ಮೇಲ್ಸೇತುವೆಗಾಗಿ 350 ಮರ ಕಡಿಯುವುದು ಬೇಡ

‘ಪರಿಸರಕ್ಕಾಗಿ ನಾವು’ ಸಂಘಟನೆ ನೇತೃತ್ವದಲ್ಲಿ ಪರಿಸರ ತಜ್ಞರು, ಪರಿಸರ ಹೋರಾಟಗಾರರು ಭಾನುವಾರ ಸಭೆ ನಡೆಸಿದರು. ಪರಶುರಾಮೇಗೌಡ, ಬಡಗಲಪುರ ನಾಗೇಂದ್ರ, ಒಂಬತ್ಕೆರೆ, ಮನ್ಸೂರ್ ಅಹ್ಮದ್ ಇತರರಿದ್ದರು.
‘ಪರಿಸರಕ್ಕಾಗಿ ನಾವು’ ಸಂಘಟನೆ ನೇತೃತ್ವದಲ್ಲಿ ಪರಿಸರ ತಜ್ಞರು, ಪರಿಸರ ಹೋರಾಟಗಾರರು ಭಾನುವಾರ ಸಭೆ ನಡೆಸಿದರು. ಪರಶುರಾಮೇಗೌಡ, ಬಡಗಲಪುರ ನಾಗೇಂದ್ರ, ಒಂಬತ್ಕೆರೆ, ಮನ್ಸೂರ್ ಅಹ್ಮದ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರವಾದಿಗಳ ಒಕ್ಕೊರಲ ಆಗ್ರಹ
  • ಮರಗಳ ಹನನ ವಿರೋಧಿಸಿ ಪ್ರತಿಭಟನಾ ಸಭೆ
ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಿಸಲು ನಮ್ಮ ವಿರೋಧವಿಲ್ಲ. ಆದರೆ, ಅದಕ್ಕಾಗಿ 350 ಮರಗಳನ್ನು ಕಡಿಯುವುದು ಸರಿಯಲ್ಲ. ತೀರಾ ಅಗತ್ಯವಿರುವಷ್ಟು ಮಾತ್ರ ರಸ್ತೆ ವಿಸ್ತರಣೆ ಮಾಡಲಿ. ಅಭಿವೃದ್ಧಿ ಹೆಸರಲ್ಲಿ ಮೈಸೂರಿನ ಹಸಿರು ವಲಯದ ಮೇಲೆ ದೌರ್ಜನ್ಯ ಮಾಡದೆ, ಅನಗತ್ಯವಾಗಿ ಮರ ಕಡಿಯುವುದಕ್ಕೆ ಕಡಿವಾಣ ಹಾಕಿ ಸುಸ್ಥಿರ ಅಭಿವೃದ್ಧಿಗೆ ಪೂಕರವಾಗಿ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಬನ್ನಿಮಂಟಪದ ಮಿಲನ್ ಫಂಕ್ಷನ್ ಹಾಲ್ ಎದುರಿನ ಪಾರ್ಕ್‌ನಲ್ಲಿ ಪರಿಸರಕ್ಕಾಗಿ ನಾವು ಸಂಘಟನೆ ನೇತೃತ್ವದಲ್ಲಿ ಮರಗಳ ಹನನ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಪರಿಸರವಾದಿಗಳು, ರೈತ ಮುಖಂಡರು ಪಾಲ್ಗೊಂಡು ಒಕ್ಕೊರಲಿನಿಂದ ಮರಗಳ ಹನನ ವಿರೋಧಿಸಿದರು. ಇದಕ್ಕೂ ಮೊದಲು ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಿಸಲು 350 ಮರಗಳನ್ನು ಕಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ‘ಪರಿಸರಕ್ಕಾಗಿ ನಾವು’ ಸಂಘಟನೆ ನೇತೃತ್ವದಲ್ಲಿ ಪರಿಸರ ತಜ್ಞರು, ಪರಿಸರ ಹೋರಾಟಗಾರರು ಮತ್ತು ಬಾಧಿತ ಪ್ರದೇಶಗಳ ಸ್ಥಳೀಯರು ಜತೆಗೂಡಿ ಮರಗಳ ಪರಿಶೀಲನೆ ನಡೆಸಿದರು. ನಂತರ ಈ ಮರಗಳನ್ನು ಉಳಿಸುವ ಬಗ್ಗೆ ಚರ್ಚೆ ಮಾಡಿದರು.
‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಮೇಲ್ಸೇತುವೆ ನಿರ್ಮಿಸಲು ನಮ್ಮ ವಿರೋಧವಿಲ್ಲ. ಆದರೆ, ಅದಕ್ಕಾಗಿ 350 ಮರಗಳನ್ನು ಕಡಿಯುವುದು ಸರಿಯಲ್ಲ. ತೀರಾ ಅಗತ್ಯವಿರುವಷ್ಟು ಮಾತ್ರ ರಸ್ತೆ ವಿಸ್ತರಣೆ ಮಾಡಲಿ ಎಂದು ಹೇಳಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಅಭಿವೃದ್ಧಿ ಹೆಸರಲ್ಲಿ ಹಸಿರು ವಲಯದ ಮೇಲೆ ದೌರ್ಜನ್ಯ ಮಾಡಿದರೆ ಸಹಿಸುವುದಿಲ್ಲ. ಹಸಿರು, ಪರಿಸರವಿದ್ದರೆ ನಾವು. ಹಸಿರೇ ಕಣ್ಮರೆಯಾದರೆ ಜನರು ಬದುಕಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಫ್ಲೈ ಓವರ್, ರಸ್ತೆ ವಿಸ್ತರಣೆಗಾಗಿ ಅವೈಜ್ಞಾನಿಕವಾಗಿ ಮರ ಕಡಿಯಬಾರದು. ಬೆಂಗಳೂರಿಂದ ಮೈಸೂರು ಕಡೆ ಹೆಚ್ಚಿನ ವಾಹನಗಳು ಬರುತ್ತಿವೆ. ಅವುಗಳಲ್ಲಿ ಬಹುತೇಕ ವಾಹನಗಳು ಮಡಿಕೇರಿ ಮಾರ್ಗವಾಗಿ ತೆರಳುತ್ತವೆ. ಶ್ರೀರಂಗಪಟ್ಟಣ ಬಳಿ ಕುಶಾಲನಗರದ ಕಡೆಗೆ ಹೊಸ ಹೈವೇ ರಸ್ತೆ ನಿರ್ಮಾಣವಾಗುತ್ತಿದ್ದು, ಆ ರಸ್ತೆ ಕಾಮಗಾರಿ ಮುಗಿದ ಮೇಲೆ ಮಡಿಕೇರಿ, ಮಂಗಳೂರು, ಕೇರಳ ಕಡೆಗೆ ಹೋಗುವ ವಾಹನಗಳು ಹೊಸ ರಸ್ತೆಯಲ್ಲೇ ಸಂಚರಿಸುತ್ತವೆ. ಇದರಿಂದ ಮೈಸೂರಿನತ್ತ ಬರುವ ವಾಹನಗಳ ಸಂಖ್ಯೆ ಕ್ಷೀಣಿಸುತ್ತದೆ. ಈ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಫ್ಲೈ ಓವರ್‌ಗೆ ಅನಗತ್ಯವಾಗಿ ಮರ ಕಡಿಯದೇ ಲಭ್ಯವಿರುವ ಸ್ಥಳದಲ್ಲೇ ಫ್ಲೈ ಓವರ್ ಕಾಮಗಾರಿ ನಡೆಸಬೇಕು. ಅನಗತ್ಯವಾಗಿ ಮರಗಳನ್ನು ತೆರವು ಮಾಡಬಾರದು ಎಂದು ಆಗ್ರಹಿಸಿದರಲ್ಲದೆ, ಸುಸ್ಥಿರ ಅಭಿವೃದ್ಧಿ ಬಗ್ಗೆ ಪರಿಸರವಾದಿಗಳೇ ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಹೋರಾಟಗಾರ ಮೇಜರ್ ಜನರಲ್ ಒಂಬತ್ಕೆರೆ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಯತ್ನದಿಂದ ಮೈಸೂರಿನಲ್ಲಿ ಇಕ್ಕೆಲಗಳಲ್ಲೂ ಹಸಿರು ತುಂಬಿದ ಮರಗಳಿರುವ ಅಗಲವಾದ ರಸ್ತೆಗಳಿವೆ. ಮರಗಳನ್ನು ನೈಸರ್ಗಿಕ ಸಂಪತ್ತು ಎಂದು ನಾಗರಿಕರು ತಿಳಿಯಬೇಕು ಎಂದು ಬಯಸುತ್ತಿದ್ದ ಅವರು 1903ರಲ್ಲಿ ರಚಿಸಿದ ಸಿಐಟಿಬಿಯ ಪ್ರಮುಖ ಕಾರ್ಯಗಳಲ್ಲಿ ಮರಗಳಿಂದ ಕೂಡಿದ ರಸ್ತೆಗಳ ನಿರ್ಮಾಣಕ್ಕೆ ಒತ್ತು ಕೊಟ್ಟಿದ್ದರು ಎಂದು ತಿಳಿಸಿದರು.
ಡಿ.ದೇವರಾಜ ಅರಸು ಅವರು 1976ರಲ್ಲಿ ಕರ್ನಾಟಕ ಮರಗಳ ಸಂರಕ್ಷಣಾ ಕಾಯಿದೆ ಜಾರಿಗೆ ತಂದರು. ಕೈಗಾರಿಕೀಕರಣ ಮತ್ತು ಜನಸಂಖ್ಯೆಯ ಹೆಚ್ಚಳದಿಂದ ನಗರ ಪ್ರದೇಶಗಳ ಮರಗಳ ಹಾನಿ ಹೆಚ್ಚುತ್ತಿದೆ. ಹವಾಮಾನದ ತೀವ್ರತೆ ತಗ್ಗಿಸುವ, ಕಲುಷಿತ ವಾತಾವರಣವನ್ನು ಶುದ್ಧೀಕರಿಸುವ, ಶಬ್ದವನ್ನು ಕಡಿಮೆ ಮಾಡುವ, ನೆರಳು ನೀಡುವ ಮತ್ತು ಸೌಂದರ್ಯದ ಸೊಬಗು ನೀಡುವ ಮರಗಳನ್ನು ಕಡಿಯುವುದನ್ನು ನಿರ್ಬಂಧಿಸುವುದು ಕಾಯಿದೆಗಳ ಪ್ರಮುಖ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಪಿಯುಸಿಎಲ್ ಸದಸ್ಯರಾದ ಮನ್ಸೂರ್ ಅಹ್ಮದ್ ಮಾತನಾಡಿ, ವಾಹನಗಳ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ತಗ್ಗಿಸಲು ಎಸ್‌ಎಸ್ ನಗರ ಮತ್ತು ಸಿದ್ದಿಕಿ ನಗರಗಳಲ್ಲಿ ಹೆಚ್ಚಿನ ಮರಗಳನ್ನು ಬೆಳೆಸುವ ಬದಲಿಗೆ ಇರುವ ಮರಗಳನ್ನು ಕಡಿಯುವುದು ಸರಿಯಲ್ಲ. ಇಲ್ಲಿನ ಮರಗಳನ್ನು ಉಳಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ನಿವೃತ್ತ ಉಪನ್ಯಾಸಕ ಪ್ರೊ.ಕಾಳಚನ್ನೇಗೌಡ ಮಾತನಾಡಿ, ಮೈಸೂರಿನಲ್ಲಿ ಹಲವು ಕಡೆ ಮರಗಳನ್ನು ಉಳಿಸಿಕೊಂಡು ರಸ್ತೆ ವಿಸ್ತರಣೆ ಮಾಡಲಾಗಿದೆ. ನಾವೆಲ್ಲ ಹೋರಾಟ ಮಾಡಿದರೆ ಇಲ್ಲಿನ ಮರಗಳನ್ನೂ ಉಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
‘ರೀಪ್ ಬೆನಿಫಿಟ್’ ಸಂಸ್ಥೆಯ ಸಾರಾ ಮಿಶ್ರ ಮಾತನಾಡಿದರು.
ವಕೀಲ ಮನ್ನನ್ ಖಾನ್, ಪರಿಸರ ಹೋರಾಟಗಾರ್ತಿ ಬಾನು ಮೋಹನ್, ಪರಿಸರ ಕಾರ್ಯಕರ್ತ ಸಂಜಯ್ ದತ್ತಾತ್ರಿ, ಪನಾಸಂ ಕಾರ್ಯಕರ್ತರಾದ ಬಾನು ಪ್ರಶಾಂತ್, ವಿಶ್ವನಾಥ್, ಗಂಟಯ್ಯ, ಲೋಲಕುಮಾರ್, ದರ್ಶನ್, ನಿರಂಜನ್, ಅಕ್ಬರ್, ಶಿವಶಂಕರ್, ಶ್ರೀಕಾಂತ್, ಗೀತಾ , ಐಶ್ವರ್ಯ, ರೈತ ಸಂಘದ ಹೊಸಕೋಟೆ ಬಸವರಾಜು, ಮರಂಕಯ್ಯ ಹಾಗೂ ಸ್ಥಳೀಯರಾದ ಪ್ರೊ.ನಬೀಜಾನ್, ಘಯಾಜ್ ಅಹ್ಮದ್, ಸರೂಷ್, ಮುದರ್ಸಿ ಅಲಿ ಖಾನ್, ಖುರ್ಷೀದ್ ಅಹ್ಮದ್, ರವಿ ಬಳೆ, ನೇಹಾ ಅ್ಸರ್ ಮತ್ತಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net