ದಸರಾ ಸಂಭ್ರಮದಲ್ಲಿ ಕಂಬಳ ಬೇಡ: ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್
Published on

ಪ್ರಮುಖ ಮುಖ್ಯಾಂಶಗಳು

  • ಕಂಬಳವನ್ನು ಬೇಕಿದ್ದರೆ ಸರ್ಕಾರವೇ ಕರಾವಳಿ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಮಾಡಲಿ. ಮೈಸೂರಿನವರು ಅದಕ್ಕೆ ಕೈ ಜೋಡಿಸುತ್ತೇವೆ
  • ದಸರಾ ಸಾಂಸ್ಕೃತಿಕ ಹಿನ್ನೆಲೆಯೇ ಬೇರೆ, ಕಂಬಳವೇ ಬೇರೆ. ದಸರಾಕ್ಕೆ ಎಲ್ಲವನ್ನೂ ಜೋಡಿಸುವುದು ಸರಿಯಲ್ಲ
ಮೈಸೂರು:ಕರಾವಳಿ ಭಾಗದ ಆಚರಣೆಯಾದ ಕಂಬಳವನ್ನು ಮೈಸೂರಿನಲ್ಲಿ ನಡೆಸುವುದು ಬೇಡ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿರುವುದಾಗಿ ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ ಕುರಿತು ಎರಡು ವಾರದಿಂದ ಸಾಕಷ್ಟು ಚರ್ಚೆಗಳಾಗುತ್ತಿವೆ. ಕರಾವಳಿ ಭಾಗದ ಆಚರಣೆ ಮೈಸೂರಿಗೆ ಬೇಡ. ಇದೊಂದು ಅನವಶ್ಯಕವಾದ ಬೆಳವಣಿಗೆ. ಕಂಬಳವನ್ನು ಬೇಕಿದ್ದರೆ ಸರ್ಕಾರವೇ ಕರಾವಳಿ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಮಾಡಲಿ. ಮೈಸೂರಿನವರು ಅದಕ್ಕೆ ಕೈ ಜೋಡಿಸುತ್ತೇವೆ. ಆದರೆ, ಮೈಸೂರು ಭಾಗದಲ್ಲಿ ಬೇಡ ಎಂದು ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ. ಮುಖ್ಯಮಂತ್ರಿಗಳು ಅಗತ್ಯಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಕಂಬಳ ವಿಚಾರದಲ್ಲಿ ಶಾಸಕ ಅಶೋಕ ರೈ ನನಗೆ ಯಾವ ವಿವರಣೆ ನೀಡಿಲ್ಲ. ಅದರ ಅಗತ್ಯವೂ ಇಲ್ಲ. ದಸರಾ ಸಾಂಸ್ಕೃತಿಕ ಹಿನ್ನೆಲೆಯೇ ಬೇರೆ, ಕಂಬಳವೇ ಬೇರೆ. ದಸರಾಕ್ಕೆ ಎಲ್ಲವನ್ನೂ ಜೋಡಿಸುವುದು ಸರಿಯಲ್ಲ. ಜನರ ಭಾವನೆ ಕೂಡ ಇದೇ ಆಗಿದೆ. ಸರ್ಕಾರ ಕಂಬಳ ಮಾಡಿದರೆ ಅದು ಮೈಸೂರು ಜನರ ವಿರುದ್ಧವಾಗಿ ಮಾಡಿದಂತೆ. ಮೂರು ವರ್ಷಗಳಿಂದ ದಸರಾ ಯಶಸ್ವಿಯಾಗಿ ನಡೆದಿಲ್ಲ. ಆದ್ದರಿಂದ ನಾವು ಕಂಬಳಕ್ಕೆ ವಿರುದ್ಧ ಇಲ್ಲ. ದಸರಾ ವೇಳೆ ಕಂಬಳ ಬೇಡ ಎಂದಿದ್ದೇನೆ ಅಷ್ಟೇ. ಇರುವ ದಸರಾವನ್ನೇ ಅಚ್ಚುಕಟ್ಟಾಗಿ ಮಾಡಲಿ ಎಂದು ಹೇಳಿದರು.
ಪ್ರತಿ ದಸರಾದಲ್ಲೂ ಒಂದಿಲ್ಲೊಂದು ವಿವಾದ ಸೃಷ್ಟಿಯಾಗುತ್ತಿದೆ. ವಿವಾದ, ಹೋರಾಟದ ನಡುವೆ ದಸರಾ ನಡೆಯುವಂತೆ ಆಗಿದೆ. ದಸರಾ ವೇಳೆ ದಸರಾಗೆ ಪ್ರಾಮುಖ್ಯತೆ ನೀಡಬೇಕಿದೆ. ಸರ್ಕಾರ ಸಾರ್ವಜನಿಕ ಅಭಿಪ್ರಾಯದಂತೆ ದಸರಾ ಮಾಡಲಿ. ಕಳೆದ ದಸರಾ ಸಮಯದಲ್ಲಿ ನಗರದಲ್ಲಿ ಎರಡು ಕೊಲೆಗಳು ಆಗಿದ್ದವು. ಆದ್ದರಿಂದ ದಸರಾ ಸಮೀಪಿಸುತ್ತಿರುವಂತೆ ರಕ್ಷಣಾ ಕಾರ್ಯಗಳನ್ನು ಹೆಚ್ಚು ಮಾಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಪಾಸ್ ವ್ಯವಸ್ಥೆ ರದ್ದು ಮಾಡಲಿ
ದಸರಾ ಸಮಯದಲ್ಲಿ ಪಾಸ್ ವಿತರಣೆಯಿಂದ ಅನೇಕ ಗೊಂದಲ ಉಂಟಾಗುತ್ತಿವೆ. ಪಾಸ್‌ಗಾಗಿ ನೂಕು ನುಗ್ಗಲು ಉಂಟಾಗುತ್ತಿದೆ. ಆದ್ದರಿಂದ ದಸರಾ ಪಾಸ್ ವ್ಯವಸ್ಥೆ ರದ್ದುಪಡಿಸುವಂತೆ ಸಲಹೆ ನೀಡಿರುವುದಾಗಿ ಸಂಸದ ಯದುವೀರ್ ಹೇಳಿದರು.
ಗ್ಲೋಬಲ್ ಟೆಂಡರ್ ಮೂಲಕ ದಸರಾ ಟಿಕೆಟ್ ಮಾರಾಟ ಮಾಡಲಿ. ದಸರಾ ವೇಳೆ ಪಾಸ್‌ಗಳದ್ದೇ ದೊಡ್ಡ ಗದ್ದಲ ನಡೆಯುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡುವ ಕೆಲಸ ಬಿಟ್ಟು ಪಾಸ್ ಬಗ್ಗೆ ಜಟಾಪಟಿ ಇರುತ್ತದೆ. ಈ ಗೊಂದಲ ತಪ್ಪುವಂತೆ ಮಾಡಲು ಪಾಸ್ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ರದ್ದು ಮಾಡಿ ಎಂದಿದ್ದೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net