ದಟ್ಟ ಕಾಡಿನ ಅರಣ್ಯ ಪ್ರದೇಶ ಇಲ್ಲದ ತಾಲೂಕಿನಲ್ಲಿ ಐದಾರು ವರ್ಷಗಳ ಹಿಂದೆ ಅಲ್ಲೊಂದು, ಇಲ್ಲೊಂದು ಎಂಬಂತೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಸಮಸ್ಯೆಯೇ ಆಗಿರಲಿಲ್ಲ. ಆದರೆ ತಾಲೂಕಿನ ಎಂ.ಎಲ್. ಹುಂಡಿ ಬೆಟ್ಟದ ಬಳಿ ಯುವಕನೊಬ್ಬನನ್ನು ಚಿರತೆ ಮೊದಲು ಬಲಿ ಪಡೆದ ದಿನದಿಂದ ಜನರಲ್ಲಿ ಭಯ ಆರಂಭವಾಗಿದೆ. ಅಂತೆಯೇ ಎಸ್.ಕೆಬ್ಬೆಹುಂಡಿಯಲ್ಲಿ ಯುವತಿ, ಕನ್ನಾಯಕನಹಳ್ಳಿಯಲ್ಲಿ ಮಹಿಳೆ, ಹೊರಳಹಳ್ಳಿಯಲ್ಲಿ ಬಾಲಕ ಚಿರತೆಗೆ ಆಹುತಿಯಾದರೆ, ಪರಿಣಾಮಿಪುರದ ಜಮೀನಿನಲ್ಲಿ ಒಂಟಿಆನೆ ದಾಳಿ ಮಾಡಿ ಕೃಷಿ ಕಾರ್ಮಿಕರೊಬ್ಬನನ್ನು ಕೊಂದ ಘಟನೆ ಜನಮಾನಸದಲ್ಲಿ ವನ್ಯಮೃಗಗಳ ಮೇಲಿನ ಭಯವನ್ನು ಮತ್ತಷ್ಟು ಹೆಚ್ಚು ಮಾಡಿದೆ.