ನಗರಪಾಲಿಕೆ ಬಜೆಟ್‌ಗೆ ಜನರ ಸಲಹೆ ಸ್ವೀಕಾರ: ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಮಾಹಿತಿ

 ನಗರಪಾಲಿಕೆ ಆಡಳಿತಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ಬಜೆಟ್ ಕುರಿತು ವಿವಿಧ ಕ್ಷೇತ್ರದ ಮುಖಂಡರೊಂದಿಗಿನ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು.
ನಗರಪಾಲಿಕೆ ಆಡಳಿತಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ಬಜೆಟ್ ಕುರಿತು ವಿವಿಧ ಕ್ಷೇತ್ರದ ಮುಖಂಡರೊಂದಿಗಿನ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ಬಜೆಟ್ ಸಿದ್ಧಪಡಿಸುವ ಸಂಬಂಧ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಉದ್ಯಮಿಗಳು ಸೇರಿದಂತೆ ಎಲ್ಲ ವರ್ಗದರಿಂದ ಸಲಹೆ ಕೇಳಲಾಗಿದೆ
  • ಪ್ರತಿ ವಾರ್ಡ್‌ನಲ್ಲೂ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧಪಡಿಸಲಾಗಿದ್ದು, ವಸೂಲಾತಿಗೆ ಕ್ರಮ ವಹಿಸಲಾಗುವುದು
  • ನಗರ ಪಾಲಿಕೆಯ ಜಾಲತಾಣದಲ್ಲಿ ಗೂಗಲ್ ಫಾರ್ಮ್‌ನಲ್ಲಿ ಅದನ್ನು ಭರ್ತಿ ಮಾಡಿ, ಆನ್‌ಲೈನ್‌ನಲ್ಲೇ ಸಲಹೆ ನೀಡಲು ಅವಕಾಶ ಇದೆ
ಮೈಸೂರು: ಮೈಸೂರು ನಗರಪಾಲಿಕೆ ಮುಂದಿನ ಬಜೆಟ್ ಮಂಡನೆಗೆ ಸಾರ್ವಜನಿಕರಿಂದ ಜಾಲತಾಣದ ಮೂಲಕ ಸಲಹೆ ಕೇಳಲಾಗುವುದು ಎಂದು ನಗರಪಾಲಿಕೆ ಆಡಳಿತಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಮಾಹಿತಿ ನೀಡಿದರು.
ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ 2026-27ನೇ ಬಜೆಟ್ ಸಂಬಂಧ ವಿವಿಧ ಕ್ಷೇತ್ರದ ಮುಖಂಡರೊಂದಿಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದಿನ ಬಜೆಟ್ ಸಿದ್ಧಪಡಿಸುವ ಸಂಬಂಧ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಉದ್ಯಮಿಗಳು ಸೇರಿದಂತೆ ಎಲ್ಲ ವರ್ಗದರಿಂದ ಸಲಹೆ ಕೇಳಲಾಗಿದೆ. ನಗರ ಪಾಲಿಕೆಯ ಜಾಲತಾಣದಲ್ಲಿ ಗೂಗಲ್ ಫಾರ್ಮ್‌ನಲ್ಲಿ ಅದನ್ನು ಭರ್ತಿ ಮಾಡಿ, ಆನ್‌ಲೈನ್‌ನಲ್ಲೇ ಸಲಹೆ ನೀಡಲು ಅವಕಾಶ ಇದೆ ಎಂದು ತಿಳಿಸಿದರು.
ಪ್ರತಿ ವಾರ್ಡ್‌ನಲ್ಲೂ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧಪಡಿಸಲಾಗಿದ್ದು, ವಸೂಲಾತಿಗೆ ಕ್ರಮ ವಹಿಸಲಾಗುವುದು. ಅದರೂ ಬಾಕಿ ಪಾವತಿಸಲು ಹಿಂದೇಟು ಹಾಕಿದವರ ಹೆಸರನ್ನು ಇದೇ ಪ್ರಥಮ ಬಾರಿಗೆ ಜಾಲತಾಣದಲ್ಲಿ ಹಾಕಲು ಉದ್ದೇಶಿಸಲಾಗಿದೆ. ಸಾರ್ವಜನಿಕರು ವೆಬ್‌ಸೈಟ್‌ನಲ್ಲಿಯೇ ಬಾಕಿ ಉಳಿಸಿಕೊಂಡವರ ಹೆಸರು, ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವುದನ್ನು ವೀಕ್ಷಿಸಬಹುದು ಎಂದು ಹೇಳಿದರು.
ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮಾತನಾಡಿ, ಇಂದಿಗೂ ಹಲವು ಬಡಾವಣೆಗಳಲ್ಲಿ ಸರಿಯಾಗಿ ತೆರಿಗೆ ವಸೂಲಿ ಆಗುತ್ತಿಲ್ಲ. ಖಾತೆ, ಕಂದಾಯ ಆಂದೋಲನ ನಡೆಸಿದರೆ ವರಮಾನ ಏರಿಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ನೀರಿನ ಕರ ವಸೂಲಾತಿಯಲ್ಲಿ ಅಧಿಕವಾದ ಬಡ್ಡಿ ಹಾಕಲಾಗಿದೆ. ಬಡ್ಡಿ ಮನ್ನಾ ಮಾಡಿದರೆ ಪಾವತಿಸುವುದಕ್ಕೆ ಬಹಳಷ್ಟು ಮಂದಿ ಮುಂದೆ ಬರಲಿದ್ದು, ಇದರಿಂದ ಅದಾಯ ಸಂಗ್ರಹವಾಗಲಿದೆ ಎಂದರು.
ನಗರಪಾಲಿಕೆಗೆ ಸೇರಿದ ಆಸ್ತಿಗಳಲ್ಲಿ ಸಮರ್ಪಕವಾಗಿ ಬಾಡಿಗೆ ವಸೂಲಾತಿ ಅಗುತ್ತಿಲ್ಲ. ಪಾಲಿಕೆಗೆ ಸೇರಿದ ಎಲ್ಲ ಆಸ್ತಿಗಳನ್ನು ಅಧೀನಕ್ಕೆ ತೆಗೆದುಕೊಂಡು ಅಲ್ಲಿ ಕೈಗೆಟುಕುವ ಬಾಡಿಗೆ ವಿಧಿಸಬಹುದಾಗಿದೆ. ಖಾಸಗಿಯವರಿಗೆ ಉದ್ಯಾನ ನಿರ್ವಹಣೆ ಉಸ್ತುವಾರಿ ವಹಿಸಿ ಸಿಎಸ್‌ಆರ್ ನಿಧಿಯಿಂದ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಬೇಕು, ಮೈದಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ಲಿಂಗಪ್ಪ ಅವರು, ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಖಾತೆ ಮಾಡಿಕೊಟ್ಟು ಬಾಡಿಗೆ ಪರಿಷ್ಕರಿಸಬೇಕು. ಇದರಿಂದ ವರಮಾನ ಕ್ರೋಡೀಕರಣಕ್ಕೆ ಸಹಾಯ ಆಗುತ್ತದೆ ಸಲಹೆ ನೀಡಿದರು.
ಮಾಜಿ ಉಪಮೇಯರ್‌ಗಳಾದ ಪುಷ್ಪವಲ್ಲಿ ಹಾಗೂ ರೂಪಾ ಅವರು, ಬಜೆಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಯೋಜನೆ ರೂಪಿಸಬೇಕು. ಪಿಂಕ್ ಆಟೋ ರಿಕ್ಷಾ ಯೋಜನೆ ಆರಂಭಿಸುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ಕಂಡುಕೊಳ್ಳಲು ಬೇಕಾದ ತರಬೇತಿಗಳನ್ನು ನೀಡಬೇಕು ಎಂದು ಕೋರಿದರು.
ಮಾಜಿ ಮೇಯರ್‌ಗಳಾದ ಟಿ.ಬಿ.ಚಿಕ್ಕಣ್ಣ, ಮೋದಾಮಣಿ ಅವರು, ಸಮರ್ಪಕ ಒಳಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು, ದೇವರಾಜ ಮಾರುಕಟ್ಟೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಮೇಯರ್‌ಗಳಾದ ಪಿ. ವಿಶ್ವನಾಥ್, ಮಹದೇವಪ್ಪ, ದಕ್ಷಿಣಾಮೂರ್ತಿ, ಉದ್ಯಮಿ ಸುರೇಶ್‌ಕುಮಾರ್ ಜೈನ್ ಸಲಹೆ ನೀಡಿದರು. ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಮುಖ್ಯಲೆಕ್ಕಾಧಿಕಾರಿ ಶ್ವೇತಾ, ಅಧಿಕಾರಿಗಳಾದ ಕುಸುಮಾಕುಮಾರಿ, ಜಿ.ಸೋಮಶೇಖರ್ ಇತರರು ಇದ್ದರು.
ಇಂದೋರ್ ಮಾದರಿ ಅನುಸರಿಸಿ
ಮೈಸೂರು ನಗರಪಾಲಿಕೆಯನ್ನು ಇಂದೋರ್ ಮಾದರಿ ಅನುಸರಿಸುವ ಮೂಲಕ ಸ್ವಚ್ಛನಗರಿಯನ್ನಾಗಿಸಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಮನ್ವಯ ಮಾಡಬಹುದು. ಮಹಾರಾಜರ ಕಾಲದಿಂದಲೂ ಮೈಸೂರು ಮಾದರಿ ನಗರವಾಗಿದೆ. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಅದಕ್ಕಾಗಿ ಇಂದೋರ್ ಮಾದರಿಯಲ್ಲಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಿರ್ಮಾಣ ಮಾಡಬೇಕು. ಅದರ ನಿರ್ವಹಣೆಗೆ ಕ್ರಿಯಾತ್ಮಕ ಕಾರ್ಯಗಳನ್ನು ಅಳವಡಿಸಿಕೊಳ್ಳಬೇಕು.ಈ ಮೂಲಕ ಮೈಸೂರನ್ನು ನಂಬರ್ ಒನ್ ಸ್ವಚ್ಛ ನಗರಿಯಾಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಪಾರಂಪರಿಕ ಸ್ವಾಗತ ಕಮಾನು, ಕಟ್ಟಡಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಂ, ರೋಡ್ ಹಿಸ್ಟರಿ ಸಿದ್ಧಪಡಿಸಬೇಕು. ಯುಜಿಡಿ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಇದಕ್ಕಾಗಿ ಸೂಪರ್ ಸಕ್ಕಿಂಗ್ ಯಂತ್ರಗಳನ್ನು ತರಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ಸಂದೇಶ್ ಸ್ವಾಮಿ, ನಗರಪಾಲಿಕೆಗೆ ಸೇರಿದ ಎರಡೂವರೆ ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ಬಾಡಿಗೆಗೆ ಕೊಡಲಾಗಿದೆ. ಆದರೆ ಹಲವು ವರ್ಷಗಳಿಂದ ಅವುಗಳ ಬಾಡಿಗೆ ಪರಿಷ್ಕರಣೆ ಆಗಿಲ್ಲ. ಕೆಲವೆಡೆ ಸಂಗ್ರಹಿಸುತ್ತಲೂ ಇಲ್ಲ. ವರ್ತುಲ ರಸ್ತೆಬದಿ ಸ್ವಚ್ಛತೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಮೈಸೂರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.
ಇ-ಖಾತೆ ಮಾಡಿಕೊಡಲು 20ರಿಂದ 30 ಸಾವಿರ ರೂ. ಲಂಚ ಕೇಳುವ ದೂರುಗಳಿವೆ. ಇದಕ್ಕೆ ಕಡಿವಾಣ ಹಾಕಬೇಕು. ನರಸಿಂಹರಾಜ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಾಜಿ ಮೇಯರ್ ಅಯೂಬ್ ಖಾನ್ ಮಾತನಾಡಿ, ಸರ್ಕಾರ, ಮೈಸೂರನ್ನು ಗ್ರೇಡ್ 1 ಮಹಾನಗರ ಪಾಲಿಕೆಯನ್ನಾಗಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಬಹುದು. ಆಗ ಪಾಲಿಕೆಯ ವಿಸ್ತೀರ್ಣವು 338 ಚ.ಕಿ.ಮೀ. ಆಗುತ್ತದೆ. ಹೀಗಿರುವಾಗ, ನೀವು ಬಜೆಟ್ ಸಿದ್ಧಪಡಿಸುತ್ತಿರುವುದು ಈಗಿನ ಪಾಲಿಕೆಗೋ, ಗ್ರೇಡ್1 ಪಾಲಿಕೆಗೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಅಭಿವೃದ್ಧಿಗೆ ಅನುದಾನದ ಸುರಿಮಳೆ ಮಾಡಿದ್ದಾರೆ. ಅದನ್ನು ಬಳಸಿಕೊಳ್ಳಬೇಕು. ಒಂದೇ ದಿನದಲ್ಲೇ ಖಾತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗ್ರೇಟರ್ ಅಲ್ಲ, ಗ್ರೇಡ್ 1 ಮಹಾನಗರಪಾಲಿಕೆ
ಮೈಸೂರು ನಗರಪಾಲಿಕೆಯನ್ನು ಗ್ರೇಟರ್ ಮೈಸೂರು ರಚಿಸಲಾಗುತ್ತದೆ ಎಂದು ಪ್ರಚಾರ ಆಗಿದೆ. ಆದರೆ ಸರ್ಕಾರ ಈಗ ಮಾಡಲು ಹೊರಟಿರುವುದು ಗ್ರೇಡ್ ಒನ್ ಮೈಸೂರು ಮಹಾನಗರಪಾಲಿಕೆ ಎಂದು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಸ್ಪಷ್ಟಪಡಿಸಿದರು.
ನಗರದಲ್ಲಿ ಪೊಲೀಸ್ ಇಲಾಖೆಯ 50 ಸಿಸಿ ಟಿವಿ ಕ್ಯಾಮರಾ ಇವೆ. ಪಾಲಿಕೆಯಿಂದ ಮತ್ತೆ 50 ಅಳವಡಿಸಿದರೆ, ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ವೈಟ್‌ಟಾಪಿಂಗ್ ರಸ್ತೆ ನಿರ್ಮಾಣಕ್ಕೆಂದು 400 ಕೋಟಿ ರೂ., ಜತೆಗೆ ವಿಶೇಷ ಅನುದಾನವಾಗಿ 250 ಕೋಟಿ ರೂ. ದೊರೆತಿದೆ ಎಂದು ತಿಳಿಸಿದರು.
ಈಗ ಚುನಾಯಿತ ಪ್ರತಿನಿಧಿಗಳು ಇಲ್ಲದಿರುವ ಕಾರಣ 15ನೇ ಹಣಕಾಸು ಆಯೋಗದಿಂದ ತಲಾ 63 ಕೋಟಿ ರೂ. ಅನುದಾನ ಎರಡು ವರ್ಷಗಳಿಂದ ಬಂದಿಲ್ಲ ಎಂದು ಪ್ರತಿಕ್ರಿಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net