ಹನಗೋಡು: ಆರೋಗ್ಯಕರ ಜೀವನಕ್ಕೆ ಪರಿಸರ ಸಂರಕ್ಷಣೆ ಅತ್ಯಗತ್ಯ. ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರೂ ಹೆಚ್ಚು ಗಿಡಮರಗಳನ್ನು ಬೆಳೆಸಬೇಕು ಎಂದು ನೇರಳಕುಪ್ಪೆ ಗ್ರಾಮ ಪಂಚಾಯಿತಿಯ ಪಿಡಿಒ ವರಲಕ್ಷ್ಮೀ ತಿಳಿಸಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಆವರಣದಲ್ಲಿ ವಿವಿಧ ಪ್ರಭೇದದ ಸಸಿಗಳನ್ನು ನೆಟ್ಟು, ಅವುಗಳಿಗೆ ನೀರುಣಿಸಿ ಪೋಷಿಸುವ ಮೂಲಕ ಪರಿಸರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು . ಪ್ರಸ್ತುತ ಮಾನವನ ಅತಿಯಾದ ಚಟುವಟಿಕೆಗಳಿಂದ ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದೆ. ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡ ನೆಟ್ಟು ಅದರ ಆರೈಕೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಗಿಡಮರಗಳ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಜೀವನದ ಭಾಗವಾಗಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಕುಮಾರಸ್ವಾಮಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಪ್ರಕೃತಿ ಪ್ರೇಮ ಮತ್ತು ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಶಾಲಾ ಆವರಣದಲ್ಲಿ ನೆಡಲಾದ ಸಸಿಗಳನ್ನು ವಿದ್ಯಾರ್ಥಿಗಳೇ ಜವಾಬ್ದಾರಿಯಿಂದ ಪೋಷಿಸುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಶಿಕ್ಷಕರಾದ
ಎ.ಪ್ರೀತಿ, ಕೆ.ರೇಷ್ಮಾ, ಶಾರದಾ, ವಿ .ಮೀನಾ, ಗ್ರಾ.ಪಂ. ಸಿಬ್ಬಂದಿ,ವಿದ್ಯಾರ್ಥಿಗಳು ಇದ್ದರು.