ಬರಗಾಲದಲ್ಲಿ ರಾಜಕೀಯ ಪ್ರಹಸನ ಬೇಡ: ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ

ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಆಡಳಿತ ಹಾಗೂ ವಿರೋಧ ಪಕ್ಷಗಳು ರೈತರ ಸಮಸ್ಯೆಯ ಕಡೆ ಗಮನ ಹರಿಸಬೇಕು
  • ಎಲ್ಲ ಪಕ್ಷದ ಜನಪ್ರತಿನಿಧಿಗಳು ಕಂಡಾಗಲೆಲ್ಲ ರೈತರು ಪ್ರತಿಭಟಿಸಬೇಕಾಗುತ್ತದೆ
ಮೈಸೂರು:ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಇರುವಾಗ ರಾಜಕೀಯ ಪಕ್ಷಗಳು ಆರೋಪ, ಪ್ರತ್ಯಾರೋಪ, ರಾಜೀನಾಮೆ ಎನ್ನುವ ಪ್ರಹಸನದಲ್ಲಿ ತೊಡಗಿವೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಎಲ್ಲ ಜನಪ್ರತಿನಿಧಿಗಳ ವಿರುದ್ಧ ರೈತರು ಪ್ರತಿಭಟಿಸಬೇಕಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.
ಸರ್ಕಾರ ಸಮರ್ಪಕವಾಗಿ ಬರ ಪರಿಸ್ಥಿತಿ ನಿರ್ವಹಿಸಬೇಕು. ಆಡಳಿತ ಹಾಗೂ ವಿರೋಧ ಪಕ್ಷಗಳು ರೈತರ ಸಮಸ್ಯೆಯ ಕಡೆ ಗಮನ ಹರಿಸಬೇಕು. ಇಲ್ಲವಾದರೆ ಎಲ್ಲ ಪಕ್ಷದ ಜನಪ್ರತಿನಿಧಿಗಳು ಕಂಡಾಗಲೆಲ್ಲ ರೈತರು ಪ್ರತಿಭಟಿಸಬೇಕಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಆಡಳಿತ ಹಾಗೂ ವಿರೋಧ ಪಕ್ಷ ಎರಡಕ್ಕೂ ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ಗಮನ ಹರಿಸಬೇಕು ಎನ್ನುವ ಚಿಂತೆ ಇಲ್ಲ. ಯರ‌್ಯಾರದೋ ರಾಜೀನಾಮೆ, ಟೀಕೆ, ಟಿಪ್ಟಣಿ, ಆರೋಪ, ಪ್ರತ್ಯಾರೋಪದ ವಿಷಯದಲ್ಲಿ ಮುಳುಗಿವೆ ಎಂದು ದೂರಿದರು.
ಸರ್ಕಾರ ರೈತರ ನೆರವಿಗೆ ಧಾವಿಸಲಿ:
ರಾಜ್ಯದ ರೈತರು ಬರ ಪರಿಸ್ಥಿತಿಗೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿಯುವ ಆತಂಕ ಎದುರಾಗಿದೆ. ಹೀಗಾಗಿ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಪ್ರತಿಪಕ್ಷಗಳು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ನಾಗೇಂದ್ರ ಹೇಳಿದರು.
ವಿಶೇಷ ತೆರಿಗೆ ವಿಧಿಸಲಿ:
ರಾಜ್ಯದ ಎಲ್ಲ ತಾಲೂಕು ಬರ ಪೀಡಿತ ಎಂದು ಘೋಷಿಸಬೇಕು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನೀತಿಗಳನ್ನು ಪಕ್ಕಕ್ಕಿಟ್ಟು ತನ್ನದೇ ಆದ ಸಂಪನ್ಮೂಲದಿಂದ ಸರ್ಕಾರ, ಸಂಕಷ್ಟದಲ್ಲಿರು ರೈತರು, ದುಡಿಯುವ ಜನರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು. ಹಣವಿಲ್ಲ ಎಂದಾದರೆ ಕಾರ್ಪೋರೇಟ್ ವಲಯದ ಮೇಲೆ ವಿಶೇಷ ತೆರಿಗೆ ವಿಧಿಸಲಿ, ಜತೆಗೆ ಸಿಎಂ ಜೋಳಿಗೆ ಹಿಡಿದು ಜನರ ಬಳಿಗೆ ಬರಲಿ. ಜನರು ಉದಾರವಾಗಿ ನೆರವು ನೀಡುತ್ತಾರೆ *****ಎಂದರು.
ಸಾಲಮನ್ನಾ ಮಾಡಲಿ:
ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡತಂದು ರೈತರ ಸಾಲಮನ್ನಾಕ್ಕೆ ಆಗ್ರಹಿಸಬೇಕು. ಬ್ಯಾಂಕುಗಳು ಸಾಲದ ನೆಪದಲ್ಲಿ ರೈತರಿಗೆ ನೋಟಿಸ್ ನೀಡುವುದು, ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು. ನಗರಕ್ಕೆ ಹೊಂದಿಕೊಂಡಂತಿರುವ ಮರಸೆ, ಮದರಗಳ್ಳಿಗಳ ಫಲವತ್ತಾದ ಜಮೀನು ಸ್ವಾಧೀನ ಕ್ರಮ ಕೆಐಎಡಿಬಿ ಬಿಡಬೇಕು, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ, ಸರ್ಕಾರ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ನಾಗೇಂದ್ರ ಒತ್ತಾಯಿಸಿದರು.
ಮುಖಂಡರಾದ ಹೊಸಕೋಟೆ ಬಸವರಾಜು, ನೇತ್ರಾವತಿ, ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್, ಕೆ.ಜಿ. ಮಹೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net