ಮುಂದಿನ ವರ್ಷದಿಂದ ರಾಷ್ಟ್ರೀಯ ಹೆದ್ದಾರಿ 275 ಸೇವಗೆ ಲಭ್ಯ

ಹುಣಸೂರಿನ ಬೈಪಾಸ್ ರಸ್ತೆಯ ವಿಸ್ತರಣಾ ಕಾಮಗಾರಿ ಬಗ್ಗೆ ಶಾಸಕ ಹರೀಶ್‌ಗೌಡರೊಂದಿಗೆ ಚರ್ಚಿಸಿದ  ಚೀಪ್‌ಇಂಜಿನಿಯರ್ ಶ್ರೀಧರ್ ಮತ್ತಿತರ ಅಧಿಕಾರಿಗಳು ಇದ್ದಾರೆ.
ಹುಣಸೂರಿನ ಬೈಪಾಸ್ ರಸ್ತೆಯ ವಿಸ್ತರಣಾ ಕಾಮಗಾರಿ ಬಗ್ಗೆ ಶಾಸಕ ಹರೀಶ್‌ಗೌಡರೊಂದಿಗೆ ಚರ್ಚಿಸಿದ ಚೀಪ್‌ಇಂಜಿನಿಯರ್ ಶ್ರೀಧರ್ ಮತ್ತಿತರ ಅಧಿಕಾರಿಗಳು ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿಕೆ
ಹುಣಸೂರು: ಹುಣಸೂರು ನಗರ ವ್ಯಾಪ್ತಿಯ ದೇವರಾಜ ಅರಸು ಪುತ್ಥಳಿಯಿಂದ ಯಶೋಧರಪುರದವರೆಗಿನ ನಾಲ್ಕು ಪಥದ ನೂತನ ಹೆದ್ದಾರಿ(ರಾಷ್ಟ್ರೀಯ ಹೆದ್ದಾರಿ 275) 2027ರ ಆರಂಭದಲ್ಲಿ ಸೇವೆಗೆ ಲಭ್ಯವಾಗಲಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
80 ಕೋಟಿ ರೂ., ವೆಚ್ಚದ ನಾಲ್ಕುಪಥದ ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮಂತ್ರಾಲಯದ ಕರ್ನಾಟಕ ಮತ್ತು ಕೇರಳ ಪ್ರಾಂತ್ಯದ ಪ್ರಾಂತೀಯ ಅಧಿಕಾರಿಯಾದ ಚೀಫ್‌ಇಂಜಿನಿಯರ್ ಶ್ರೀಧರ್‌ರೊಂದಿಗೆ ಮಂಗಳವಾರ ಪರಿಶೀಲಿಸಿದ ನಂತರ ಮಾತನಾಡಿದರು.
2024ರಲ್ಲಿ ಕೇಂದ್ರ ಸರ್ಕಾರ 80 ಕೋಟಿ ರೂ.ಗಳ ವೆಚ್ಚದಡಿ 5.1 ಕಿ.ಮೀ.ಉದ್ದರ ನಾಲ್ಕು ಪಥದ ರಸ್ತೆಗೆ ಅನುಮೋದನೆ ನೀಡಿದ್ದರು. ಅದರಂತೆ ಮೊದಲ ಹಂತವಾಗಿ 56 ಕೋಟಿ ರೂ.ಗಳ ಅನುದಾನದಡಿ ಇದೀಗ ಶೇ.40 ಕಾಮಗಾರಿ ಪೂರ್ಣಗೊಂಡಿವೆ ಎಂದರು.
ಕಲ್ಕುಣಿಕೆ ವೃತ್ತದ ರಾಘವೇಂದ್ರಸ್ವಾಮಿಮಠದ ಬಳಿಯ ಚರಂಡಿಗೆ ಪೈಪ್ ಅಳವಡಿಸಿದ್ದು, ಹೌಸಿಂಗ್‌ಬೋರ್ಡ್‌ನ ಮನೆಗಳಿಗೆ ನೀರು ನುಗ್ಗುತ್ತಿರುವ ಪರಿಣಾಮ ಇಲ್ಲಿ ಕಿರುಸೇತುವೆ ನಿರ್ಮಿಸುವುದು, ಕೋರ್ಟ್ ಸರ್ಕಲ್ ಬಳಿ ವಳ್ಳಿಯಮ್ಮನಕಟ್ಟೆ, ವಿವಿಧ ಬಡಾವಣೆಗಳಿಂದ ಬರುವ ನೀರು ತುಂಬಿಕೊಳ್ಳುತ್ತಿದ್ದು, ಸ್ವಲ್ಪ ಮಳೆ ಬಂದರೂ ಜಲಾವೃತಗೊಳ್ಳುತ್ತಿದ್ದು, ಇಲ್ಲಿಯೂ ನೀರು ಹರಿವಿನ ಸಾಮರ್ಥ್ಯಕ್ಕೆ ತಕ್ಕಂತೆ ಚರಂಡಿ ನಿರ್ಮಿಸಬೇಕು. ಸೇರಿದಂತೆ ಎಲ್ಲಡೆ ಶಾಶ್ವತ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದರು.
ಬ್ಲಾಕ್ ಸ್ಪಾಟ್‌ಗಳು: ಈಗಾಗಲೆ ಹೆಚ್ಚು ಅಪಘಾತ ನಡೆಯುವ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿದ್ದು, ಇಲ್ಲಿ ಅಪಘಾತವಾಗದಂತೆ ತಡೆಯಲು ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಬೇಕು. ಕೋರ್ಟ್, ಕಲ್ಕುಣಿಕೆ ಸರ್ಕಲ್‌ಗಳಲ್ಲಿ ವೈಜ್ಞಾನಿಕ ಸರ್ಕಲ್ ನಿರ್ಮಿಸಬೇಕೆಂದು ಕೋರಲಾಗಿದೆ. ಎಮ್ಮೆಕೊಪ್ಪಲಿನಿಂದ ನಗರದ ಆಶಿರ್ವಾದ್ ಹೋಟೆಲ್‌ವರೆಗೆ ಫ್ಲೈಓವರ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಬನ್ನಿಕುಪ್ಪೆಯು ಹಸಿರು ಪರಿಸರವಲಯಕ್ಕೆ ಸೇರಿದ್ದು, ಅರಣ್ಯ ಇಲಾಖೆ ಅನುಮತಿ ಬೇಕಿದ್ದರಿಂದ ಬನ್ನಿಕುಪ್ಪೆಯ 13 ಕೋಟಿ ರೂ.,ವೆಚ್ಚದ ಫ್ಲೈಓವರ್ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಸಮಿತಿಯಲ್ಲಿ ಅನುಮೋದನೆ ದೊರೆತಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು.
ತಾವು ಸಮಸ್ಯೆಗಳನ್ನು ಪರಿಶೀಲಿಸಿದ್ದು, ಶಾಸಕ ಹರೀಶ್‌ಗೌಡರು ಸೂಚಿಸಿರುವ ಎಲ್ಲ ವಿಸೃತ ಕಾಮಗಾರಿಗಳನ್ನು ಮಂಜೂರು ಮಾಡಿಕೊಡಲಾಗುವುದೆಂದ ಚೀಫ್‌ಇಂಜಿನಿಯರ್ ಶ್ರೀಧರ್ ಅವರು ಸ್ಥಳದಲ್ಲೇ ಇ.ಇ.ಪಂಪಾಪತಿಯವರಿಗೆ ನಿರ್ದೇಶಿಸಿ, ವೃತ್ತಗಳು ಹಾಗೂ ನೀರು ನಿಲ್ಲುವ ಕಡೆ ವೈಜ್ಞಾನಿಕವಾಗಿ ಕಾಮಗಾರಿ ನಡೆಸಬೇಕು ಹಾಗೂ ಅಗತ್ಯ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
40ಕೋಟಿ ರೂ., ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ದಿ: ಮೈಸೂರು-ಕುಶಾಲನಗರ ಹೆದ್ದಾರಿಯ ಅಭಿವೃದ್ದಿಗೆ 40ಕೋಟಿ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. 2027 ಜನವರಿ ವೇಳೆಗೆ ಹುಣಸೂರು ನಗರದ ಬೈಪಾಸ್‌ನ ನಾಲ್ಕು ಪಥದ ನಾಲ್ಕು ಕಿಮೀ.ರಸ್ತೆ ಹಾಗೂ ಸೇತುವೆ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಶಾಸಕರು ಸೂಚಿಸಿರುವ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಹೆದ್ದಾರಿ ಇ.ಇ.ಪಂಪಾಪತಿ ಮಾಹಿತಿ ನೀಡಿದರು.
ಈ ವೇಳೆ ನಗರಸಭೆ ಪೌರಾಯುಕ್ತೆ ಮಾನಸ, ಪರಿಸರ ಇಂಜಿನಿಯರ್ ಸೌಮ್ಯ, ಪ್ರಭಾರ ಎಇಇ ಲೋಕೇಶ್, ಹೆದ್ದಾರಿ ಇಲಾಖೆಯ ಎಇಇ ರೂಪಾ, ಎ.ಇ.ತಬ್ಸಮ್, ವಿನಯ್, ನಗರಸಭೆ ಮಾಜಿ ಅಧ್ಯಕ್ಷ ಮಾಲಿಕ್‌ಪಾಷಾ, ಮಾಜಿ ಸದಸ್ಯರಾದ ಶ್ರೀನಾಥ್, ಸತೀಶ, ಮುಖಂಡರಾದ ಹರವೆ ಶ್ರೀಧರ್, ಸತೀಶ್‌ಪಾಪಣ್ಣ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net