ಪ್ರಾಯೋಜಕತ್ವದಲ್ಲಿ ದಸರಾ ಆಯೋಜಿಸಿ : ಎಚ್.ವಿಶ್ವನಾಥ ಸಲಹೆ

ವಿಧಾನಪರಿಷತ್ ಮಾಜಿ ಸದಸ್ಯ ಎಚ್.ವಿಶ್ವನಾಥ
ವಿಧಾನಪರಿಷತ್ ಮಾಜಿ ಸದಸ್ಯ ಎಚ್.ವಿಶ್ವನಾಥ
Published on

ಪ್ರಮುಖ ಮುಖ್ಯಾಂಶಗಳು

  • ಹಿಂದಿನ ಮಾದರಿಯಲ್ಲೇ ಈ ಸಲದ ದಸರಾ ನಡೆಸಿ.
  • ಡಿಂಗ್‌ಡಾಂಗ್ ಡಾನ್ಸ್‌ಗೆ ಯುವ ದಸರಾ ವೇದಿಕೆಯಾಗಬಾರದು.
  • ಕಲಾವಿದರ ಹೆಸರಿನಲ್ಲಿ ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ.
ಮೈಸೂರು: ಬರಗಾಲದ ಸಂದರ್ಭದಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಪ್ರಾಯೋಜಕತ್ವದಲ್ಲಿ ಆಯೋಜಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ವಿಶ್ವನಾಥ ಸಲಹೆ ನೀಡಿದರು.
ಬರಗಾಲ ಸಂದರ್ಭದಲ್ಲಿ ಹಿಂದೆಯೂ ಸರಳವಾಗಿ ದಸರಾ ಆಚರಣೆ ಮಾಡಲು ಆಗ್ರಹ ಕೇಳಿಬಂದಿತ್ತು. ಇದಕ್ಕೆ ಕಿವಿಗೊಡದೆ ಪ್ರಾಯೋಜಕತ್ವದಲ್ಲಿ ದಸರಾ ನಡೆಸಿ ಉಳಿದ ಹಣವನ್ನು ಸರ್ಕಾರಕ್ಕೆ ನೀಡಲಾಗಿತ್ತು. ಈ ಮಾದರಿಯಲ್ಲೇ ಈ ಸಲದ ದಸರಾ ನಡೆಸಿ. ಅದಕ್ಕಾಗಿ ಕೈಗಾರಿಕೋದ್ಯಮಿಗಳ ಸಭೆ ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿಂಗ್‌ಡಾಂಗ್ ಡಾನ್ಸ್‌ಗೆ ಯುವ ದಸರಾ ವೇದಿಕೆಯಾಗಬಾರದು. ಈ ಹಿಂದೆ ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಕೊಡುವುದೇ ಕಲಾವಿದರಿಗೆ ದೊಡ್ಡ ಭಾಗ್ಯವಾಗಿತ್ತು. ಈಗ ಕಲಾವಿದರ ಹೆಸರಿನಲ್ಲಿ ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ. ಲಕ್ಷಾಂತರ ರೂ.ಕೊಟ್ಟು ಅವರನ್ನು ಕರೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ದಸರಾವನ್ನು ಉತ್ತಮವಾಗಿ ನಡೆಸಲು ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳನ್ನು ಒಳಗೊಂಡ ಸಮಿತಿ ರಚಿಸಬೇಕು. ಈ ಕುರಿತು ಸಿಎಂ ಪತ್ರ ಬರೆದು ತಿಳಿಸುವೆ ಎಂದು ತಿಳಿಸಿದರು.

ಬ್ಲಾಕ್‌ಮೇಲ್ ತಂತ್ರ

ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ಬಿಡುಗಡೆ ಮಾಡದ ಸಿದ್ದರಾಮಯ್ಯ, ಈಗ ಈ ವರದಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ದೂರಿದರು.
ಸಿದ್ದರಾಮಯ್ಯ ಮತ್ತೆ ಅಹಿಂದ ಜಪ ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಅಹಿಂದ ಸಮುದಾಯಕ್ಕೆ ಯಾವುದೇ ಉಪಯೋಗ ಮಾಡಲಿಲ್ಲ. ಅಹಿಂದ ಕಟ್ಟಿದ ಪ್ರಮುಖ ನಾಯಕರನ್ನು ಸಿದ್ದರಾಮಯ್ಯ ಕಡೆಗಣಿಸಿದ್ದಾರೆ. ಈ ಹಿಂದೆ ಪರಮೇಶ್ವರ ಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯ ಕಾರಣರಾಗಿದ್ದರು. ಈ ಬಗ್ಗೆ ಹಲವು ಬಾರಿ ಸ್ವತಃ ಪರಮೇಶ್ವರ ಹೇಳಿದ್ದಾರೆ. ಆದರೀಗ ಅವರಿಂದಲೇ ಅಹಿಂದ ಸಮಾವೇಶ ಉದ್ಘಾಟನೆ ಮಾಡಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕುಟುಕಿದರು.
ದಲಿತ ವಿರೋಧಿ ನಡೆ
ಡಾ.ಎಚ್.ಸಿ.ಮಹದೇವಪ್ಪ ವಾಸವಿರುವ ಸರ್ಕಾರಿ ವಸತಿಗೃಹದ ಒಂದು ಭಾಗವನ್ನು ಸಚಿವ ಬೈರತಿ ಸುರೇಶ್ ಅಣತಿ ಮೇರೆಗೆ ಕೆಡವಲಾಗಿದೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಬೈರತಿ ಸುರೇಶ್ ಈ ರೀತಿ ಮಾಡಿಸಿದ್ದಾರೆ. ಮಹದೇವಪ್ಪ ಮನೆಯಲ್ಲಿ ವಾಸವಿರುವಾಗಲೇ ಈ ರೀತಿ ಮಾಡಿರೋದು ಸರಿಯಲ್ಲ. ಇದು ದಲಿತ ವಿರೋಧಿ ನಡೆ. ಈ ಹಿಂದೆ ಅಧಿಕಾರದಲ್ಲಿ ಇದ್ದ ಎಲ್ಲರೂ ಮನೆ ಖಾಲಿ ಮಾಡಿದ್ದಾರೆಯೇ? ಸಿದ್ದರಾಮಯ್ಯ ವಾಸವಿದ್ದ ಮನೆಯನ್ನು ಇನ್ನೂ ಖಾಲಿ ಮಾಡಿಲ್ಲ. ಮಹದೇವಪ್ಪರಿಗೆ ಮಾತ್ರ ಏಕೆ ಈ ರೀತಿ ಮಾಡಿದ್ದಾರೆ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಸಚಿವ ಸ್ಥಾನ ತಪ್ಪಿಸಿದ್ದರು: 

ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಎಚ್.ಎ.ವೆಂಕಟೇಶ್ ಅವರಂತಹ ಹಿರಿಯ ನಾಯಕರಿಗೆ ಸಚಿವ ಸ್ಥಾನ ತಪ್ಪಿಸಿದ್ದೇ ಸಿದ್ದರಾಮಯ್ಯ. ಮಗನಿಗಾಗಿ ಹಿರಿಯ ಶಾಸಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಎಚ್. ವಿಶ್ವನಾಥ್ ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net