ಯಾರಿಗೂ ಅಧಿಕಾರ ಶಾಶ್ವತವಲ್ಲ

ಅಧಿಕಾರ
ಅಧಿಕಾರ
Published on
ಮೈಸೂರು: ಯಾರಿಗೂ ಅಧಿಕಾರ ಶಾಶ್ವತವಲ್ಲ. ನಾಯಕತ್ವದ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ತನ್ವೀರ್ ಸೇಠ್ ಅವರು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಈ ಹಿಂದೆಯೂ ನಾನು ಇದನ್ನೇ ಹೇಳಿದ್ದೇನೆ. ಜನರು ನಮಗೆ ಅಶೀರ್ವಾದ ಮಾಡಿ, 136 ಶಾಸಕರನ್ನು ಗೆಲ್ಲಿಸಿರುವುದರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಯತೀಂದ್ರ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅವರ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಡಾ.ಯತೀಂದ್ರ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿ, ಕೇವಲ ನನ್ನ ಕ್ಷೇತ್ರವಲ್ಲದೆ, ರಾಜ್ಯದಲ್ಲಿರುವ ಎಲ್ಲರ ಕ್ಷೇತ್ರಗಳಲ್ಲೂ ಹಸ್ತಕ್ಷೇಪ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಸಮಯ ಬಂದಾಗ ಅದನ್ನು ಹೇಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನವ್ಯಕ್ತಪಡಿಸಿದರು.
ಕೆಲ ಅಧಿಕಾರಿಗಳು ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ರೀತಿ ವರ್ತನೆ ತೋರುತ್ತಿದ್ದಾರೆ. ನಾವು ಕೂಡ ಶಂಖ ಊದುವ ಕೆಲಸ ಮಾಡುತ್ತೇವೆ. ನನ್ನ ಕ್ಷೇತ್ರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆ ಅಧಿಕಾರಿಗಳು ಶಂಖದಿಂದ ಬಿದ್ದರೆ ಮಾತ್ರ ತೀರ್ಥ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ತನ್ವೀರ್ ಸೇಠ್ ಯತಿಂದ್ರ ವಿರುದ್ಧ ಕಿಡಿಕಾರಿದರು.
ಸಂಪುಟ ಪುನಾರಚನೆ ಜನವರಿಯಲ್ಲೇ ಆಗಲಿದೆ ಎನ್ನುತ್ತಿದ್ದರು. ಆದರೆ ಯಾವ ಜನವರಿ ಅಂತ ಹೇಳಿಲ್ಲ ಎಂದು ಮುಗುಮ್ಮಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net