೀಣ ಜನರಿಗೆ, ರೈತರಿಗೆ ಎಲ್ಲ ಬಗೆಯ ಮಾಹಿತಿ ನೀಡುವ ದೃಷ್ಟಿಯಲ್ಲಿ ಕೃಷಿ ಮೇಳ ಆಯೋಜಿಸಿದೆ. ಜಾತ್ರೆಯಲ್ಲಿ ಎಲ್ಲ ಜಾತಿ, ಧರ್ಮದವರು ಭಾಗಿಯಾಗುತ್ತಿದ್ದಾರೆ. ಎಲ್ಲರಲ್ಲೂ ನಮ್ಮ ಜಾತ್ರೆ ಎಂಬ ಅಭಿಮಾನ ಹೊಂದಿದ್ದಾರೆ. ದಾಸೋಹ, ಶಿಕ್ಷಕಣಕ್ಕೆ ಸುತ್ತೂರು ಮಠ ಹೆಚ್ಚಿನ ಒತ್ತು ನೀಡಿದೆ ಎಂದರು.
ಯುಎಸ್‌ಎಯ ಬಾಸ್ಟನ್ ಕನ್ಸಲ್ಟಿಂಗ್‌ನ ಹಿರಿಯ ನಿರ್ದೇಶಕ ರಾಜಣ್ಣ ಹೆಗ್ಗಡಳ್ಳಿ ಮಾತನಾಡಿ, ಜಾತ್ರಾ ಮಹೋತ್ಸವವು ಧಾರ್ಮಿಕ ಭಕ್ತಿ ಭಾವದ ಜತೆಗೆ ಜನಜಾಗೃತಿ ಕೇಂದ್ರವಾಗಿದೆ. ರೈತರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ನಾನಾ ಬಗೆಯಲ್ಲಿ ಜಾಗೃತಿ ಮೂಡಿಸುತ್ತಿದೆ. ನನ್ನಂತಹ ಅನೇಕರಿಗೆ ಸುತ್ತೂರು ಶ್ರೀ ಮಠ ಪ್ರೇರಣಾ ಶಕ್ತಿಯಾಗಿದೆ ಎಂದರು.
ಪಡಗೂರು ಅಡವಿಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ಧಾರ್ಮಿಕ ಉತ್ಸವ ಜತೆಗೆ ಸಾಮಾಜಿಕ ಸೇವೆಯ ಅನೇಕ ಕೆಲಸ ನಡೆಯುತ್ತಿದೆ. ಇಂದು 130ಕ್ಕೂ ಹೆಚ್ಚು ಜೋಡಿ ವಿವಾಹ ಆಗುತ್ತಿದೆ. ಸಮರಸವೇ ಜೀವನ ಎಂಬ ಮಾತಿದೆ. ಅದನ್ನು ನೂತನ ದಂಪತಿ ತಿಳಿದು ಬಾಳಬೇಕು. ಪರಸ್ಪರ ನಂಬಿಕೆಯಿಂದ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡಬೇಕು ಎಂದು ತಿಳಿಸಿದರು.
ಮೈಸೂರು ಬಿಷಪ್ ರೆ.ಫಾ. ಫ್ರಾನ್ಸಿಸ್ ಸೆರಾವ್ ಮಾತನಾಡಿ, ಜನ ಜಾಗೃತಿ ಮೂಡಿಸುವ ಸುತ್ತೂರಿನ ಇಂತಹ ಜಾತ್ರೆಗಳು ಹೆಚ್ಚು ನಡೆಯಬೇಕು. ಸುತ್ತೂರು ಪುಣ್ಯಕ್ಷೇತ್ರವಾಗಿದ್ದು, ಕೇವಲ ಪೂಜೆ ಪುರಸ್ಕಾರದಿಂದ ಹೆಸರು ಮಾಡಿಲ್ಲ. ಧಾರ್ಮಿಕತೆಯ ಜತೆಗೆ ಅಕ್ಷರ, ಅನ್ನ ದಾಸೋಹದಿಂದ ಇದು ಪುಣ್ಯಕ್ಷೇತ್ರವಾಗಿದೆ. ಶ್ರೀಮಠ ಅನೇಕ ಬಡವರಿಗೆ ನೆರವಾಗಿದೆ. ಸಾವಿರಾರು ಜನರಿಗೆ ಜೀವನ ರೂಪಿಸಿಕೊಟ್ಟಿದೆ ಎಂದರು.
ನಿಜವಾದ ಧರ್ಮ ದೇವಸ್ಥಾನ, ಚರ್ಚ್‌ಗಳಿಗೆ ಸಂಬಂಧಪಡುವುದಿಲ್ಲ. ಸೇವೆಯೇ ಧರ್ಮದ ಮುಖ್ಯ ಉದ್ದೇಶವಾಗುತ್ತದೆ. ಆ ಉದ್ದೇಶವನ್ನು ಸುತ್ತೂರು ಮಠ ಪೂರೈಸಿದೆ. ಶಾಂತಿ, ಅನುಕಂಪ, ಪ್ರೀತಿ, ವಾತ್ಸಲ್ಯ ಇದ್ದ ಕಡೆ ದೇವರು ಇರುತ್ತಾನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net