16 ಪಿಂಕ್ ಇ-ಆಟೋ ಲೋಕಾರ್ಪಣೆ: ತಳಮಟ್ಟದಿಂದ ಬಂದವರನ್ನು ರಾಣಿಯರನ್ನಾಗಿಸುವ ಗುರಿ

16 Pink E-Auto Launch: Aiming to Make Queens of the Grassroots
ಪಿಂಕ್ ಎಲೆಕ್ಟ್ರಿಕ್ ಆಟೋಗಳನ್ನು ಮಹಿಳೆಯರಿಗೆ ಹಸ್ತಾಂತರಿಸಲಾಯಿತು
Published on: 

ರಾಜಧಾನಿಯ ಮಹಿಳಾ ಆಟೋ ಚಾಲಕಿಯರ ಆರ್ಥಿಕ ಸಬಲೀಕರಣ ಹಾಗೂ ಸುಸ್ಥಿರ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಮುಂಚೂಣಿ ವಾಹನ ಸಂಸ್ಥೆ ಟಿವಿಎಸ್ ಮೋಟಾರ್ ಕಂಪನಿ, ಶೀ ಫಾರ್ ಸೊಸೈಟಿ ಮಹಿಳಾ ಬೈಕರ್ ಎನ್‌ಜಿಒ ಮತ್ತು ತಳಿರು ಫೌಂಡೇಶನ್ ಜೊತೆಗೂಡಿ ಹೊಸ ಕ್ರಾಂತಿಗೆ ನಾಂದಿ ಹಾಡಿವೆ. “ತಳಮಟ್ಟದಿಂದ ರಾಣಿಯರನ್ನು ರೂಪಿಸುವ” ಎಂಬ ವಿನೂತನ ಯೋಜನೆಯಡಿ ಬೆಂಗಳೂರಿನಲ್ಲಿ ಗುರುವಾರ ಅಧಿಕೃತವಾಗಿ 16 ಪಿಂಕ್ ಎಲೆಕ್ಟ್ರಿಕ್ ಆಟೋಗಳನ್ನು ಮಹಿಳೆಯರಿಗೆ ಹಸ್ತಾಂತರಿಸಲಾಯಿತು.

ಟಿವಿಎಸ್ ವೇಣು ಗ್ರೂಪ್‌ನ ಭಾಗವಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ಸಮಾಜಮುಖಿ ಕಳಕಳಿಯೊಂದಿಗೆ ಈ ಯೋಜನೆಯನ್ನು ಜಾರಿಗೆ ತಂದಿದೆ. ತಳಿರು ಫೌಂಡೇಶನ್ ವತಿಯಿಂದ ನಿಖರವಾಗಿ ಗುರುತಿಸಲ್ಪಟ್ಟ ಮಹಿಳಾ ಫಲಾನುಭವಿಗಳಿಗೆ ಈ ಅತ್ಯಾಧುನಿಕ ಪಿಂಕ್ ಎಲೆಕ್ಟ್ರಿಕ್ ಆಟೋಗಳನ್ನು ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಒಟ್ಟು 100 ವಾಹನಗಳನ್ನು ವಿತರಿಸಿ ಯೋಜನೆಯನ್ನು ರಾಜ್ಯದ ಇತರೆಡೆಗಳಿಗೂ ವಿಸ್ತರಿಸುವ ಬೃಹತ್ ಗುರಿಯ ಮೊದಲ ಹಂತ ಇದಾಗಿದೆ. ಮಹಿಳೆಯರು ಸುಸ್ಥಿರ ಜೀವನೋಪಾಯವನ್ನು ಕಂಡುಕೊಳ್ಳುವುದರ ಜೊತೆಗೆ, ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ಸಾರಿಗೆ ಪರಿಸರ ವ್ಯವಸ್ಥೆಯಲ್ಲಿ ಸಮಾನ ಪಾಲುದಾರರಾಗಿ ಸ್ವಾವಲಂಬನೆ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ದೇಶಾದ್ಯಂತ ಇರುವ ಪ್ರಮುಖ ಮಹಿಳಾ ಸಂಘಟನೆಗಳು ಈ ಯೋಜನೆಗೆ ಪೂರಕವಾಗಿ ಅಗತ್ಯ ಆರ್ಥಿಕ ನೆರವನ್ನು ನೀಡಿ ಸಹಕರಿಸಿದ್ದು, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಚಲನಶೀಲತೆಗೆ ಬಲವಾದ ಬೆಂಬಲ ವ್ಯಕ್ತಪಡಿಸಿವೆ.

ಈ ಮಹತ್ವದ ಸಹಯೋಗದ ಮೂಲಕ ಟಿವಿಎಸ್ ಮೋಟಾರ್ ಕಂಪನಿ, ಶೀ ಫಾರ್ ಸೊಸೈಟಿ ಹಾಗೂ ತಳಿರು ಫೌಂಡೇಶನ್ ಸಂಸ್ಥೆಗಳು ಮಹಿಳೆಯರು ವಾಣಿಜ್ಯ ಸಾರಿಗೆ ರಂಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಹೊಸ ಅವಕಾಶಗಳ ಹೆದ್ದಾರಿಯನ್ನು ನಿರ್ಮಿಸುತ್ತಿವೆ. ಇದು ಮಹಿಳೆಯರಲ್ಲಿ ನವೋದ್ಯಮ ಶೀಲತೆ, ಸ್ವತಂತ್ರ ಆದಾಯ ಗಳಿಕೆ ಮತ್ತು ದೇಶದ ಆರ್ಥಿಕತೆಯಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ನಿರಂತರವಾಗಿ ಬೆಂಬಲಿಸಲಿದೆ.

ನಗರದಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಉಪಾಧ್ಯಕ್ಷರು, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರು ಹಾಗೂ ಎಐಸಿಸಿ ವಕ್ತಾರರಾದ ಶ್ರೀಮತಿ ಐಶ್ವರ್ಯಾ ಮಹಾದೇವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಾಹನಗಳಿಗೆ ಹಸಿರು ನಿಶಾನೆ ತೋರಿದರು. ಈ ಯೋಜನೆಯು ಟಿವಿಎಸ್ ಮೋಟಾರ್ ಕಂಪನಿಯ ಬೃಹತ್ ಪ್ರಮಾಣದ ಪಿಂಕ್ ಆಟೋ ಪ್ರಾಜೆಕ್ಟ್ ಆಗಿದ್ದು, ವಾಣಿಜ್ಯ ಸಾರಿಗೆಯ ನೆರವಿನಿಂದ ಗರಿಷ್ಠ ಸಂಖ್ಯೆಯ ಮಹಿಳೆಯರು ಸುಸ್ಥಿರ ಬದುಕು ಕಟ್ಟಿಕೊಳ್ಳಲು ರೂಪಿಸಲಾದ ಸಮಗ್ರ ಕಾರ್ಯಕ್ರಮದ ಮೊದಲ ಹಂತದ ಹೆಜ್ಜೆಯಾಗಿದೆ ಎಂದು ಅವರು ಶ್ಲಾಘಿಸಿದರು.

ಈ ವಿನೂತನ ಯೋಜನೆ ಕುರಿತು ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಕಮರ್ಷಿಯಲ್ ಮೊಬಿಲಿಟಿ ವಿಭಾಗದ ಬಿಸಿನೆಸ್ ಹೆಡ್ ರಜತ್ ಗುಪ್ತಾ ಅವರು, "ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಸಾರಿಗೆ ಮತ್ತು ವಾಹನ ಚಲನಶೀಲತೆಯು ಹೊಸ ಬದುಕಿನ ಅವಕಾಶಗಳನ್ನು ಸೃಷ್ಟಿಸಲು ಹಾಗೂ ಜನರ ಜೀವನೋಪಾಯವನ್ನು ದೃಢವಾಗಿ ಬಲಪಡಿಸಲು ಅತ್ಯಂತ ಅರ್ಥಪೂರ್ಣ ಪಾತ್ರ ವಹಿಸುತ್ತದೆ ಎಂದು ನಾವು ಬಲವಾಗಿ ನಂಬಿದ್ದೇವೆ. ಶೀ ಫಾರ್ ಸೊಸೈಟಿ ಮತ್ತು ತಳಿರು ಫೌಂಡೇಶನ್ ಸಂಸ್ಥೆಗಳ ಜೊತೆಗಿನ ನಮ್ಮ ಈ ಸಹಯೋಗವು ಎಲ್ಲರನ್ನೂ ಒಳಗೊಳ್ಳುವಂತಹ ಸುಸ್ಥಿರ ವಾಣಿಜ್ಯ ಸಾರಿಗೆ ವಲಯವನ್ನು ಮುನ್ನಡೆಸುವ ನಮ್ಮ ಬದ್ಧತೆಯನ್ನು ನಿರೂಪಿಸುತ್ತದೆ. ಈ ಪಿಂಕ್ ಆಟೋ ಉಪಕ್ರಮವು ಮಹಿಳಾ ಉದ್ಯಮಿಗಳಿಗೆ ಭದ್ರ ಬುನಾದಿ ಹಾಕಿ ಬೆಂಬಲಿಸಲು ಮತ್ತು ಅವರಲ್ಲಿ ಗರಿಷ್ಠ ಆರ್ಥಿಕ ಸ್ವಾತಂತ್ರ್ಯವನ್ನು ಮೂಡಿಸಲು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಸಾರಿಗೆ ಚಲನಶೀಲತೆ, ಸಾಮಾಜಿಕ ಬೆಂಬಲ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಒಂದೇ ಸೂರಿನಡಿ ತರುವ ಇಂತಹ ಮಹತ್ವದ ಯೋಜನೆಗೆ ಕೊಡುಗೆ ನೀಡುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ" ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶೀ ಫಾರ್ ಸೊಸೈಟಿಯ ಹರ್ಷಿಣಿ ಅವರು, "ಸಾರಿಗೆ ವ್ಯವಸ್ಥೆಯ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ರೂಪಿಸಿ, ತಳಮಟ್ಟದಿಂದಲೇ ಸಮಾಜದಲ್ಲಿ ಅವರನ್ನು ರಾಣಿಯರಂತೆ ಬೆಳೆಸುವುದೇ ನಮ್ಮ ಕ್ವೀನ್ಸ್ ಡ್ರೈವ್ ಯೋಜನೆಯ ಮುಖ್ಯ ಧ್ಯೇಯವಾಗಿದೆ. ದೇಶಾದ್ಯಂತ ಇರುವ ಪ್ರಮುಖ ಮಹಿಳಾ ಸಂಘಟನೆಗಳ ನೆರವು ಹಾಗೂ ತಳಿರು ಫೌಂಡೇಶನ್ ಮತ್ತು ಟಿವಿಎಸ್ ಮೋಟಾರ್ ಕಂಪನಿಯ ಬಲವಾದ ಸಹಯೋಗದೊಂದಿಗೆ, ಮಹಿಳಾ ಆಟೋ ಚಾಲಕಿಯರಿಗೆ ಶಾಶ್ವತ ಹಾಗೂ ಸುಸ್ಥಿರ ಅವಕಾಶಗಳನ್ನು ಕಲ್ಪಿಸುವ ದೃಢ ಉದ್ದೇಶವನ್ನು ನಾವು ಹೊಂದಿದ್ದೇವೆ. ಇಂದು ರಸ್ತೆಗಿಳಿದಿರುವ ಈ 16 ಪಿಂಕ್ ಎಲೆಕ್ಟ್ರಿಕ್ ಆಟೋಗಳು ಒಂದು ಬೃಹತ್ ಆಂದೋಲನದ ಶುಭಾರಂಭವಾಗಿದ್ದು, ಮುಂದಿನ ದಿನಗಳಲ್ಲಿ 100 ಮಹಿಳೆಯರನ್ನು ಸಬಲೀಕರಣಗೊಳಿಸಿ, ಇಡೀ ದೇಶದ ನಾನಾ ಸಮುದಾಯಗಳಿಗೆ ಇದು ದೊಡ್ಡ ಪ್ರೇರಣೆಯಾಗಲಿದೆ ಎಂಬ ಪೂರ್ಣ ಭರವಸೆ ನಮಗಿದೆ" ಎಂದರು.

ತಳಿರು ಫೌಂಡೇಶನ್‌ನ ಚಿತ್ರಾ ಮಾತನಾಡಿ, "ಸ್ವತಂತ್ರವಾಗಿ ದುಡಿದು ತಮ್ಮ ಕಾಲ ಮೇಲೆ ತಾವೇ ನಿಲ್ಲಲು ಬಯಸುವ ಕನಸುಗಾರ ಮಹಿಳೆಯರಿಗೆ ಸಾರ್ಥಕ ಮತ್ತು ಗೌರವಯುತ ಜೀವನೋಪಾಯದ ಅವಕಾಶಗಳನ್ನು ಒದಗಿಸಲು ಈ ಯೋಜನೆಯ ಮೂಲಕ ನಾವು ಶ್ರಮಿಸುತ್ತಿದ್ದೇವೆ. ನಮ್ಮ ಅರ್ಹ ಫಲಾನುಭವಿಗಳಿಗೆ ಈ 16 ಪಿಂಕ್ ಆಟೋಗಳು ಲಭಿಸಿರುವುದು ಅವರ ಬದುಕಿನ ಮಹತ್ವದ ಮೈಲಿಗಲ್ಲಾಗಿದೆ. ಈ ಕನಸನ್ನು ನನಸಾಗಿಸಲು ಬೆಂಬಲವಾಗಿ ನಿಂತ ಶೀ ಫಾರ್ ಸೊಸೈಟಿ, ಟಿವಿಎಸ್ ಮೋಟಾರ್ ಕಂಪನಿ ಹಾಗೂ ದೇಶದ ಮಹಿಳಾ ಸಂಘಟನೆಗಳಿಗೆ ನಮ್ಮ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ" ಎಂದು ಹೇಳಿದರು.

ಭಾರತದ ವಿಕಸನಗೊಳ್ಳುತ್ತಿರುವ ವಾಣಿಜ್ಯ ಸಾರಿಗೆ ಕ್ಷೇತ್ರದಲ್ಲಿ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಮತ್ತು ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಸಾರಿಗೆ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು ಹಾಗೂ ಸ್ಥಳೀಯ ಸಮುದಾಯಗಳ ನಡುವಿನ ಜಂಟಿ ಸಹಭಾಗಿತ್ವವು ಅತ್ಯಂತ ಅನಿವಾರ್ಯ ಎಂಬುದನ್ನು ಈ ಯೋಜನೆಯು ಎತ್ತಿ ತೋರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net