ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಅಧ್ಯಯನ ತಂಡ ಕಳುಹಿಸಲು, ಬರ ಪರಿಹಾರ ಬಿಡುಗಡೆ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದೆ ಆರೋಪಿಸಿ ಮೈಸೂರು ನಗರ(ಜಿಲ್ಲಾ) ಕಾಂಗ್ರೆಸ್ ಸಮಿತಿಯಿಂದ ಸಿದ್ಧಾರ್ಥ ನಗರದಲ್ಲಿರುವ ಭಗವಾನ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಮಳೆ ಅಭಾವದಿಂದ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಪರಿಸ್ಥಿತಿ ಪರಿಶೀಲಿಸಲು ಬರ ಅಧ್ಯಯನ ತಂಡ ಕಳುಹಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಜತೆಗೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತಳೆದಿದೆ. 2023ರ ಬಜೆಟ್‌ನಲ್ಲಿ ಕಳಸ-ಬಂಡೂರಿ ಮತ್ತು ಮಹದಾಯಿ ಯೋಜನೆಗೆ ಘೋಷಿಸಲಾಗಿದ್ದ 5,500 ಕೋಟಿ ರೂ.ಅನುದಾನ ಇದೂವರೆಗೂ ಬಿಡುಗಡೆಯಾಗದೆ ಆಶ್ವಾಸನೆಯಾಗಿಯೇ ಉಳಿದಿದೆ ಎಂದು ಕಿಡಿಕಾರಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೂಲಕ ತಮಿಳುನಾಡಿಗೆ ದಿನಕ್ಕೆ 12,500 ಕ್ಯೂಸೆಕ್ ನೀರು ಹರಿಸಲು ಸೂಚಿಸಿರುವುದು ಕರ್ನಾಟಕದ ರೈತರ ಪಾಲಿಗೆ ಮರಣ ಶಾಸನವಾಗಿದೆ ಎಂದು ಇದೇ ವೇಳೆ ದೂರಿದರು.
ಪ್ರತಿಭಟನೆಯಲ್ಲಿ ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಎ.ರಹೀಮ್, ಮುಖಂಡರಾದ ಸಯ್ಯದ್ ಫಾರೂಖ್, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಕುರುಬಾರಹಳ್ಳಿ ಪ್ರಕಾಶ್, ಸುನೀಲ್ ನಾರಾಯಣ, ರದಿಉಲ್ಲಾ ಖಾನ್, ಜಾಫರ್, ಸಿದ್ದಿಕ್, ಬಾಬು, ಮೋಹನ ಕುಮಾರ್, ಸಾದಿಕ್, ರವಿ, ಧನಪಾಲ್ ಇತರರಿದ್ದರು.