ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್‌ ಕಳುಹಿಸಿ ಕಿರುಕುಳ ನೀಡಿದ ಆರೋಪ: ಮೈಸೂರು ವಿವಿ ಪ್ರಾಧ್ಯಾಪಕ ಅಮಾನತು

ಅಪರಾಧ
ಅಪರಾಧ
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು
  • ಮೈಸೂರು ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ.ಉಮಾಕಾಂತ್‌ರನ್ನು ಸೇವೆಯಿಂದ ಅಮಾನತುಪಡಿಸಿ ಮೈಸೂರು ವಿವಿ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡಿದೆ
  • ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್‌ಗಳನ್ನು ರವಾನಿಸಿ, ತನಗೆ ದೈಹಿಕವಾಗಿ ಸಹಕರಿಸಬೇಕು ಎಂದು ಕಿರುಕುಳ ನೀಡುತ್ತಿದ್ದನು ಎಂದು ದೂರು ಕೇಳಿ ಬಂದಿತ್ತು
ಮೈಸೂರು: ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್‌ಗಳನ್ನು ಕಳುಹಿಸಿ ಕಿರುಕುಳ ನೀಡಿದ ಆರೋಪದ ಮೇರೆಗೆ ಮೈಸೂರು ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ.ಉಮಾಕಾಂತ್‌ರನ್ನು ಸೇವೆಯಿಂದ ಅಮಾನತುಪಡಿಸಿ ಮೈಸೂರು ವಿವಿ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡಿದೆ.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಪ್ರಾಧ್ಯಾಪಕ ಡಾ.ಉಮಾಕಾಂತ್ ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್‌ಗಳನ್ನು ರವಾನಿಸಿ, ತನಗೆ ದೈಹಿಕವಾಗಿ ಸಹಕರಿಸಬೇಕು ಎಂದು ಕಿರುಕುಳ ನೀಡುತ್ತಿದ್ದನು ಎಂದು ದೂರು ಕೇಳಿ ಬಂದಿತ್ತು. ಕಳೆದ ನಾಲ್ಕೂವರೆ ತಿಂಗಳಿನಿಂದ ವಿದ್ಯಾರ್ಥಿನಿ ಕಿರುಕುಳ ಸಹಿಸಿಕೊಂಡಿದ್ದಳು. ಅಂತಿಮವಾಗಿ ಕುಲಪತಿಗೆ ದೂರು ಸಲ್ಲಿಸಿದ್ದಳು. ಕೂಡಲೇ ಪ್ರೊ.ಲೋಕನಾಥ್ ಅವರು ಆಂತರಿಕ ತನಿಖೆಗೆ ಸಮಿತಿ ರಚಿಸಿದ್ದರು. ಸಮಿತಿ ವಿಚಾರಣೆ ನಡೆಸಿ ಪ್ರಾಧ್ಯಾಪಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿತ್ತು. ಹೀಗಾಗಿ ಪ್ರಾಧ್ಯಾಪಕ ಡಾ.ಉಮಾಕಾಂತ್ ಅವರನ್ನು ಅಮಾನತುಪಡಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಗುಣಮಟ್ಟದ ಆಹಾರಕ್ಕೆ ತಾಕೀತು

ವಿವಿ ವ್ಯಾಪ್ತಿಗೆ ಒಳಪಟ್ಟಿರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಗುಣಮಟ್ಟದ ಆಹಾರ ಪೂರೈಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ದೈಹಿಕ ಶಿಕ್ಷಣ ವಿಭಾಗದ ಚರ್ಚೆ

ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರಲ್ಲಿ ಒಳಜಗಳ ಹೆಚ್ಚಾಗಿದೆ. ಆರೋಪ-ಪ್ರತ್ಯಾರೋಪ ಮಾಡುತ್ತಾ, ಮೈಸೂರು ವಿವಿಯ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದಾರೆ. ಹಾಗಾಗಿ ಹೊರಗಿನವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಅಲ್ಲದೆ, ಅತಿಥಿ ಉಪನ್ಯಾಸಕರೊಬ್ಬರು ವಿವಿಗೆ ಧಕ್ಕೆ ಬರುವಂತಹ ವಿಚಾರಗಳನ್ನು ವಾಟ್ಸ್ ಅಪ್ ಗ್ರೂಪಿನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಿಂಡಿಕೇಟ್ ಸದಸ್ಯರು ಕೊಡುವ ಪ್ರತಿಯನ್ನು ಎಲ್ಲೆಡೆ ಹಂಚುತ್ತಿದ್ದಾರೆ ಎಂಬ ವಿಷಯವೂ ಪ್ರಸ್ತಾಪವಾಯಿತು. ಅವರಿಗೆ ನೋಟಿಸ್ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ವಿವಿ ಇಂಜಿನಿಯರ್ ಕಾಲೇಜಿನಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಹೀಗಾಗಿ ಕಾಲೇಜಿನ ಪ್ರಾಂಶುಪಾಲರಿಗೆ ನೋಟಿಸ್ ಕೊಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net