ಕಾಡಾನೆ ಸೆರೆಗೆ ದಸರಾ ಆನೆ ಬಳಕೆಗೆ ಆಕ್ಷೇಪ

ಕೊಡಿಗಿನ ಕಾರ್ಯಾಚರಣೆಯಲ್ಲಿ ಧನಂಜಯ, ಪ್ರಶಾಂತ, ಸುಗ್ರೀವ ಭಾಗಿ
ಕೊಡಿಗಿನ ಕಾರ್ಯಾಚರಣೆಯಲ್ಲಿ ಧನಂಜಯ, ಪ್ರಶಾಂತ, ಸುಗ್ರೀವ ಭಾಗಿ
Published on

ಪ್ರಮುಖ ಮುಖ್ಯಾಂಶಗಳು

  • ಕೊಡಿಗಿನ ಕಾರ್ಯಾಚರಣೆಯಲ್ಲಿ ಧನಂಜಯ, ಪ್ರಶಾಂತ, ಸುಗ್ರೀವ ಭಾಗಿ

ಅವಿನಾಶ್ ಜೈನಹಳ್ಳಿ ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಇನ್ನೇನು ಎರಡು ತಿಂಗಳು ಬಾಕಿ. ಗಜಪಯಣಕ್ಕೂ ದಿನಗಣನೆ ಆರಂಭವಾಗಿದ್ದು, ಆ.26ರಂದು ಮೊದಲ ತಂಡದ ದಸರಾ ಆನೆಗಳು ಮೈಸೂರಿಗೆ ಆಗಮಿಸಲಿವೆ.
ಇಂತಹ ಮಹತ್ವದ ಸಂದರ್ಭದಲ್ಲಿ ದಸರಾ ಗಜಪಡೆಯ ಪ್ರಮುಖ ಆನೆಗಳನ್ನೇ ಕೊಡಗಿನ ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸುತ್ತಿರುವುದು ಆನೆ ಪ್ರಿಯರು ಹಾಗೂ ಪರಿಸರಾಸಕ್ತರ ಆಕ್ಷೇಪಕ್ಕೆ ಕಾರಣವಾಗಿದೆ.
ಗಜಪಡೆಯ ಧನಂಜಯ, ಪ್ರಶಾಂತ ಹಾಗೂ ಸುಗ್ರೀವನನ್ನು ಕಾಡಾನೆ ಸೆರೆ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಈ ವೇಳೆ ಆನೆಗಳಿಗೆ ಗಾಯ, ದೈಹಿಕ ಆಯಾಸ ಅಥವಾ ಒತ್ತಡ ಉಂಟಾದರೆ, ಅದರ ಪರಿಣಾಮ ದಸರಾ ತಾಲೀಮು ಹಾಗೂ ಜಂಬೂ ಸವಾರಿ ಸಿದ್ಧತೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ದಸರಾ ಗಜಪಡೆಯ ಆನೆಗಳ ಸುರಕ್ಷತೆ ಹಾಗೂ ಆರೋಗ್ಯದ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಕಾರ್ಯಾಚರಣೆಯಿಂದ ದಸರಾ ಗಜಪಡೆಯ ಆನೆಗಳನ್ನು ಕೂಡಲೇ ಬಿಡುಗಡೆ ಮಾಡಿ, ಅವುಗಳನ್ನು ದಸರಾ ಶಿಬಿರಕ್ಕೆ ಕರೆತಂದು ವಿಶೇಷ ಆರೈಕೆ ಹಾಗೂ ತರಬೇತಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸಾಮಾನ್ಯ ಸಂದರ್ಭಗಳಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ದಸರಾ ಆನೆಗಳನ್ನು ಬಳಸುವುದಕ್ಕೆ ಆಕ್ಷೇಪವಿಲ್ಲ. ಆದರೆ, ಗಜಪಯಣಕ್ಕೆ ಕೇವಲ ಮೂರ‌್ನಾಲ್ಕೂ ದಿನ ಬಾಕಿ ಇರುವಾಗ ಪ್ರಮುಖ ದಸರಾ ಆನೆಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿರುವುದಕ್ಕೆ ಆಕ್ಷೇಪ ಕೇಳಿ ಬಂದಿದೆ.
ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ದಸರಾ ಗಜಪಡೆಯಿಂದ ಕೈಬಿಡಲಾಗಿದೆ. ಹೀಗಾಗಿ, ಮುಂದಿನ ಅಂಬಾರಿ ಆನೆ ಯಾವುದು ಎಂಬ ಚರ್ಚೆ ನಡೆಯುತ್ತಿದೆ. ಧನಂಜಯ, ಮಹೇಂದ್ರ, ಸುಗ್ರೀವ ಹಾಗೂ ಪ್ರಶಾಂತ ಸೇರಿದಂತೆ ಹಲವು ಅನುಭವಿ ಗಂಡಾನೆಗಳ ಹೆಸರು ಮುಂಚೂಣಿಯಲ್ಲಿದೆ. ಇಂತಹ ಸಂದರ್ಭದಲ್ಲಿ ದಸರಾ ಗಜಪಡೆಯ ಅನುಭವಿ ಆನೆಗಳನ್ನೇ ಕಾಡಾನೆ ಸೆರೆ ಕಾರ್ಯಾಚರಣೆಗೆ ನಿಯೋಜಿಸಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಮೂಡಿದೆ. ವಿಶೇಷವಾಗಿ ಅಂಬಾರಿ ಹೊರುವ ಆನೆಯ ಆಯ್ಕೆ ಹಾಗೂ ತರಬೇತಿ ನಡೆಯಬೇಕಿರುವ ಸಮಯದಲ್ಲೇ ಕಾರ್ಯಾಚರಣೆಯಲ್ಲಿ ಆನೆಗಳನ್ನು ಬಳಸುವುದು ಸೂಕ್ತವೇ ಎಂಬ ಚರ್ಚೆಯೂ ಆರಂಭವಾಗಿದೆ.

ಮೂರು ಕಾಡಾನೆ ಸೆರೆಗೆ ದಸರಾ ಆನೆಗಳು

ಕೊಡಗಿನ ಸಿದ್ದಾಪುರ ಸುತ್ತಮುತ್ತ ಉಪಟಳ ನೀಡುತ್ತಿದ್ದ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆ.18ರಿಂದ ಕಾರ್ಯಾಚರಣೆ ಆರಂಭಿಸಿದೆ. ದುಬಾರೆ ಆನೆ ಶಿಬಿರದ ಧನಂಜಯ, ಪ್ರಶಾಂತ ಹಾಗೂ ಸುಗ್ರೀವ ಮತ್ತು ಹಾರಂಗಿ ಶಿಬಿರದ ಈಶ್ವರ, ಲಕ್ಷ್ಮಣ ಹಾಗೂ ಅಜೇಯ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.
ಈ ಪೈಕಿ ಆ.19ರಂದು ಒಂದು ಗಂಡಾನೆಯನ್ನು ಹಾಗೂ ಆ.21ರಂದು ಮತ್ತೊಂದು ಗಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಇನ್ನೊಂದು ಕಾಡಾನೆಯನ್ನು ಸೆರೆ ಹಿಡಿಯಬೇಕಿದೆ. ಆದರೆ, ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಧನಂಜಯ, ಪ್ರಶಾಂತ ಹಾಗೂ ಸುಗ್ರೀವ ದಸರಾ ಗಜಪಡೆಯ ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಬೇಕಿರುವ ಪ್ರಮುಖ ಆನೆಗಳಾಗಿವೆ.

ಹಿಂದಿನ ವ್ಯವಸ್ಥೆ ಬೇರೆಯಿತ್ತು

ಹಿಂದೆ ದಸರಾ ಗಜಪಡೆಗೆ ಆಯ್ಕೆಯಾಗುವ ಆನೆಗಳನ್ನು ಗಜಪಯಣಕ್ಕೂ ಹಲವು ದಿನಗಳ ಮುನ್ನವೇ ಶಿಬಿರದಲ್ಲಿ ಇರಿಸಿ, ಅವುಗಳ ಆರೋಗ್ಯ, ಆಹಾರ ಸೇವನೆ, ದೈಹಿಕ ಸಾಮರ್ಥ್ಯ ಹಾಗೂ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಬಳಿಕ ಹಂತ ಹಂತವಾಗಿ ತಾಲೀಮು ಆರಂಭಿಸಲಾಗುತ್ತಿತ್ತು. ಸದ್ಯ ಕೈಗೊಂಡಿರುವ ಕಾಡಾನೆ ಸೆರೆ ಕಾರ್ಯಾಚರಣೆ ಸಾಮಾನ್ಯ ಅರಣ್ಯ ಕಾರ್ಯಕ್ಕಿಂತ ಭಿನ್ನವಾಗಿದ್ದು, ಆನೆಗಳಿಗೆ ಹೆಚ್ಚಿನ ದೈಹಿಕ ಶ್ರಮ, ಅಪಾಯ ಹಾಗೂ ಒತ್ತಡ ಎದುರಾಗುವ ಸಾಧ್ಯತೆ ಇರುತ್ತದೆ. ಕಾರ್ಯಾಚರಣೆಯ ವೇಳೆ ಉಂಟಾಗಬಹುದಾದ ಗಾಯ, ಆಯಾಸ, ಒತ್ತಡ ಅಥವಾ ವಿಶ್ರಾಂತಿ ಹಾಗೂ ಆಹಾರ ಕ್ರಮದಲ್ಲಿನ ವ್ಯತ್ಯಯಗಳು ದಸರಾ ತಾಲೀಮು ಮೇಲೂ ಪರಿಣಾಮ ಬೀರಬಹುದು.
"

ಕನಿಷ್ಠ 15 ದಿನಗಳ ಮುನ್ನವೇ ದಸರಾ ಗಜಪಡೆಯ ಆನೆಗಳನ್ನು ಶಿಬಿರದಲ್ಲಿ ಇರಿಸಿ, ಸೂಕ್ತ ತರಬೇತಿ ಹಾಗೂ ಆರೈಕೆ ನೀಡಬೇಕಿತ್ತು. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆಗಳಿಗೆ ಏನಾದರೂ ತೊಂದರೆಯಾದರೆ ಹೊಣೆ ಯಾರು? ಗಜಪಯಣಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಅವುಗಳನ್ನು ಕೂಡಲೇ ಕಾರ್ಯಾಚರಣೆಯಿಂದ ಬಿಡಿಸಿ ದಸರಾ ಶಿಬಿರಕ್ಕೆ ಕಳುಹಿಸಬೇಕು.

— ಎಂ.ಎಸ್. ಗುರುರಾಜ್ ಶೆಟ್ಟಿ, ಪರಿಸರ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net