ಮಳೆ ಕುಂಠಿತ ಕೃಷಿಗೆ ಹೊಡೆತ

ಕೃಷಿ
ಕೃಷಿ
Published on

ಪ್ರಮುಖ ಮುಖ್ಯಾಂಶಗಳು

  • ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆ
  • ಜಿಲ್ಲೆಯ 4.54 ಲಕ್ಷ ರೈತರಲ್ಲಿ ಆತಂಕ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಪ್ರಸಕ್ತ ಸಾಲಿನಲ್ಲಿ ಉಂಟಾಗಿರುವ ಮಳೆ ಕೊರತೆ ಜಿಲ್ಲೆಯಲ್ಲಿ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಬೆಳೆ ಬೆಳೆಯಲಾಗದಿದ್ದರೆ ಮುಂದೆ ಹೇಗಪ್ಪ? ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
‘ಎಲ್ ನಿನೋ’ ಪರಿಣಾಮದಿಂದಾಗಿ ಈ ಸಲ ಪೂರ್ವ ಮುಂಗಾರು, ಮುಂಗಾರು ಮಳೆ ಕೈಕೊಟ್ಟಿದ್ದು, ಜಿಲ್ಲೆಯಲ್ಲಿ ಬರದ ಮುನ್ಸೂಚನೆ ಗೋಚರವಾಗುತ್ತಿದೆ. ಇದರಿಂದ ಕೃಷಿಯನ್ನೇ ನೆಚ್ಚಿಕೊಂಡಿರುವ ಜಿಲ್ಲೆಯ 4.54 ಲಕ್ಷ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ಆತಂಕಗೊಂಡಿರುವ ಅನ್ನದಾತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಮಳೆಗಾಲವಾಗಿರುವ ಜೂನ್, ಜುಲೈನಲ್ಲೇ ವರುಣದೇವನ ದರ್ಶನವಿಲ್ಲ. ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ.45 ಮಳೆ ಕೊರತೆ ಎದುರಾಗಿದೆ.
ಮಾರ್ಚ್‌ನಿಂದ ಮೇ ತಿಂಗಳ ವರೆಗಿನ ಪೂರ್ವ ಮುಂಗಾರ ಮಳೆ ಈ ಸಲ ಕೈಹಿಡಿದಿಲ್ಲ. ಜತೆಗೆ ಏಪ್ರಿಲ್‌ನಲ್ಲೂ ಶೇ.85, ಮೇ ತಿಂಗಳಲ್ಲಿ ಶೇ.23 ಮಳೆಯ ಬರ ಸೃಷ್ಟಿಯಾಗಿದೆ. ಜೂನ್‌ನಲ್ಲಿ ಶೇ.56 ಮಳೆ ಕೊರತೆಯಾಗಿದೆ. ಜನವರಿಯಿಂದ ಈವರೆಗೆ 287 ಮಿಮೀ ಮಳೆಯಾಗಬೇಕಿತ್ತು. ಆದರೆ 182 ಮಿಮೀ ಮಳೆಯಾಗಿದೆ. ಶೇ.19ಕ್ಕಿಂತ ಕಡಿಮೆ ಮಳೆಯಾಗಿದ್ದು, ವಾಡಿಕೆಗಿಂತ ಕಡಿಮೆ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಶೇ.40ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆ ದಾಖಲಾಗಿವುದು ತೀವ್ರ ಕಳವಳ ಉಂಟು ಮಾಡಿದೆ.

ಬಿತ್ತನೆಯಾಗಿರುವ ಬೆಳೆಗೂಸಂಕಷ್ಟ 

ಸುಮಾರು 6.76 ಲಕ್ಷ ಹೆಕ್ಟೇರ್ ಕೃಷಿ ಭೂಮಿ ವ್ಯಾಪ್ತಿಯ ಹೊಂದಿರುವ ಜಿಲ್ಲೆಯಲ್ಲಿ ಈ ವರೆಗೆ ಕೇವಲ ಶೇ.42 ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇನ್ನೂ ಅರ್ಧದಷ್ಟು ಬಿತ್ತನೆಯಾಗಬೇಕಿದೆ. ನಿಯಮಿತವಾಗಿ ಮಳೆ ಬಾರದಿರುವುದರಿಂದ ಇಡೀ ಕೃಷಿ ವ್ಯವಸ್ಥೆಗೆ ಮಂಕು ಕವಿದಿದೆ.
ಈ ಸಲ 1 ಲಕ್ಷ ಹೆಕ್ಟೇರ್ ನೀರಾವರಿ, 2.76 ಲಕ್ಷ ಹೆಕ್ಟೇರ್ ಖುಷ್ಕಿ ಸೇರಿದಂತೆ 3.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 7,454 ಹೆಕ್ಟೇರ್ ನೀರಾವರಿ, 1,53,762 ಹೆಕ್ಟೇರ್ ಖುಷ್ಕಿ ಪ್ರದೇಶ ಸೇರಿದಂತೆ ಜಿಲ್ಲಾದ್ಯಂತ 1.61 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.  ಶೇ.58 ಬಿತ್ತನೆ ಬಾಕಿ ಉಳಿದಿದೆ. ಈ ವರೆಗೂ ಕೇವಲ ಶೇ.42 ಬಿತ್ತನೆ ಗುರಿ ಸಾಧನೆ ಮಾಡಲಾಗಿದೆ. ಆದರೆ ಬಿತ್ತನೆಯಾಗಿರುವ ಬೆಳೆಗೂ ಈಗ ಸಂಕಷ್ಟ ಎದುರಾಗಿದೆ. ಮಳೆ ಕೊರತೆಯಿಂದ ಬೆಳೆ ಒಣಗುವ ಸ್ಥಿತಿ ತಲುಪಿವೆ. ಸಕಾಲಕ್ಕೆ ಮಳೆ ಬಾರದಿದ್ದರೆ ಶೇ.40ರಷ್ಟು ಇಳುವರಿ ಕುಸಿಯುವ ಆತಂಕವೂ ಎದುರಾಗಿದೆ. ಬಳಿಕ ಮಳೆ ಬಂದರೂ ಏನು ಪ್ರಯೋಜನವಿಲ್ಲ.
ಮಳೆಯಾಗದಿದ್ದರಿಂದ ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಬಾಡುವ ಸ್ಥಿತಿ ತಲುಪುತ್ತಿವೆ. ಹೂವು ಅರಳುವ, ಕಾಯಿ ಕಚ್ಚುವ ಸಂದರ್ಭದಲ್ಲಿ ಬೆಳೆಗೆ ಸೂಕ್ತ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ಇದು ಗಂಭೀರ ಪರಿಸ್ಥಿತಿ ಮುನ್ಸೂಚನೆಯಾಗಿದೆ. ಶೇ.77ರಷ್ಟು ಬಿತ್ತನೆಯಾಗಿರುವ ಹೆಸರು, ಉದ್ದು ಬೆಳೆಯು ಕಾಳು ಕಟ್ಟುವ ಹಂತದಲ್ಲಿವೆೆ. ಮುಸುಕಿನಜೋಳ, ಹತ್ತಿ ಬೆಳೆಯುವ ಹಂತದಲ್ಲಿವೆ. ಸೂರ್ಯಕಾಂತಿ ಹೂವು ಬಿಡುವ ಸ್ಥಿತಿಯಲ್ಲಿ ಇದೆ. ಸಕಾಲಕ್ಕೆ ಮಳೆ ಬಾರದಿದ್ದರೆ ಬಿತ್ತನೆ ಮಾಡಿರುವ ಬೆಳೆಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿ ರೈತರನ್ನು ಕಾಡುತ್ತಿದೆ.

ಮಳೆಯಾಶ್ರಿತ ಪ್ರದೇಶವೇ ಹೆಚ್ಚು: 

ನೀರಾವರಿ ಬೆಳೆಯಾಗಿರುವ ಭತ್ತ ಸೇರಿದಂತೆ ಜೋಳ, ರಾಗಿ, ಮುಸುಕಿನ ಜೋಳ, ಸಿರಿಧಾನ್ಯಗಳು, ತೊಗರಿ ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಸೂರ್ಯಕಾಂತಿ, ನೆಲಗಡಲೆ, ಎಳ್ಳು, ಹರಳು, ಹುಚ್ಚೆಳ್ಳು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ಹೊಗೆ ಸೊಪ್ಪು ಸಹ ಬೆಳೆಯಲಾಗುತ್ತದೆ. ಈ ಪೈಕಿ ಬಹುತೇಕ ಬೆಳೆಗಳು ಮಳೆಯಾಶ್ರಿತವಾಗಿದ್ದು, ತುರ್ತಾಗಿ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. 
ಬಿತ್ತನೆಗೆ ಮನಸ್ಸು ಮಾಡದ ರೈತರು
ಮಳೆ ಕೊರತೆಯಾಗಿದ್ದರೂ ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಏನು ತತ್ವಾರ ಇಲ್ಲ. ಈಗಾಗಲೇ 1,650 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ 754 ಕ್ವಿಂಟಾಲ್ ಬೀಜಗಳು ದಾಸ್ತಾನು ಇದೆ. ಜಾಗದ ಕೊರತೆಯಿಂದಾಗಿ ಖಾಸಗಿ ಸಂಸ್ಥೆಗಳು ಮತ್ತು ಕೇಂದ್ರ-ರಾಜ್ಯ ಬೀಜ ನಿಗಮದ ಬಳಿ 3,400 ಕ್ವಿಂಟಾಲ್ ಬೀಜವನ್ನು ಇರಿಸಲಾಗಿದೆ. ಬರದ ಭೀತಿಯಿಂದ ರೈತರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ರಸಗೊಬ್ಬರ ದಾಸ್ತಾನು

ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಸಾರಿರುವ ಜಂಟಿ ಯುದ್ಧ ಪರಿಣಾಮದಿಂದಾಗಿ ರಸಗೊಬ್ಬರ ಕೊರತೆ ಉಂಟಾಗಿದೆ. ಆದರೆ, ಬೇರೆ ಜಿಲ್ಲೆಯಷ್ಟು ಸಮಸ್ಯೆ ಇಲ್ಲಿಲ್ಲ. 54 ಸಾವಿರ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಈಗಾಗಲೇ 21,991 ಟನ್ ಬಂದಿದೆ. ಹಿಂದಿನ ದಾಸ್ತಾನು ಸೇರಿದಂತೆ 56 ಸಾವಿರ ಟನ್ ರಸಗೊಬ್ಬರ ಇನ್ನು ಖರ್ಚಾಗಿಲ್ಲ. ಹೀಗಾಗಿ ಸದ್ಯಕ್ಕೆ ಅಂತಹ ಸಮಸ್ಯೆ ಸೃಷ್ಟಿಯಾಗಿಲ್ಲ.

ಮುಸುಕಿನ ಜೋಳಕ್ಕೆ ‘ಬಿಳಿ ಸುಳಿ’ ಭೀತಿ

ಜಿಲ್ಲೆಯಲ್ಲಿ 47,405 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಮುಸುಕಿನ ಜೋಳದ ಬೆಳೆಯನ್ನು ‘ಬಿಳಿಸುಳಿ’ ಶಿಲೀಂಧ್ರ ರೋಗ ಕಾಡುತ್ತಿದೆ. ಇದು ಸಾವಿರಾರು ರೈತರಲ್ಲಿ ಆತಂಕ ಸೃಷ್ಟಿಸಿದೆ. ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ತಾಲೂಕಿನಲ್ಲಿ ಕೆಲವೆಡೆ ಈ ರೋಗ ಕಾಣಿಸಿಕೊಂಡಿದೆ. ನಂಜನಗೂಡು, ತಿ.ನರಸೀಪುರ ತಾಲೂಕಿನಲ್ಲಿ ಈ ಬೆಳೆ ಬಿತ್ತನೆ ಕಡಿಮೆಯಾಗಿದ್ದು, ಇಲ್ಲಿ ಈ ರೋಗ ಕಾಣಿಸಿಕೊಂಡಿಲ್ಲ.

ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿ

2026ರ ಮುಂಗಾರು ಹಂಗಾಮಿನಲ್ಲಿ ಮಳೆಯ ಆಶಾದಾಯಕ ಮುನ್ಸೂಚನೆ ಇಲ್ಲ. ಇದರಿಂದಾಗಿ ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆ ಆಯ್ಕೆ ಮಾಡಿಕೊಳ್ಳುವುದು ಅಗತ್ಯವಾಗಿದ್ದು, ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಪರ್ಯಾಯ ಬೆಳೆಯತ್ತ ಚಿತ್ತ ಹರಿಸಬೇಕಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬರಸಹಿಷ್ಣುತೆ ಹೊಂದಿರುವ ಅಲ್ಪಾವಧಿ, ಮಧ್ಯಮಾವಧಿ ರಾಗಿ, ದ್ವಿದಳ ಧಾನ್ಯಗಳಾದ ಅಲಸಂದೆ, ಅವರೆ ಬೆಳೆಯುವುದು ಸೂಕ್ತ. ಬರ ಸಹಿಷ್ಣುತೆ ಹೆಚ್ಚಿಸಲು ಬೀಜ ಗಟ್ಟಿಗೊಳಿಸುವಿಕೆ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.
"

ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆ ಬಿದ್ದಿಲ್ಲ. ಇದರಿಂದ ತೀವ್ರ ಮಳೆ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ಮೂನ್ಸಚನೆಯೂ ಇಲ್ಲ. ಇದರಿಂದ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಕಡಿಮೆ ನೀರು ಬೇಡುವ, ಅಲ್ಪಾವಧಿಯ ಪರ್ಯಾಯ ಬೆಳೆಯತ್ತ ರೈತರು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

— ಕೆ.ಎಚ್.ರವಿ ಜಂಟಿ ನಿರ್ದೇಶಕ, ಕೃಷಿ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net