ಕಬಿನಿ ನದಿ ಪಾತ್ರದ ಜನರೇ, ಮುನ್ನೆಚ್ಚರಿಕೆ ವಹಿಸಿ

 ಕಬಿನಿ ಜಲಾಶಯ
ಕಬಿನಿ ಜಲಾಶಯ
Published on

ಪ್ರಮುಖ ಮುಖ್ಯಾಂಶಗಳು

  • ಯಾವುದೇ ಕ್ಷಣದಲ್ಲಾದರೂ 10ರಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ
  • ಕಬಿನಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ
  • ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ

ಮೈಸೂರು: 

ಕಬಿನಿ ಜಲಾಶಯದಿಂದ 10ರಿಂದ 15 ಸಾವಿರ ಕ್ಯೂಸೆಕ್ ನೀರನ್ನು ಯಾವುದೇ ಕ್ಷಣದಲ್ಲಾದರೂ ನದಿಗೆ ಹೊರ ಬಿಡಲಾಗುತ್ತಿದ್ದು,  ನದಿಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಕಬಿನಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದೆ. ಶುಕ್ರವಾರ ಡ್ಯಾಂನ ಒಳ ಹರಿವಿನ ಪ್ರಮಾಣ 11,217 ಕ್ಯೂಸೆಕ್ ಇದೆ. 7,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಈ ನಡುವೆ, ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. 
ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಕಬಿನಿ ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದಲ್ಲಿರುವ ಮತ್ತು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿಪಾಸ್ತಿ, ಜಾನುವಾರ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು. 
ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಬಿನಿ ಜಲಾಶಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ತಾರಕದ ಒಳ ಹರಿವು ಶೂನ್ಯಕ್ಕೆ ಇಳಿಕೆ:

ಎಚ್.ಡಿ.ಕೋಟೆ ತಾಲೂಕಿನ ಮತ್ತೊಂದು ಚಿಕ್ಕ ಜಲಾಶಯವಾದ ತಾರಕದ ಒಳ ಮತ್ತು ಹೊರ ಹರಿವು ಶೂನ್ಯಕ್ಕೆ ಇಳಿದಿದೆ. ಸಮುದ್ರಮಟ್ಟದಿಂದ ಇದರ ಗರಿಷ್ಠ ನೀರಿನ ಸಂಗ್ರಹವಾಗಿರುವ 2425 ಅಡಿ ಪೈಕಿ ಸದ್ಯಕ್ಕೆ 2409.58 ಅಡಿಯ ವರೆಗೆ ನೀರು ಸಂಗ್ರಹವಾಗಿದೆ. 
ಇನ್ನೂ, ನುಗು ಜಲಾಶಯದ ಒಳ ಹರಿವಿನ ಪ್ರಮಾಣ ಕೇವಲ 283 ಕ್ಯೂಸೆಕ್ ಇದ್ದರೆ, ಹೊರ ಹರಿವು ಶೂನ್ಯಕ್ಕೆ ಇಳಿದಿದೆ.  

ಡಿ.ಬಿ.ಕುಪ್ಪೆಯಲ್ಲಿ ಭಾರಿ ಮಳೆ

ಜಿಲ್ಲೆಯಲ್ಲಿ ಕೆಲವೆಡೆ ಸಾಧಾರಣವಾಗಿ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಎಚ್.ಡಿ.ಕೋಟೆಯ ಡಿ.ಬಿ.ಕುಪ್ಪೆಯಲ್ಲಿ ಬರೋಬರಿ 11.5 ಮಿಲಿ ಮೀಟರ್ ಮಳೆ ಸುರಿದಿದೆ. 
ಇದು ಜಿಲ್ಲೆಯಲ್ಲೇ ಈ ಭಾಗದಲ್ಲಿ ಅಧಿಕ ಮಳೆ ದಾಖಲಾಗಿದೆ. ಎಚ್.ಡಿ.ಕೋಟೆ, ಸರಗೂರು, ಕೆ.ಆರ್.ನಗರದ ಕೆಲ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಪಿರಿಯಾಪಟ್ಟಣ, ಸಾಲಿಗ್ರಾಮ ತಾಲೂಕಿನಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಮೈಸೂರು ನಗರದಲ್ಲೂ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಆಗೊಮ್ಮ-ಈಗೊಮ್ಮೆ ಸುರಿದಿದೆ. ದಿನವಿಡೀ ಮೋಡಕವಿದ ವಾತಾವರಣದಿಂದ ಸಾಂಸ್ಕೃತಿಕ ನಗರಿಯಲ್ಲಿ ಮಲೆನಾಡಿನ ಅನುಭವವಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net