ಆದಾಯ ಗಳಿಕೆಯಲ್ಲಿ ಮೈಸೂರು ವಿಭಾಗ ಪ್ರಗತಿ: ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮುದಿತ್ ಮಿತ್ತಲ್ ಮಾಹಿತಿ
ಮುದಿತ್ ಮಿತ್ತಲ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೈಸೂರು ವಿಭಾಗವು 449.13 ಕೋಟಿ ರೂ. ಪ್ರಯಾಣಿಕ ಆದಾಯ ಗಳಿಸಿ ಶೇ.1.49ರಷ್ಟು ಬೆಳವಣಿಗೆ ಕಂಡಿದೆ
ಕಳೆದ ಸಾಲಿನಲ್ಲಿ 419.89 ಕೋಟಿ ವರಮಾನ ಬಂದಿತ್ತು
ಪಾರ್ಸೆಲ್ ಆದಾಯ 11.81 ಕೋಟಿ ರೂ.ಗೆ ತಲುಪಿದ್ದು, ಎಸ್‌ಎಲ್‌ಆರ್ ಹಾಗೂ ವಿಪಿಎಚ್ ಮೂಲಕ ಪಾರ್ಸೆಲ್ ವರಮಾನ 5.85 ಕೋಟಿ ರೂ. ಸಂಗ್ರಹವಾಗಿದೆ
ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು 2025-26ರ ಹಣಕಾಸು ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಆದಾಯ ಗಳಿಕೆ, ಸರಕು ಸಾಗಣೆ, ಮೂಲಸೌಕರ್ಯ ಅಭಿವೃದ್ಧಿ, ಸುರಕ್ಷತೆ ಮತ್ತು ಪ್ರಯಾಣಿಕರ ಸೇವೆಯಲ್ಲಿ ಮಹತ್ತರ ಪ್ರಗತಿ ದಾಖಲಿಸಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮುದಿತ್ ಮಿತ್ತಲ್ ತಿಳಿಸಿದರು.
ಮೈಸೂರು ವಿಭಾಗವು 449.13 ಕೋಟಿ ರೂ. ಪ್ರಯಾಣಿಕ ಆದಾಯ ಗಳಿಸಿ ಶೇ.1.49ರಷ್ಟು ಬೆಳವಣಿಗೆ ಕಂಡಿದೆ. ಕಳೆದ ಸಾಲಿನಲ್ಲಿ 419.89 ಕೋಟಿ ವರಮಾನ ಬಂದಿತ್ತು. ಟಿಕೆಟ್ ಪರಿಶೀಲನೆ ಕಾರ್ಯಕ್ಷಮತೆ ಅತ್ಯುತ್ತಮವಾಗಿ ಮುಂದುವರಿದಿದ್ದು, ಇದರಿಂದ 9.75 ಕೋಟಿ ರೂ. ಆದಾಯ ದೊರೆತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಾಣಿಜ್ಯ ಜಾಹೀರಾತು ಮೂಲದಿಂದ ದಾಖಲೆಯ 3.17 ಕೋಟಿ ರೂ., ಪಾರ್ಕಿಂಗ್ 4.02 ಕೋಟಿ ರೂ., ಕೇಟರಿಂಗ್ 2.61 ಕೋಟಿ ರೂ. ಆದಾಯ ಬಂದಿದೆ. ಪಾರ್ಸೆಲ್ ಆದಾಯ 11.81 ಕೋಟಿ ರೂ.ಗೆ ತಲುಪಿದ್ದು, ಎಸ್‌ಎಲ್‌ಆರ್ ಹಾಗೂ ವಿಪಿಎಚ್ ಮೂಲಕ ಪಾರ್ಸೆಲ್ ವರಮಾನ 5.85 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಿದರು.
ಲೋಡಿಂಗ್‌ನಿಂದ 23.94 ಕೋಟಿ ರೂ. ಆದಾಯ:
ಸರಕು ಸಾಗಣೆ ವಿಭಾಗದಲ್ಲೂ ಉತ್ತಮ ಸಾಧನೆಯಾಗಿದ್ದು, 900.19 ಕೋಟಿ ರೂ. ಆದಾಯ ಬಂದಿದೆ. ಇದು ರೈಲ್ವೆ ವಿಭಾಗದ 2ನೇ ಅತ್ಯುನ್ನತ ಸಾಧನೆಯಾಗಿದೆ. 10.586 ಮಿಲಿಯನ್ ಟನ್ ಸರಕು ಸಾಗಿಸಿದ್ದು, ಇದರಲ್ಲಿ 8.664 ಮಿಲಿಯನ್ ಟನ್ ಉಕ್ಕು ಸೇರಿದೆ. ಇದು ವಿಭಾಗದ ಇತಿಹಾಸದಲ್ಲಿ 2ನೇ ಹೆಚ್ಚಿನ ಲೋಡ್ ಆಗಿದೆ. 116 ಎನ್‌ಎಂಜಿ ರೇಕ್ (90 ದ್ವಿಚಕ್ರ ವಾಹನ, 26 ನಾಲ್ಕು ಚಕ್ರದ ವಾಹನಗಳು)ಗಳ ಲೋಡಿಂಗ್‌ನಿಂದ 23.94 ಕೋಟಿ ರೂ. ಆದಾಯ ಬಂದಿದೆ ಎಂದು ತಿಳಿಸಿದರು.
ಡಿಜಿಟಲ್ ಪಾವತಿ
ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ ಪರಿಚಯಿಸಲಾಗಿದೆ. ಮೂಲಸೌಲಭ್ಯಗಳ ವೃದ್ಧಿಗೆ ಮತ್ತು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. 71 ರೈಲುಗಳ ವೇಗ ಹೆಚ್ಚಿಸಲಾಗಿದ್ದು (ಗಂಟೆಗೆ ಸರಾಸರಿ 110 ಕಿ.ಮೀ.), ಹೊಸದಾಗಿ 44 ರೈಲುಗಳನ್ನು ವಿದ್ಯುತ್ ಇಂಜಿನ್‌ನಿಂದ ಓಡಿಸಲಾಗುತ್ತಿದೆ. ಇದರಿಂದಾಗಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ ಉಂಟಾಗಿರುವ ಡೀಸೆಲ್ ಕೊರತೆ ನಮ್ಮಲ್ಲಿ ಬಾಧಿಸದಂತೆ ಕ್ರಮ ವಹಿಸಲಾಗಿದೆ. 28 ನಿಲ್ದಾಣಗಳಲ್ಲೂ ಅಡಿಟ್ ಪೂರ್ಣಗೊಂಡಿದೆ. ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ವಿಭಾಗದ ವಿದ್ಯುದ್ದೀಕರಣ ಕಾಮಗಾರಿ ಕೈಗೊಂಡಿರುವುದು ಮಹತ್ವದ ಸಾಧನೆಯಾಗಿದೆ. 1.17 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪ್ರಯಾಣಿಕರಿಗೆ ಹಿಂತಿರುಗಿಸಲಾಗಿದೆ. 13.2 ಮಕ್ಕಳನ್ನು ರಕ್ಷಿಸಲಾಗಿದೆ. 88.92 ಕೋಟಿ ರೂ. ಆದಾಯ (ಶೇ.53.55 ಹೆಚ್ಚಳ) ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರಿನ ಕುವೆಂಪುನಗರದಲ್ಲಿರುವ ಟಿಕೆಟ್ ಬುಕಿಂಗ್ ಕೇಂದ್ರದಲ್ಲಿ ನಾನ್ ರೈಲ್ ಹೆಡ್ ಪಿಆರ್‌ಎಸ್ ಸೌಲಭ್ಯ ಪ್ರಾರಂಭಿಸಲಾಗಿದೆ. ಇದರಿಂದ ನಗದು ರಹಿತ, ಸುಗಮ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ ಎಂದು ಹೇಳಿದರು.
ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವಿ ಇದ್ದರು.
ಶೀಘ್ರವೇ ವಂದೇ ಭಾರತ್ ರೈಲು ಡಿಪೋ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ನಿರ್ವಹಣೆಗಾಗಿ ಮೈಸೂರಿನ ಹೊಸ ಗೂಡ್ಸ್ ಟರ್ಮಿನಲ್‌ನಲ್ಲಿ(ಎಂಎನ್‌ಜಿಟಿ)ಅತ್ಯಾಧುನಿಕ ಡಿಪೋ ಸ್ಥಾಪಿಸಲಾಗುವುದು. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ವಂದೇ ಭಾರತ್ ರೈಲುಗಳ ತಾಂತ್ರಿಕ ನಿರ್ವಹಣೆಗೆ ವಿಶೇಷ ವ್ಯವಸ್ಥೆಗಳ ಅಗತ್ಯವಿದ್ದು, ಮೈಸೂರಿನಲ್ಲೇ ಈ ಮೂಲಸೌಕರ್ಯ ಲಭ್ಯವಾಗುವುದರಿಂದ ರೈಲುಗಳ ನಿಲುಗಡೆ ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಮುದಿತ್ ಮಿತ್ತಲ್ ಮಾಹಿತಿ ನೀಡಿದರು.
"
ಮೈಸೂರು ಯಾರ್ಡ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು. ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದು ಸಿದ್ಧಗೊಂಡಲ್ಲಿ ಹೆಚ್ಚಿನ ರೈಲುಗಳ ಕಾರ್ಯಾಚರಣೆಯನ್ನು ಇಲ್ಲಿಂದ ನಡೆಸಬಹುದಾಗಿದೆ.