ನಿಯಮ ಪಾಲಿಸದ ಸ್ಕೂಲ್ ವ್ಯಾನ್‌ಗಳಿಗೆ ದಂಡಾಸ್ತ್ರ

ಶಾಲಾ ವಾಹನ
ಶಾಲಾ ವಾಹನ
Published on

ಪ್ರಮುಖ ಮುಖ್ಯಾಂಶಗಳು

  • ನಿಯಮ, ಸುರಕ್ಷತಾ ಮಾರ್ಗಸೂಚಿ ಉಲ್ಲಂಘನೆ
  • ಮಕ್ಕಳ ಸುರಕ್ಷತೆ, ಪಾಲಕರ ನೆಮ್ಮದಿ, ಸಂಚಾರ ವ್ಯವಸ್ಥೆಗೆ ಸಂಚಕಾರ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಸಂಚಾರ ನಿಯಮ ಮತ್ತು ಸುರಕ್ಷತಾ ಮಾರ್ಗಸೂಚಿ ಉಲ್ಲಂಘಿಸುವ ಮೂಲಕ ಶಾಲಾ ವಾಹನಗಳು ಮಕ್ಕಳ ಸುರಕ್ಷತೆಗೆ ಸಂಚಕಾರ ತಂದಿವೆ. 
ಜಿಲ್ಲೆಯಲ್ಲಿ ಕೆಲ ಶಾಲಾ ವಾಹನಗಳು ನಿಯಮ ಉಲ್ಲಂಘನೆಗಳ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮೂರು ವರ್ಷದಲ್ಲಿ ಇಂತಹ ಶಾಲಾ ವಾಹನಗಳ ವಿರುದ್ಧ 351 ಪ್ರಕರಣ ದಾಖಲಾಗಿದೆ.
ಶಾಲಾ ವಾಹನಗಳ ನಿಯಮ ಉಲ್ಲಂಘನೆಯು ಮಕ್ಕಳ ಸುರಕ್ಷತೆ, ಪಾಲಕರ ನೆಮ್ಮದಿ ಮತ್ತು ಸಾರ್ವಜನಿಕ ಸಂಚಾರ ವ್ಯವಸ್ಥೆಗೂ ಅಪಾಯ ಉಂಟು ಮಾಡುತ್ತದೆ. ಇದು ಆತಂಕಕಾರಿ ಸಂಗತಿ. ಆದ್ದರಿಂದ ಶಾಲಾ ಆಡಳಿತ, ಪಾಲಕರು, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆಯಿಂದ ನಿಯಮಿತವಾಗಿ ವಾಹನಗಳನ್ನು ಪರಿಶೀಲಿಸಬೇಕು. ಇಂತಹ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಸುಪ್ರೀಂಕೋರ್ಟ್ ಆದೇಶ ಅನ್ವಯ ಶಾಲಾ ವಾಹನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿಶೇಷ ತಪಾಸಣೆ ನಡೆಸಿ ಇದು ಪಾಲನೆಯಾಗಿದೆಯೇ ಖಚಿತಪಡಿಸಿಕೊಳ್ಳಬೇಕಾಗಿದೆ. ಆದರೆ, ಇದು ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎಂಬುದು ವಿಷಾದಕರ.

ಸಿಸಿ ಕ್ಯಾಮರಾಗಳೇ ಇಲ್ಲ: 

ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಸ್, ವ್ಯಾನ್, ಕ್ಯಾಬ್‌ನಂತಹ ಶಾಲಾ ವಾಹನದ ವ್ಯವಸ್ಥೆ ಇದೆ. ಸರ್ಕಾರಿ ಶಾಲೆಗಳಲ್ಲಿ ವಾಹನ ವ್ಯವಸ್ಥೆ ಬಹುತೇಕ ಕಡೆ ಇಲ್ಲ. ಇತ್ತೀಚೆಗೆೆ ಹೊಸದಾಗಿ ಖರೀದಿ ಮಾಡಿರುವ ಕೆಲ ಖಾಸಗಿ ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮರಾ ಇದೆ. ಈ ಸಂಖ್ಯೆ ಬಹಳ ಕಡಿಮೆ. ಹಳೇ ಶಾಲಾ ಬಸ್‌ಗಳಲ್ಲಿ ಸಿಸಿ ಕ್ಯಾಮರಾಗಳೇ ಇಲ್ಲ. ಹೊಸದಾಗಿ ಈ ಸೌಲಭ್ಯವನ್ನು ಅಳವಡಿಕೆ ಮಾಡಲು ಶಿಕ್ಷಣ ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ. ಅನುದಾನಿತ ಶಾಲೆಗಳಲ್ಲೂ ಇದೇ ಕಥೆ! 

ನಿರ್ವಹಣೆಯಲ್ಲೂ ಅಲಕ್ಷೃ:

ಸಕಾಲಕ್ಕೆ ತೆರಳುವ ಧಾವಂತದಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಲಾಗುತ್ತದೆ. ಸಂಚಾರ ನಿಯಮಗಳನ್ನೂ ಪಾಲನೆ ಮಾಡಲ್ಲ. ವಾಹನಗಳ ಫಿಟ್ನೆಸ್ ಪ್ರಮಾಣಪತ್ರ, ಅಗತ್ಯ ದಾಖಲೆಗಳ ಕೊರತೆ, ಮಕ್ಕಳ ಸುರಕ್ಷತೆಗೆ ಅಗತ್ಯವಾದ ಅಟೆಂಡರ್ ಅಥವಾ ಸಹಾಯಕರು ಇರಲ್ಲ. ಸುರಕ್ಷತಾ ವ್ಯವಸ್ಥೆಗಳ ನಿರ್ವಹಣೆಯಲ್ಲೂ ನಿರ್ಲಕ್ಷ್ಯ ತೋರಲಾಗುತ್ತಿದೆ.  

ಕಾರ್ಯರೂಪಕ್ಕೆ ಬರದ ನಿಯಮ

ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಸ್ಪೀಡ್ ಗವರ್ನರ್, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಗ್ರಿಲ್, ಕಿಟಕಿ ವ್ಯವಸ್ಥೆ ಇತ್ಯಾದಿ ವ್ಯವಸ್ಥೆ ಅಳವಡಿಸಿಕೊಂಡಿರಬೇಕು. 
ಇಂತಹ ವಾಹನಗಳ ನೋಂದಣಿ ಮಾಡುವ ಸಂದರ್ಭದಲ್ಲಿ ಹಾಗೂ ಅರ್ಹತಾ ಪತ್ರ ನವೀಕರಣಕ್ಕೆ ಬರುವ ಸಮಯದಲ್ಲಿ ಪರಿಶೀಲನೆಗೆ ಒಳಪಡಿಸಿ ಖಚಿತ ಪಡಿಸಿಕೊಂಡು ನಿಯಮಾನುಸಾರ ಕ್ರಮ ವಹಿಸಬೇಕಾಗಿದೆ. ಈ ಕುರಿತು ಆಯಾ ಶಾಲಾ ಮುಖ್ಯಸ್ಥರೊಂದಿಗೆ ಚರ್ಚಿಸಿ ಸೂಕ್ತ ತಿಳಿವಳಿಕೆ ನೀಡಬೇಕಿದೆ. ಆದರೆ, ಇದು ಯಾವುದೂ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ.

ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳ ಪ್ರಯಾಣ

ಕೆಲ ವ್ಯಾನ್‌ಗಳಲ್ಲಿ ಅನಧಿಕೃತವಾಗಿ ಗ್ಯಾಸ್ ಕಿಟ್(ಎಲ್‌ಪಿಜಿ/ ಸಿಎನ್‌ಜಿ) ಅಳವಡಿಸಲಾಗಿದೆ. ಇನ್ನೂ ಕೆಲ ವಾಹನಗಳಲ್ಲಿ ಮೂಲ ವಿನ್ಯಾಸ, ನೋಂದಣಿ ವಿವರಗಳಿಗೆ ವಿರುದ್ಧ ಬದಲಾವಣೆ ಮಾಡಲಾಗಿದೆ. ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯುತ್ತಿರುವುದು ಸಾಮಾನ್ಯ ಎನಿಸಿದೆ. 
ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಮೋಟಾರ್ ವಾಹನ ನಿಯಮಾವಳಿ 1989ರ ನಿಯಮ ಅಡಿ, ಕೇಂದ್ರ ಸರ್ಕಾರದ ಅಧಿಸೂಚನೆ, ಮಾರ್ಗೂಸೂಚಿ ಅನ್ವಯ ಶಾಲಾ ವಾಹನಗಳಲ್ಲಿ ವಿಎಲ್‌ಟಿಡಿ(ವಾಹನದ ಸ್ಥಳ ಟ್ರಾೃಕಿಂಗ್ ಸಾಧನ) ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದು ಸಹ ಪಾಲನೆಯಾಗುತ್ತಿಲ್ಲ.

ಅವಧಿ ಮೀರಿದ ಔಷಧ

ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಮಾರುತಿ ಓಮ್ನಿ ಕಾರಿನಲ್ಲಿ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ. ಸಿಲಿಂಡರ್ ಮೇಲೆಯೇ ಮಕ್ಕಳು ಕುಳಿತುಕೊಂಡಿರುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಸರಕು ಸಾಗಣೆಯ ಆಟೋದಲ್ಲಿ ಮಕ್ಕಳನ್ನು ನಿಲ್ಲಿಸಿಕೊಂಡೇ ಸಾಗಿಸಲಾಗುತ್ತಿದೆ. 
ಮಿನಿ ಬಸ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕರೆದೊಯ್ಯಲಾಗುತ್ತದೆ. ತುರ್ತು ನಿರ್ಗಮನ ದ್ವಾರವೂ ಇರಲ್ಲ. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಲ್ಲಿ ಅವಧಿ ಮೀರಿದ ಔಷಧ ಇಟ್ಟಿರುತ್ತಾರೆ ಎಂದು ತಿಳಿಸಿದ ಅಧಿಕಾರಿಯೊಬ್ಬರು, ಕೆಲವೊಂದು ವಾಹನಗಳು ರಸ್ತೆ ತೆರಿಗೆಯನ್ನೇ ಪಾವತಿಸಿಲ್ಲ. ವಾಹನಗಳ ಕವಚದ ಮೇಲ್ಭಾಗದಲ್ಲಿ ಶಾಲೆ ಹೆಸರು, ವಿಳಾಸವೂ ಹಾಕಿಲ್ಲ. ಹೀಗಾಗಿ, ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳ ಸುರಕ್ಷತೆ ಕುರಿತು ನಿರ್ಲಕ್ಷೃ: 

ಶಾಲೆಗೆ ಮಕ್ಕಳನ್ನು ಕಳುಹಿಸಲು ಬಹುತೇಕ ಪಾಲಕರು ಸ್ಕೂಲ್ ವ್ಯಾನ್ ಅನ್ನೇ ಅವಲಂಬಿಸಿದ್ದಾರೆ. ಆದರೆ, ಶಿಕ್ಷಣ ಸಂಸ್ಥೆಗಳು ಪಾಲಕರಿಂದ ಶಾಲಾ ವಾಹನ ಶುಲ್ಕ ಹೆಸರಿನಲ್ಲಿ ಸಾವಿರಗಟ್ಟಲೇ ಹಣ ವಸೂಲಿ ಮಾಡಿದರೂ, ಮಕ್ಕಳ ಸುರಕ್ಷತೆ ಕುರಿತು ನಿರ್ಲಕ್ಷೃ ತೋರುತ್ತಿವೆ. ಹಣ ಉಳಿಸಲು ಸುರಕ್ಷತಾ ಕ್ರಮ ಕಡೆಗೆ ಗಮನ ನೀಡುವುದಿಲ್ಲ ಎಂಬುದು ಪಾಲಕರ ಆರೋಪವಾಗಿದೆ.

ಅನಧಿಕೃತ ವಾಹನಗಳಲ್ಲೂ ಅವ್ಯವಸ್ಥೆ 

ಮಕ್ಕಳನ್ನು ಕರೆದುಕೊಂಡು ಹೋಗಲು ಕೆಲ ಪಾಲಕರು ಖಾಸಗಿ ವಾಹನದ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಆದರೆ, ಈ ಖಾಸಗಿ ವಾಹನಗಳಲ್ಲಿ ಯಾವ ಸೌಲಭ್ಯಗಳೂ ಇರಲ್ಲ. ಆಟೋರಿಕ್ಷಾ, ಓಮಿನಿ ಕಾರ್‌ಗಳಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿಕೊಂಡು ಹೋಗುತ್ತಾರೆ. 
ಯಾವುದೇ ಸುರಕ್ಷತಾ ಕ್ರಮವನ್ನೂ ಪಾಲನೆ ಮಾಡುತ್ತಿಲ್ಲ. ಆದರೂ, ಈ ಕುರಿತು ಚಿಂತೆ ಮಾಡದೆ ಕೆಲ ಪಾಲಕರು ತಾವು ನಿಯೋಜಿಸಿಕೊಂಡ ಖಾಸಗಿ ವಾಹನಗಳಲ್ಲೇ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇಂತಹ ವ್ಯಾನ್, ಆಟೋಗಳಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಇಲ್ಲವೇ ಇಲ್ಲ.
"

ಪ್ರಸ್ತಕ ಸಾಲಿನ ಆರಂಭದಲ್ಲೇ ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳಿಗೆ ಈ ಕುರಿತು ಸುತ್ತೋಲೆ ಕಳುಹಿಸಲಾಗಿದೆ. ಯಾವ ರೀತಿಯ ಅಗತ್ಯ ಕ್ರಮ ವಹಿಸಬೇಕು ಎಂಬುದರ ಕುರಿತು ಸೂಚನೆ ನೀಡಲಾಗಿದೆ. ಇದು ಉಲ್ಲಂಘನೆಯಾದರೆ ಕ್ರಮ ವಹಿಸಲಾಗುತ್ತದೆ. ಮಕ್ಕಳ ಹಕ್ಕುಗಳಿಗೆ ಹಾಗೂ ಅವರಿಗೆ ತೊಂದರೆಯಾಗದಂತೆ ಆಯಾ ಶಾಲೆಗಳು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು.

— ಡಿ.ಉದಯಕುಮಾರ್ ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net