ಹೊಸ ತೆರಿಗೆ ಕಾಯ್ದೆ ಸರಳ, ತೆರಿಗೆದಾರ ಸ್ನೇಹಿ: ಹೆಚ್ಚುವರಿ ಆಯುಕ್ತೆ ಕಲ್ಪಲತಾ ರಾಜನ್ ಹೇಳಿಕೆ

ಹೊಸ ಆದಾಯ ತೆರಿಗೆ ಕಾಯ್ದೆ ಕುರಿತು ನಗರದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಕಲ್ಪಲತಾ ರಾಜನ್ ಉದ್ಘಾಟಿಸಿದರು. ಹರೀಶ್ ಶೆಣೈ, ನಾಗರಾಜ್ ವಿ. ಬೈರಿ, ಪ್ರಭಾಕರ್‌ರಾವ್, ಪ್ರವೀಣ್ ಪಾಲ್, ಆರ್.ರಂಗನಾಥನ್ ಇತರರು ಇದ್ದರು.
ಹೊಸ ಆದಾಯ ತೆರಿಗೆ ಕಾಯ್ದೆ ಕುರಿತು ನಗರದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಕಲ್ಪಲತಾ ರಾಜನ್ ಉದ್ಘಾಟಿಸಿದರು. ಹರೀಶ್ ಶೆಣೈ, ನಾಗರಾಜ್ ವಿ. ಬೈರಿ, ಪ್ರಭಾಕರ್‌ರಾವ್, ಪ್ರವೀಣ್ ಪಾಲ್, ಆರ್.ರಂಗನಾಥನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 2025ರ ಹೊಸ ಆದಾಯ ತೆರಿಗೆ ಕಾಯ್ದೆ ಹೆಚ್ಚು ಸರಳ, ಪಾರದರ್ಶಕ ಹಾಗೂ ತೆರಿಗೆದಾರ ಸ್ನೇಹಿಯಾಗಿರಲಿದೆ
  • ಹೊಸ ಕಾಯ್ದೆ ಸಮಸ್ಯೆಗಳಿಗೆ ಪರಿಹಾರ ನೀಡಿ, ತೆರಿಗೆ ನಿಶ್ಚಿತತೆ ಮತ್ತು ಡಿಜಿಟಲ್ ಸುಗಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ
ಮೈಸೂರು:ಹೊಸ ಆದಾಯ ತೆರಿಗೆ ಕಾಯ್ದೆ ಹೆಚ್ಚು ಸರಳ, ಪಾರದರ್ಶಕ ಹಾಗೂ ತೆರಿಗೆದಾರ ಸ್ನೇಹಿಯಾಗಿರಲಿದೆ ಎಂದು ವಲಯ ಒಂದರ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತೆ ಕಲ್ಪಲತಾ ರಾಜನ್ ಹೇಳಿದರು.
ಕ್ರೆಡಾಯ್ ಮೈಸೂರು ಮತ್ತು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ)ದಿಂದ ವಿಶ್ವೇಶ್ವರನಗರದ ಎಂಬಿಸಿಟಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹೊಸ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ರಿಯಲ್ ಎಸ್ಟೇಟ್ ವಲಯದ ಆದಾಯ ತೆರಿಗೆ ಮತ್ತು ನಿಯಮ ಪಾಲನೆ’ ಕುರಿತ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
1961ರ ಕಾಯ್ದೆಯಲ್ಲಿ ಕಾಲಕಾಲಕ್ಕೆ ಮಾಡಿದ ನೂರಾರು ತಿದ್ದುಪಡಿಗಳು ತೆರಿಗೆದಾರರಲ್ಲಿ ಗೊಂದಲ ಮತ್ತು ಅನಗತ್ಯ ವ್ಯಾಜ್ಯಗಳಿಗೆ ಕಾರಣವಾಗಿದ್ದವು. ಆದರೆ, 2025ರ ಹೊಸ ಆದಾಯ ತೆರಿಗೆ ಕಾಯ್ದೆ ಹೆಚ್ಚು ಸರಳ, ಪಾರದರ್ಶಕ ಹಾಗೂ ತೆರಿಗೆದಾರ ಸ್ನೇಹಿಯಾಗಿರಲಿದೆ. ಇದರಿಂದ ತೆರಿಗೆದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹೊಸ ಕಾಯ್ದೆ ಸಮಸ್ಯೆಗಳಿಗೆ ಪರಿಹಾರ ನೀಡಿ, ತೆರಿಗೆ ನಿಶ್ಚಿತತೆ ಮತ್ತು ಡಿಜಿಟಲ್ ಸುಗಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ವಿವರಿಸಿದರು.
ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರವು ದೇಶದ ಮೂಲಸೌಕರ್ಯ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಆದರೆ, ಈ ಕ್ಷೇತ್ರದಲ್ಲಿ ದೀರ್ಘಾವಧಿ ಹೂಡಿಕೆ, 5-7 ವರ್ಷಗಳ ಸಂಕೀರ್ಣ ಯೋಜನಾ ಅವಧಿ ಮತ್ತು ಆದಾಯ ಗುರುತಿಸುವಿಕೆಯಲ್ಲಿ ವಿಶೇಷ ಸವಾಲುಗಳಿವೆ ಎಂದರು.
ಹೊಸ ಕಾಯ್ದೆ ಜಾರಿಗೆ ಮುನ್ನ ತೆರಿಗೆದಾರರಲ್ಲಿ ಜಾಗೃತಿ ಮೂಡಿಸಲು ಆದಾಯ ತೆರಿಗೆ ಇಲಾಖೆ ‘ಪ್ರಾರಂಭ-2026’ ಎಂಬ ವಿಶೇಷ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಇಲಾಖೆಯ ಅಧಿಕಾರಿಗಳು, ಉತ್ಪಾದನೆ, ಸೇವೆ, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ವಲಯಗಳೊಂದಿಗೆ ನೇರ ಸಂವಾದ ನಡೆಸುತ್ತಿದ್ದಾರೆ ಎಂದರು.
ತೆರಿಗೆದಾರರ ಅನುಕೂಲಕ್ಕಾಗಿ ‘ಕರಸೇತು’ ಸಮಗ್ರ ಮಾಹಿತಿ ಮಾರ್ಗದರ್ಶಿ ಮತ್ತು ‘ಕರಸಾಥಿ’ ಎಂಬ 24*7 ಎಐ ಆಧಾರಿತ ಚಾಟ್‌ಬಾಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದು ತೆರಿಗೆ ಕಾಯ್ದೆ, ನಿಯಮಗಳು, ಸುತ್ತೋಲೆಗಳ ಸಮಗ್ರ ಮಾಹಿತಿ ನೀಡುವ ಆನ್‌ಲೈನ್ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಈ ಜಾಗೃತಿ ಕಾರ್ಯಕ್ರಮಗಳು ಏಕಮುಖ ಉಪನ್ಯಾಸಗಳಲ್ಲ. ಇಲಾಖೆಯು ತನ್ನ ನೀತಿ ಮತ್ತು ನಿರೀಕ್ಷೆಗಳನ್ನು ಹಂಚಿಕೊಳ್ಳುವುದರ ಜತೆಗೆ, ಕ್ಷೇತ್ರದಲ್ಲಿರುವ ಪ್ರಾಯೋಗಿಕ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಲಿಸಲು ಬಂದಿದೆ ಎಂದು ಹೇಳಿದರು.
ಎಲ್ಲರೂ ಮುಕ್ತವಾಗಿ ಚರ್ಚಿಸಿ ಇರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಜತೆಗೆ ಇಲಾಖೆಯಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ಸಲಹೆ ನೀಡಬಹುದು ಎಂದು ಕೋರಿದರು.
ವೃತ್ತ ಒಂದರ ಆದಾಯ ತೆರಿಗೆ ಸಹಾಯಕ ಆಯುಕ್ತ ಎಸ್.ವೆಂಕಟೇಶನ್ ಅವರು ಪ್ರಾತ್ಯಕ್ಷತೆ ಮೂಲಕ ಕರಸೇತು ಮತ್ತು ಕರಸಾತಿ ಎಂಬ ಆನ್‌ಲೈನ್ ವ್ಯವಸ್ಥೆಯ ಬಗ್ಗೆ ರಿಯಲ್ ಎಸ್ಟೇಟ್ ವಲಯದವರಿಗೆ ಮಾಹಿತಿ ನೀಡಿದರು.
ಕ್ರೆಡಾಯ್ ಅಧ್ಯಕ್ಷ ಹರೀಶ್ ಶೆಣೈ, ಕಾರ್ಯದರ್ಶಿ ನಾಗರಾಜ್ ವಿ. ಬೈರಿ, ಬಿಎಐ ಅಧ್ಯಕ್ಷ ಪ್ರಭಾಕರ್‌ರಾವ್, ಕಾರ್ಯದರ್ಶಿ ಪ್ರವೀಣ್ ಪಾಲ್, ಡಿಸಿಐಟಿಸಿ-1 ಆರ್.ರಂಗನಾಥನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net