ಮೈಸೂರು ಯೋಗ ಮಹೋತ್ಸವ- ಬಿ. ಶ್ರೀನಾಥ್‌ಗೆ ಸೇವಾರತ್ನ ಪ್ರಶಸ್ತಿ ಪ್ರದಾನ

ಅಂತಾರಾಷ್ಟ್ರೀಯ ಯೋಗ ತರಬೇತುದಾರ ಬಿ. ಶ್ರೀನಾಥ್‌  ಅವರಿಗೆ ಮೈಸೂರು ಯೋಗೀಶ್‌ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಂತಾರಾಷ್ಟ್ರೀಯ ಯೋಗ ತರಬೇತುದಾರ ಬಿ. ಶ್ರೀನಾಥ್‌ ಅವರಿಗೆ ಮೈಸೂರು ಯೋಗೀಶ್‌ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಯೋಗ ಪರಂಪರೆ ಕುರಿತ ಛಾಯಾಚಿತ್ರ ಪ್ರದ್ರಶನ
  • ಮುಕ್ತ ಯೋಗಾಸನ, ಲಿಖಿತ ರಸಪ್ರಶ್ನೆ ಸ್ಪರ್ಧೆ

ಮೈಸೂರು ಯೋಗೀಸ್‌ ಟ್ರಸ್ಟ್‌ ಮತ್ತು ಶ್ರೀಮನ್ಮಹರಾಜ ಸಂಸ್ಕೃತ ಮಹಾ ಪಾಠಶಾಲೆ ಸಹಯೋಗದಲ್ಲಿ ಭಾನುವಾರ ಮೈಸೂರು ಯೋಗೋತ್ಸವ ಏರ್ಪಡಿಸಲಾಗಿತ್ತು.

ನ್ಯೂ ಸಯ್ಯಾಜಿರಾವ್‌ ರಸ್ತೆಯ ಮಹಾರಾಜ ಸಂಸ್ಕೃತ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಯೋಗ ತರಬೇತುದಾರ ಬಿ. ಶ್ರೀನಾಥ್‌ ಅವರಿಗೆ ಮೈಸೂರು ಯೋಗೀಸ್‌ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯೋಗೋತ್ಸವ ಉದ್ಘಾಟಿಸಿದ ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ.ಪಿ,ಸತ್ಯನಾರಾಯಣ ಮಾತನಾಡಿ, ಸಂಸ್ಕೃತ ಪಾಠಶಾಲೆಯ ಕಟ್ಟಡ ಪಾರಂಪರಿಕವಾಗಿದ್ದು, ಇಲ್ಲಿ ವಿಶ್ವದಲ್ಲಿಯೇ ಪ್ರಥಮ ಯೋಗ ಶಾಲೆ ಆರಂಭವಾಯಿತು. ಮೈಸೂರು ಮಹಾರಾಜರಿಗೆ ಯೋಗ ವಿದ್ಯೆ ಕಲಿಸಿದ ತಿರುಮಲೇ ಕೃಷ್ಣಮಾಚಾರ್ಯರ ಸ್ಮರಣಾರ್ಥ ಯೋಗೋತ್ಸವ ಏರ್ಪಡಿಸಿರುವುದು ನಗರದ ಸಂಸ್ಕೃತಿಯ ಪ್ರತಿಬಿಂಬ ಎಂದರು.

ಮೈಸೂರು ಯೋಗ ಪರಂಪರೆಯ ಗುರುಗಳಾದ ತಿರುಮಲೇ ಕೃಷ್ಣಮಾಚಾರ್ಯ, ಶ್ರೀಕೃಷ್ಣ ಪಟ್ಟಾಭಿ ಜೋಯಿಸ್‌, ಡಾ.ಬಿಕೆಎಸ್‌ ಅಯ್ಯಂಗಾರ್‌, ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ, ಡಾ. ರಾಜ್‌ಕುಮಾರ್‌ ಮೊದಲಾದ ಯೋಗ ಸಾಧಕರು ಹಾಗೂ ಯೋಗ ಶಾಲೆಗಳ ಛಾಯಾಚಿತ್ರ ಪ್ರದರ್ಶನವನ್ನು ಹಿರಿಯ. ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಉದ್ಘಾಟಿಸಿದರು. ಕಳೆದ ಶತಮಾನದಲ್ಲಿ ಪೂರ್ವಿಕರು ಬಳಸುತ್ತಿದ್ದ ತಾಮ್ರ, ಹಿತ್ತಾಳೆ, ಕಂಚಿನ ಕಲಾತ್ಮಕ ವಸ್ತುಗಳ ಪ್ರದರ್ಶನ, ಈಸ್ಟ್‌ ಇಂಡಿಯಾ ಕಂಪನಿಯ ಹಳೇ ನಾಣ್ಯಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.

ಇದೇ ಸಂದರ್ಭದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಮೈಸೂರು ನಗರ, ನಂಜನಗೂಡು, ಬೆಂಗಳೂರು, ಬಳ್ಳಾರಿಯ 50 ಮಂದಿ ಪಾಲ್ಗೊಂಡಿದ್ದರು. ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವರಿಗೆ 2000, 1500 ಹಾಗೂ 1000 ರೂ. ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಲಾಯಿತು. ಯೋಗ ಕುರಿತ ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ 20 ಮಂದಿ ಪಾಲ್ಗೊಂಡಿದ್ದರು. ಕ್ರಮವಾಗಿ 500, 300, 200 ರೂ. ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಲಾಯಿತು. ಹಿರಿಯ ಯೋಗ ಗುರು ಎಸ್‌.ವಿ. ವೆಂಕಟೇಶಯ್ಯ ಬಹುಮಾನ ವಿತರಿಸಿದರು.

ಸಾಮೂಹಿಕ 108 ಸೂರ್ಯ ನಮಸ್ಕಾರವನ್ನು ಯೋಗ ತರಬೇತುದಾರರಾದ ಲತಾ ಅವರು ಇತರೆ 12 ಮಂದಿಯೊಂದಿಗೆ ನಡೆಸಿಕೊಟ್ಟರು.

ಯೋಗ ಕಾರ್ಯಾಗಾರವನ್ನು ವಿಶೇಷ ಮನೋದರ್ಶನ ತಜ್ಞರಾದ ನಮ್ರತಾ ಭಾರದ್ವಾಜ್‌ ನಡೆಸಿಕೊಟ್ಟರು. ಆಧ್ಯಾತ್ಮಿಕ ಚಿಂತಕ ಮುಕುಂದನ್‌ ಅವರು ಭಗವದ್ಗೀತೆಯಲ್ಲಿ ಯೋಗ ಸಂದೇಶ ಕುರಿತು ಉಪನ್ಯಾಸ ನೀಡಿದರು. ಆಯುರ್ವೇದ ಮತ್ತು ಯೋಗ ಚಿಕಿತ್ಸಕ ಡಾ.ಗಣೇಶರಾವ್‌ ಅಷ್ಟಾಂಗ ಯೋಗ ಧ್ಯಾನದ ತರಬೇತಿ ನೀಡಿದರು. ಅಂತಾರಾಷ್ಟ್ರೀಯ ಯೋಗಭಂಗಿ ರೂಪದರ್ಶಿ ತಿರುಮಲೈ ಯೋಗಪ್ರಕಾಶ್‌ ಅವರು ಯೋಗಾಸನಗಳ ಮೌಲ್ಯಮಾಪನಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net