ನಾಗರಹೊಳೆಯಲ್ಲಿ ಸುಮ್ಮನೆ ನಿಂತಿದ್ದ ಆನೆ ಮೇಲೆ ಕಲ್ಲಿನ ದಾಳಿ ನಡೆಸಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಕ್ರಮಕ್ಕೆ ನೆಟ್ಟಿಗರಿಂದ ಪಟ್ಟು..Nagarahole

ಆನೆ ಮೇಲೆ ಕಲ್ಲಿನ ದಾಳಿ ನಡೆಸಿದ ಯುವಕರು
ಆನೆ ಮೇಲೆ ಕಲ್ಲಿನ ದಾಳಿ ನಡೆಸಿದ ಯುವಕರು
Published on: 
  • ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗೆ ಆನೆ ಮೇಲೆ ದಾಳಿ

  • KA 09 NY 0257 ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರಿಂದ ಕೃತ್ಯ

  • ಅರಣ್ಯ ಇಲಾಖೆ, ಸಚಿವರು, ಅಧಿಕಾರಿಗಳು, ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗೆ ಸುಮ್ಮನೆ ನಿಂತಿದ್ದ ಆನೆಯೊಂದಕ್ಕೆ, ಸ್ಕೂಟಿಯಲ್ಲಿ ಬಂದ ಇಬ್ಬರು ಯುವಕರು ಕಲ್ಲು ಎಸೆದ ವಿಡಿಯೋಗಳು ಎಕ್ಸ್​, ಇನ್​ಸ್ಟಾಗ್ರಾಮ್​ ಹಾಗೂ ಫೇಸ್​ಬುಕ್​ನಲ್ಲಿ ವೈರಲ್​ ಆಗಿದೆ. ಪೊಲೀಸರು ಮತ್ತು ಅರಣ್ಯ ಸಚಿವರ ಹೆಸರನ್ನು ಟ್ಯಾಗ್​ ಮಾಡಿದ ನೆಟ್ಟಿಗರು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ರವಿ ಕೀರ್ತಿ ಗೌಡ ಎಂಬುವವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಇದು 'ಟ್ರಾವೆಲ್ ವಯನಾಡ್' ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊ ಪ್ರಕಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಒಳಗೆ ಇಬ್ಬರು ಯುವಕರು ಆನೆ ಮೇಲೆ ಕಲ್ಲಿನಿಂದ ದಾಳಿ ಮಾಡಿದ್ದಾರೆ ಎಂದಿದ್ದಾರೆ. ಮೈಸೂರಿನ ಭಾಗಕ್ಕೆ ಸೇರುವ KA 09 NY 0257 ಗಾಡಿಯಲ್ಲಿ ಪ್ರಯಾಣಿಸಿದ್ದು ಯಾರು?, ಈ ಕೃತ್ಯಕ್ಕೆ ಕಾರಣ ಎನು ಎನ್ನುವುದನ್ನು ಪತ್ತೆ ಹಚ್ಚುತ್ತಾರೆ ಎನ್ನುವ ಭರವಸೆ ಇದೆ ಎಂದು ನಾಗರಹೊಳೆ ಹುಲಿ ಅಭಯಾರಣ್ಯ ಮತ್ತು ಕರ್ನಾಟಕ ಅರಣ್ಯ ಇಲಾಖೆಯನ್ನು ಟ್ಯಾಗ್ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಕೊಡಗು, ಮೈಸೂರು, ಚಾಮರಾಜಪೇಟೆ ಪೊಲೀಸರನ್ನು ಟ್ಯಾಗ್​ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

KA 09 NY 0257 ನೋಂದಣಿ ಸಂಖ್ಯೆಯ ಕೇಸರಿ ಮತ್ತು ಬೂದು ಮಿಶ್ರಿತ ವಾಹನದಲ್ಲಿ ನಾಗರಹೊಳೆ ಅರಣ್ಯಕ್ಕೆ ಬಂದ ಇಬ್ಬರು ಯುವಕರು. ಆನೆ ನಿಂತಿರುವುದನ್ನು ಕಂಡು ಸ್ಕೂಟಿ ಅರ್ಧಕ್ಕೆ ನಿಲ್ಲಿಸಿದರು. ಪಟ್ಟೆ ಪಟ್ಟೆ ಪಿಂಕ್ ಹಾಗೂ ಬಿಳಿ ಬಣ್ಣದ ಸ್ವೆಟ್​ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಯುವಕ ಗಾಡಿಯಿಂದ ಇಳಿದು, ಕಲ್ಲು ಎಸೆದಿದ್ದಾನೆ. ಇದನ್ನು ಅವರ ಮುಂದಿದ್ದ ವಾಹನ ಸವಾರರು ರೆಕಾರ್ಡ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಸದ್ಯ ಈ ವಿಡಿಯೋ ಎಕ್ಸ್​ ಸೇರಿದಂತೆ ಹಲವು ಆನ್​ಲೈನ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಾಗರಹೊಳೆ ಅರಣ್ಯ ಮಂಡಳಿ, ಅರಣ್ಯ ಅಧಿಕಾರಿಗಳು, ಪೊಲೀಸರು, ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಟ್ಯಾಗ್​ ಮಾಡಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಆನೆ ಆಕ್ರೋಶಗೊಂಡು ದಾಳಿ ನಡೆಸಿದ್ದರೆ ಏನು ಮಾಡುತ್ತಿದ್ದರು. ಇಂತಹ ಮನಸ್ಥಿತಿ ಸರಿಯಿಲ್ಲ. ಇಂತವರಿಗೆ ಶಿಕ್ಷೆಯಾಗಲೇ ಬೇಕು ಎಂದು ಕಿಡಿಕಾರಿದ್ದಾರೆ.

ಸಚಿವರು ಏನಂದ್ರು?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವೀಡಿಯೊವನ್ನು ನಾನು ವೈಯಕ್ತಿಕವಾಗಿ ವೀಕ್ಷಿಸಿದ್ದೇನೆ. ಸದರಿ ವೀಡಿಯೊದಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆ ಬದಿಯಲ್ಲಿದ್ದ ಆನೆಯ ಮೇಲೆ KA 09 HY 0257 ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ತೂರಿ, ವನ್ಯಜೀವಿಗಳ ಮೇಲೆ ಕ್ರೌರ್ಯ ಎಸಗಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನೀಯ ವಿಷಯವಾಗಿದೆ. ವನ್ಯಜೀವಿಗಳ ಸಂರಕ್ಷಣೆ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಇಂತಹ ಬೇಜವಾಬ್ದಾರಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.

ಆದುದರಿಂದ, ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ವೀಡಿಯೊದಲ್ಲಿರುವ ದ್ವಿಚಕ್ರ ವಾಹನವನ್ನು (KA 09 HY 0257) ಹಾಗೂ ಕೃತ್ಯವೆಸಗಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಕೂಡಲೇ ವರದಿ ಸಲ್ಲಿಸುವಂತೆ ಅರಣ್ಯ ಪಡೆ ಮುಖ್ಯಸ್ಥರಾದ ಶ್ರೀ ಬಿಪಿ ರವಿ ಅವರಿಗೆ (HoFF) ನಿರ್ದೇಶನ ನೀಡಿದ್ದೇನೆ ಎಂದು ಎಕ್ಸ್​ನಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಬರೆದುಕೊಂಡಿದ್ದಾರೆ.

ನೆಟ್ಟಿಗರು ಯಾರು ಏನಂದ್ರು?

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಮ್ಮ ಸ್ಕೂಟರ್‌ನಿಂದ ಇಳಿದು ಕಾಡಾನೆ ಮೇಲೆ ಕಲ್ಲು ಎಸೆಯುತ್ತಿರುವುದು ಕಂಡುಬಂದಿದೆ. ಈ ಆನೆಯು ಆಕ್ರಮಣಕಾರಿಯಾಗಿ ಬದಲಾಗಿ ಇವರ ಮೇಲೆ ದಾಳಿ ಮಾಡಿದರೆ, ಏನಾಗುತ್ತದೆ. ಇಂತಹ ಜವಾಬ್ದಾರಿಯಿಲ್ಲದವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.ನಾವು ವನ್ಯಪ್ರಾಣಿಗಳನ್ನು ಗೌರವಿಸಬೇಕು ಮತ್ತು ಈ ಜಾಗೃತಿಯನ್ನು ಎನ್‌ಸಿಇಆರ್‌ಟಿ ಸೇರಿಸಬೇಕು ಎಂದು ನಾನು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹುಲಿ ಸಂರಕ್ಷಕ ಸಂಸ್ಥೆಯ ಸಂಸ್ಥಾಪಕ ಗೌರವ್​ ಭಾರದ್ವಾಜ್​ ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ಮನುಷ್ಯರು ಅತ್ಯಂತ ಕೆಟ್ಟವರು. ಈ ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ವ್ಯೂವ್ಸ್, ಲೈಕ್ಸ್​ ಹಾಗೂ ಅವರ ವಿಡಿಯೋ ವೈರಲ್ ಮಾಡಿಕೊಳ್ಳಲು ರೀಲ್‌ಗಳ ಮೇಲಿನ ಗೀಳು ಕೈ ಮೀರುತ್ತಿದೆ. ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ದಯವಿಟ್ಟು ಈ ಘಟನೆಯನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ದೀಪ್ತಿ ಎಂಬುವವರು ಹೇಳಿದ್ದಾರೆ, (ಏಜೆನ್ಸೀಸ್).