ಸಾಮಾಜಿಕ ಕಳಕಳಿ ಇರುವ ಸಿನಿಮಾ ನಿರ್ಮಾಣವಾಗಲಿ

ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ವಿಭಾಗದ ವಿವಿಧ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಡಾ.ಎಚ್.ಸಿ.ಮಹದೇವಪ್ಪ, ಸುನಿಲ್ ಬೋಸ್ ಸೇರಿದಂತೆ ಇನ್ನಿತರರಿದ್ದರು
ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ವಿಭಾಗದ ವಿವಿಧ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಡಾ.ಎಚ್.ಸಿ.ಮಹದೇವಪ್ಪ, ಸುನಿಲ್ ಬೋಸ್ ಸೇರಿದಂತೆ ಇನ್ನಿತರರಿದ್ದರು
Published on
ಮೈಸೂರು: ಸಾಮಾಜಿಕ ಕಳಕಳಿ ಇರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳು ಹೆಚ್ಚು ನಿರ್ಮಾಣವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
ಚಲನಚಿತ್ರಗಳು ಸಮಾಜ ಮತ್ತು ಜನಸಾಮಾನ್ಯರ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಹೀಗಾಗಿ, ಅವುಗಳ ನೀಡುವ ಮೌಲ್ಯ, ಸಂದೇಶದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಇದೆ. ಹೀಗಾಗಿ, ಸಿನಿಮಾ ಸಮಾಜ ಪರಿವರ್ತನೆಯ ಮಾಧ್ಯಮವಾಗಬೇಕು ಎಂದರು.
ಹಿಂದೆ ನಾನೂ ಪ್ರತಿ ದಿನ ಸಿನಿಮಾ ನೋಡುತ್ತಿದ್ದೆ. ಇತ್ತೀಚೆಗೆ ಮೌಲ್ಯಯುತ, ಸಾಮಾಜಿಕ ಕಳಕಳಿ ಸಿನಿಮಾಗಳು ಬರುವುದು ಕಡಿಮೆಯಾಗಿದ್ದರಿಂದ ಸಿನಿಮಾ ನೋಡುವುದನ್ನೂ ಬಿಟ್ಟೆ. ಜತೆಗೆ, ನನಗೆ ಪುರುಸೊತ್ತು ಸಹ ಇಲ್ಲ. ಹೀಗಾಗಿ, ಸಿನಿಮಾ ನೋಡುವುದು ಕಡಿಮೆಯಾಗಿದೆ. ಹೀಗಾಗಿ, ಜನಪ್ರಿಯವಾಗಿರುವ ಕಾಂತಾರಾ-2 ಸಿನಿಮಾ ನೋಡಲು ಆಗಿಲ್ಲ. ಎಲ್ಲರೂ ಹೇಳಿದ್ದಾರೆ, ಚೆನ್ನಾಗಿದೆ. ಹೆಚ್ಚು ದುಡ್ಡು ಮಾಡಿದೆ ಎಂದು. ಮುಂದಿನ ದಿನಗಳಲ್ಲಿ ಅದನ್ನು ನೋಡುವೆ ಎಂದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಿನಿಮಾ ಕೇವಲ ಮನರಂಜನೆಗೆ ಸಿಮೀತವಾಗಬಾರದು. ಅದು ಸಮಾಜದಲ್ಲಿ ಸಮಾನತೆ ಕುರಿತು ಜಾಗೃತಿ ಮೂಡಿಸಲು, ಜನರನ್ನು ಒಗ್ಗೂಡಿಸಲು, ಭ್ರಾತೃತ್ವ ಬೆಳೆಸಲು ಕೆಲಸ ಮಾಡಬೇಕು ಎಂದರು. 
ದಾರಿ ತಪ್ಪುತ್ತಿರುವ ಯುವ ಜನರ ಮನಪರಿವರ್ತನೆ ಮಾಡಿ ಸರಿ ದಾರಿಗೆ ತರುವ ಕೆಲಸಕ್ಕೆ ಸಿನಿಮಾ ಸ್ಫೂರ್ತಿ ಮತ್ತು ಪ್ರೇರಣೆಯಾಗಬೇಕು ಎಂದರು.
ಮೈಸೂರು ಜಿಲ್ಲೆಯಲ್ಲಿ ಚಿತ್ರನಗರಿಯನ್ನು ನಿರ್ಮಿಸಲು ನಾನು 2013ರಲ್ಲೇ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೆ. ಇದೀಗ ನಂಜನಗೂಡು ತಾಲೂಕಿನಲ್ಲಿ ಸಿನಿಮಾ ನಗರ ಮಾಡಲು ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧವಾಗುತ್ತಿದೆ. ಶೀಘ್ರದಲ್ಲೇ ಕೆಲಸ ಪ್ರಾರಂಭವಾಗುತ್ತದೆ ಎಂದರು. 
ಸಂಸದ ಸುನೀಲ್ ಬೋಸ್, ಶಾಸಕರಾದ ಕೆ.ಹರೀಶ್ ಗೌಡ, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ.ಬಿ.ಕಾವೇರಿ, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಹಾಗೂ ಕಲಾವಿದ ಸಾಧು ಕೋಕಿಲ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯ ಅಧ್ಯಕ್ಷ ನರಸಿಂಹುಲು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್, ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಎಸ್‌ಪಿ ವಿಷ್ಣುವರ್ಧನ್  ಸೇರಿದಂತೆ ಇನ್ನಿತರರಿದ್ದರು.
ಜೀವಮಾನ ಸಾಧನೆ ಪ್ರಶಸ್ತಿ: 2018ನೇ ಸಾಲಿನ ಡಾ.ರಾಜಕುಮಾರ್ ಪ್ರಶಸ್ತಿಯನ್ನು ಜೆ.ಕೆ.ಶ್ರೀನಿವಾಸ ಮೂರ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪಿ.ಶೇಷಾದ್ರಿ, ಡಾ.ವಿಷ್ಣುವರ್ಧನ ಪ್ರಶಸ್ತಿಯನ್ನು ಬಿ.ಎಸ್.ಬಸವರಾಜು ಅವರಿಗೆ ನೀಡಲಾಯಿತು. 2019ನೇ ಸಾಲಿನ ಡಾ.ರಾಜಕುಮಾರ ಪ್ರಶಸ್ತಿಯನ್ನು ನಟಿ ಉಮಾಶ್ರೀ, ಪುಟ್ಟಣ್ಣ ಕಣಗಾಲ ಪ್ರಶಸ್ತಿಯನ್ನು ಎನ್.ಆರ್.ನಂಜುಂಡೇಗೌಡ, ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನು ರಿಚರ್ಡ್ ಕ್ಯಾಸ್ಟಲಿಯೋ ಅವರಿಗೆ ಸಿಎಂ ಪ್ರದಾನ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net