ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಅಭ್ಯಂಜನ

*ಭಕ್ತರಿಗೆ ತೈಲ ನೀಡಿದ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ *ನರಕ ಚತುರ್ದಶಿ ವಿಶೇಷ ಸಂಭ್ರಮ
On Sunday, as part of Diwali-Narak Chaturdashi, Sri Vidyashreesha Theertha Swamiji was anointed with oil and performed abhyanjana.
ದೀಪಾವಳಿ-ನರಕ ಚತುರ್ದಶಿ ಅಂಗವಾಗಿ ಭಾನುವಾರ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರಿಗೆ ತೈಲ ಹಚ್ಚಿ ಅಭ್ಯಂಜನ ಮಾಡಿಸಲಾಯಿತು. ಡಾ.ಡಿ.ಪಿ.ಮಧುಸೂದನಾಚಾರ್ಯ, ಸುಘೋಶ ಆಚಾರ್ಯ, ಆಯಾಚಿತ ಶ್ರೀಶ ಆಚಾರ್ಯ ಇತರರು ಇದ್ದರು.
Published on: 

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ವ್ಯಾಸರಾಜರ ಮಹಾಸಂಸ್ಥಾನ ಮಠದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಭಾನುವಾರ ನಸುಕಿನಲ್ಲೇ ದೀಪಾವಳಿ ಸಂಭ್ರಮ ಮೇಳೈಸಿತ್ತು. ನರಕ ಚತುರ್ದಶಿ ಸಂದರ್ಭ ಮಠದ ಸಂಪ್ರದಾಯದಂತೆ ಬೆಳಗ್ಗೆ 4ಕ್ಕೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪ್ರತಿಮೆಗಳಿಗೆ ತೈಲ ಸಮರ್ಪಣೆಯನ್ನು ಮಾಡಿದರು. ನಂತರ ನೂರಾರು ಭಕ್ತರಿಗೆ ಗರಿಕೆ ಮೂಲಕ ತೈಲ ಪ್ರದಾನ ಮಾಡಿದರು.

ವಿದ್ಯಾರ್ಥಿಗಳಿಗೆ ಮತ್ತು ಹಿರಿಯರಿಗೆ ಮಾತೆಯರು ಆರತಿ ಬೆಳಗಿ, ಸಂಪ್ರದಾಯದ ಹಾಡುಗಳನ್ನು ಹಾಡಿ ಎಣ್ಣೆ ಶಾಸ್ತ್ರ ನೆರವೇರಿಸಿದರು. ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಮಠದ ಪ್ರಮುಖರು ಹಾಗೂ ಭಕ್ತರು ಇದೇ ಸಂದರ್ಭ ಶ್ರೀಗಳಿಗೆ ತೈಲ ಹಚ್ಚಿ ಅಭ್ಯಂಜನ ಮಾಡಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಶ್ರೀಗಳಿಂದ ತೈಲ ಪಡೆದ ವಿದ್ಯಾರ್ಥಿಗಳು ಪರಸ್ಪರ ಎಣ್ಣೆ ಹಚ್ಚಿಕೊಂಡು, ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ದೀಪಾವಳಿಯ ಸಾಲು ಸಾಲು ಆಚರಣೆಗಳಿಗೆ ಮುನ್ನುಡಿ ಬರೆದರು.

ನಂತರ ಶ್ರೀಗಳಿಂದ ಸಂಸ್ಥಾನ ಪೂಜೆ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ, ಪ್ರಮುಖರಾದ ಡಿ.ಪಿ. ಅನಂತಾಚಾರ್ಯ, ಯುವ ವಿದ್ವಾಂಸರಾದ ಪ್ರಣವ ಆಚಾರ್ಯ, ಸುಘೋಶ ಆಚಾರ್ಯ, ಆಯಾಚಿತ ಶ್ರೀಶ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ಅಭಿಜಿತ್ ರಾವ್ ಮತ್ತು ಉಪನ್ಯಾಸಕ ವರ್ಗದವರು, ದಾನಿಗಳು ಹಾಜರಿದ್ದರು.

ನಾಳೆ ಮಹಾ ಅಭಿಷೇಕ:

ದೀಪಾವಳಿ ಗೋ ಪಾಡ್ಯದ ಅಂಗವಾಗಿ ಮಂಗಳವಾರ (ನ.10ರಂದು) ಶ್ರೀಮಠದಲ್ಲಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರಿಂದ ಬೆಳಗ್ಗೆ 9ಕ್ಕೆ ಸಂಸ್ಥಾನ ಪ್ರತಿಮೆಗಳಿಗೆ ವಾರ್ಷಿಕ ಮಹಾ ಅಭಿಷೇಕ ನೆರವೇರಲಿದೆ. ಈ ಸಂದರ್ಭದಲ್ಲಿ ಪಂಡಿತರಿಂದ ಮತ್ತು ವಿದ್ಯಾಪೀಠದ ಹಿರಿಯ ವಿದ್ಯಾರ್ಥಿಗಳಿಂದ ಪ್ರವಚನ, ಗ್ರಂಥಗಳ ಸಾರ ವ್ಯಾಖ್ಯಾನ, ಪಾರಾಯಣಗಳು, ಗೋವುಗಳಿಗೆ ಗೋಗ್ರಾಸ ಸಮರ್ಪಣೆ, ವಿಶೇಷ ಪೂಜೆ ಸಂಪನ್ನಗೊಳ್ಳಲಿವೆ. ಪಾಡ್ಯದಿಂದ ಉತ್ಥಾನ ದ್ವಾದಶಿವರೆಗೆ ನಿತ್ಯವೂ ವಿದ್ಯಾರ್ಥಿಗಳಿಂದ ತುಳಸೀ ಸಂಕೀರ್ತನೆ ಸೇವೆ ನೆರವೇರಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.