ಸಮರ್ಥನಂ ಬುದ್ಧಿ ವಿಕಲಚೇತನ ಮಕ್ಕಳ ಶಾಲೆಯಿಂದ ಬುಧವಾರ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಮೇಳದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗೊಂದಿಗೆ ಪ್ರೊ.ಕಾಳಚೆನ್ನೇಗೌಡ, ಪಿ.ಪುಟ್ಟವೀರಪ್ಪ , ಎಸ್.ವಜ್ರಮುನಿ, ಭ್ರಮಾರಂಭ ಇತರರು ಇದ್ದರು.
ಮೈಸೂರು: ಮಕ್ಕಳ ಹಕ್ಕುಗಳನ್ನು ಯಾರೂ ಯಾವುದೇ ಸಂದರ್ಭದಲ್ಲೂ ಉಲ್ಲಂಘಿಸಬಾರದು, ನಿರಾಕರಿಸಬಾರದು. ವಯಸ್ಕರು ಹಾಗೂ ಸರ್ಕಾರದ ಅಧಿಕಾರಿಗಳು ಈ ಹಕ್ಕುಗಳನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚೆನ್ನೇಗೌಡ ಹೇಳಿದರು.
ನಗರದ ಸಮರ್ಥನಂ ಬುದ್ಧಿ ವಿಕಲಚೇತನ ಮಕ್ಕಳ ಶಾಲೆಯಿಂದ ಮೈಸೂರು ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಮೇಳಕ್ಕೆ ಶೂನ್ಯದಿಂದ ಬೆಂಕಿ ಹತ್ತಿಸುವ ಹಾಗೂ ನೀರಿನ ಮೇಲೆ ಬೆಂಕಿ ಹಚ್ಚುವ ಪ್ರಯೋಗದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಅತ್ಯಂತ ಪ್ರಮುಖ ಅವಶ್ಯಕತೆಗಳೇ ಮಕ್ಕಳ ಹಕ್ಕುಗಳು. ಅವುಗಳಿಗೆ ಮನ್ನಣೆ ನೀಡುವುದು ಮತ್ತು ಜಾರಿ ಮಾಡುವುದು ಎಲ್ಲ ವಯಸ್ಕರ ಜವಾಬ್ದಾರಿ ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಎಸ್.ವಜ್ರಮುನಿ ಮಾತನಾಡಿ, ವಿಜ್ಞಾನ ವಸ್ತುಪ್ರದರ್ಶನವು ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಆಲೋಚನೆಗಳು, ಮಾದರಿಗಳು ಮತ್ತು ಪ್ರಯೋಗಗಳನ್ನು ಪ್ರದರ್ಶಿಸುವ ವೇದಿಕೆ ಎಂದರು.
ಈ ವಸ್ತುಪ್ರದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲವನ್ನು ಬೆಳೆಸುವುದು, ಸಮಸ್ಯೆ ಪರಿಹಾರ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ತಂತ್ರಜ್ಞಾನ ಅರಿವು ಮೂಡಿಸುವುದಾಗಿದೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪಿ.ಪುಟ್ಟವೀರಪ್ಪ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಲದು. ಜ್ಞಾನದ ಅಗತ್ಯತೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ವಿಜ್ಞಾನ ಶಿಕ್ಷಣದ ಆಸಕ್ತಿ ಬೆಳೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಆಯೋಜಿಸಿದ ವಿಜ್ಞಾನ ಮೇಳ ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ ಆಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಮರ್ಥನಂ ಅಂಗವಿಕಲರ ಸಂಸ್ಥೆ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ತಾರ್ಕಿಕವಾಗಿ ಯೋಚಿಸಬೇಕು, ಕುತೂಹಲವನ್ನು ಬೆಳೆಸಬೇಕು, ಪ್ರಶ್ನೆಗಳನ್ನು ಕೇಳಬೇಕು ಹಾಗೂ ಮೂಢನಂಬಿಕೆಗಳನ್ನು ತರ್ಕದಿಂದ ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು.
ಸಂವಿಧಾನ ಪ್ರಕಾರ ಪ್ರತಿಯೊಬ್ಬ ನಾಗರಿಕನೂ ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಮೂಲಭೂತ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯಶಿಕ್ಷಕಿ ಭ್ರಮರಾಂಬಾ, ಶಿಕ್ಷಕರಾದ ಮಹಾಂತೇಶ್, ಸುಬ್ರಮಣಿ, ಪದ್ಮ, ಬೃಂದಾಬಾಯಿ, ಅಜಯಕುಮಾರ್, ಸ್ಪರ್ಶ, ಲತಾ, ಚೈತ್ರಕುಮಾರಿ ಇತರರು ಇದ್ದರು.
ವಿಜ್ಞಾನ ವಸ್ತು ಪ್ರದರ್ಶನ ವಿಜೇತರು: ಬುದ್ಧಿ ವಿಕಲಚೇತನ ವಿಭಾಗದಲ್ಲಿ ಕಿಶೋರ್ (ಪ್ರ), ಶ್ರೀಕಾರ (ದ್ವಿ), ಮೌರ್ಯ (ತೃ). ಸಾಧಾರಣ ವಿಕಲಚೇತನ ವಿಭಾಗದಲ್ಲಿ ವಿಶ್ವನಾಥ್ (ಪ್ರ), ಮಾನಸ ಸೌಮ್ಯಾ (ದ್ವಿ), ದುಂಬಿನಿ (ತೃ) ಬಹುಮಾನ ಪಡೆದುಕೊಂಡರು. ತೀವ್ರ ಸ್ವಭಾವದ ವಿಕಲಚೇತನ ವಿಭಾಗದಲ್ಲಿ ಆರ್ಯನ್ (ಪ್ರ), ಆರ್ಯ ಸಚಿನ್ (ದ್ವಿ), ಮೃಣಾಲಿ (ತೃ) ಬಹುಮಾನ ಪಡೆದರು.