ಡ್ರಗ್ಸ್ ಹಾವಳಿಯಿಂದ ಮೈಸೂರು ಸಂಸ್ಕೃತಿಯೇ ಹಾಳು

 ತೆರೆದ ವಾಹನದಲ್ಲಿ ಆಗಮಿಸಿದ ನಿಖಿಲ್ ಕುಮಾರಸ್ವಾಮಿ.
ತೆರೆದ ವಾಹನದಲ್ಲಿ ಆಗಮಿಸಿದ ನಿಖಿಲ್ ಕುಮಾರಸ್ವಾಮಿ.
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪ
  • ಜನರೊಂದಿಗೆ ಜನತಾದಳ ಕಾರ್ಯಕ್ರಮ
ಮೈಸೂರು: ಡ್ರಗ್ಸ್ ಹಾವಳಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನ ಸಂಸ್ಕೃತಿಯೇ ಹಾಳಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ನಗರದ ನಂಜರಾಜ ಬಹದ್ದೂರು ಛತ್ರದ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದ ಸಾಂಸ್ಕೃತಿಕತೆ, ಪರಂಪರೆಯೇ ಅಳಿಸಿಹೋಗುವ ಆತಂಕ ಎದುರಾಗಿದೆ. ಮೈಸೂರಿನಲ್ಲಿ ಮಾದಕವಸ್ತುಗಳು ತಯಾರು ಮಾಡಲಾಗುತ್ತಿದ್ದು, ಇದನ್ನು ರಾಜ್ಯದ ಗುಪ್ತಚರ ಇಲಾಖೆಗೆ ಪತ್ತೆ ಮಾಡಲಿಲ್ಲ. ಗುಜರಾತ್, ಮಹಾರಾಷ್ಟ್ರದ ಪೊಲೀಸರು ಇಲ್ಲಿಗೆ ಬಂದು 187 ಕೆಜಿ ಮಾದಕ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಹಾಗಾದರೆ ನಮ್ಮ ರಾಜ್ಯದ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸೋಲಿನ ಭಯದಿಂದ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆ ಮಾಡಲು ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದೂ ಹರಿಹಾಯ್ದರು.
ಪಾಲಿಕೆ ಅಧಿಕಾರಾವಧಿ ಮುಗಿದು 3 ವರ್ಷವಾದರೂ ಚುನಾವಣೆ ಮಾಡಲು ಮನಸ್ಸು ಮಾಡುತ್ತಿಲ್ಲ. ಅಧಿಕಾರಿಗಳೂ ಕೆಲಸ ಮಾಡುತ್ತಿಲ್ಲ. ಅವರನ್ನು ಯಾರೂ ಪ್ರಶ್ನೆ ಸಹ ಮಾಡುತ್ತಿಲ್ಲ ಅಧಿಕಾರ, ರಾಜಕಾರಣವನ್ನು ಬಿಟ್ಟು ಮೊದಲು ಚುನಾವಣೆ ಮಾಡಿ ಎಂದು ಆಗ್ರಹಿಸಿದರು.
ಗ್ರೇಟರ್ ಮೈಸೂರು ಮಾಡಲು ಹೊರಟಿದ್ದಾರೆ. ಮಹಾರಾಜರಿಗಿಂತ ಇವರಿಗೆ ದೂರದೃಷ್ಟಿ ಇದೆಯೇ? ಇಷ್ಟು ದಿನ ಏನು ಗ್ರೇಟರ್ ಆಗುವಂತಹ ಕೆಲಸ ಮಾಡಿದ್ದೀರಿ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಭಾಗ್ಯಲಕ್ಷ್ಮಿಯೋಜನೆಯಡಿ ತಿಂಗಳಿಗೆ 2 ಸಾವಿರ ದುಡ್ಡು ಕೊಡುವುದರಿಂದ ಮಹಿಳಾ ಸಬಲೀಕರಣವಾಗಲ್ಲ. ಅವರ ಕೈಗೆ ಅಧಿಕಾರ ಕೊಟ್ಟಾಗ ಇದು ಸಾಧ್ಯವಾಗುತ್ತದೆ. ಶಾಸಕಾಂಗದಲ್ಲಿ ಶೇ.33ರಷ್ಟು ಮಹಿಳಾ ಮೀಸಲು ಮಸೂದೆಯನ್ನು ಸೋಲಿಸುವ ಮೂಲಕ ಕಾಂಗ್ರೆಸ್‌ನ ವರ್ತನೆ, ಅದರ ಸಣ್ಣತನ ಗೊತ್ತಾಗಿದೆ. ಇದು ಆ ಪಕ್ಷದ ರಾಜಕಾರಣ ಎಷ್ಟು ಕೀಳುಮಟ್ಟಕ್ಕೆ ಇಳಿದಿರುವುದಕ್ಕೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.
ಅಹಿಂದ ನಾಯಕನ ಸಿಎಂ ಕುರ್ಚಿ ಅಲುಗಾಡುತ್ತಿದೆ. ಅದರ ಮೇಲೆ ಕುಳಿತುಕೊಳ್ಳಲು ಮತ್ತೊಬ್ಬರು ಕುತಂತ್ರ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಒಬಿಸಿ ನಾಯಕರನ್ನು ಹಂತ ಹಂತವಾಗಿ ರಾಜಕೀಯವಾಗಿ ಮುಗಿಸಲಾಗುತ್ತಿದೆ. ಅಲ್ಪಸಂಖ್ಯಾತ ನಾಯಕರನ್ನು ಕೈಬಿಡಲಾಗುತ್ತಿದೆ ಎಂದು ಹೇಳಿದರು. 
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಈ ಹಿಂದೆ ಮೈಸೂರಿನ ಮೂರು ವಿಧಾನಸಭೆ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರು ಗೆದ್ದಿದ್ದರು. ಈಗಲೂ ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಇಂದಿನ ಕಾರ್ಯಕ್ರಮವೇ ಇದಕ್ಕೆ ಸಾಕ್ಷಿ. 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಬೇಕೆಂಬುದು ರಾಜ್ಯದ ಜನರ ಆಶಯ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು. ಮುಂದೊಂದು ದಿನ ನಿಖಿಲ್ ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.
ಎಂಎಲ್‌ಸಿಗಳಾದ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಮಾಜಿ ಶಾಸಕರಾದ ಕೆ.ಮಹದೇವು, ಡಾ.ಕೆ.ಅನ್ನದಾನಿ, ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್, ನಗರಾಧ್ಯಕ್ಷ ಎಸ್‌ಬಿಎಂ ಮಂಜು, ಮಾಜಿ ಮೇಯರ್ ಆರ್.ಲಿಂಗಪ್ಪ ಸೇರಿದಂತೆ ಸ್ಥಳೀಯ ಜೆಡಿಎಸ್ ನಾಯಕರು ಪಾಲ್ಗೊಂಡಿದ್ದರು. 
ಜೆಸಿಬಿಗಳ ಮೂಲಕ ಪುಷ್ಪಾರ್ಚನೆ:
ನಗರದ ಧನ್ವಂತರಿ ರಸ್ತೆಯಿಂದ ತೆರೆದ ವಾಹನದಲ್ಲಿ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದ ವರೆಗೆ ನಿಖಿಲ್ ಕುಮಾರಸ್ವಾಮಿ ಮೆರವಣಿಗೆ ನಡೆಯಿತು. ರಸ್ತೆಯುದ್ದಕ್ಕೂ ಜೆಸಿಬಿಗಳ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ಚಾಮರಾಜ, ಕೃಷ್ಣರಾಜ, ನರಸಿಂಹರಾಜ ವಿಧಾನಸಭೆ ಕ್ಷೇತ್ರಗಳ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹೆಜ್ಜೆ ಹಾಕಿದರು.

ಹಾಲಿ, ಮಾಜಿ ಎಂಎಲ್‌ಎಗಳ ಗೈರು:

ಜೆಡಿಎಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದರು. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಸಹ ಬಂದಿರಲಿಲ್ಲ. ಇದು ಚರ್ಚೆಗೆ ಗ್ರಾಸವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net