ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರದಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಪಾಲಕರಿಂ ದಲೂ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಆದರೆ ಪರಿಸರ ಬಳಗದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯಾಗಾರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಸಾಮಾನ್ಯವಾಗಿ 200ರಿಂದ 300ರೊಳಗೆ ಸೀಮಿತಗೊಳಿಸಲಾಗುತ್ತಿದೆ. ವಿಶೇಷವೆಂದರೆ, ಈ ಹಿಂದೆ ಕಾರ್ಯಾಗಾರದಲ್ಲಿ ಮೂರ್ತಿ ತಯಾರಿಸುವುದನ್ನು ಕಲಿತ ಕೆಲವು ವಿದ್ಯಾರ್ಥಿಗಳು ಇದೀಗ ಸ್ವತಃ ತಮ್ಮ ಮನೆ ಹಾಗೂ ಶಾಲೆಗಳಲ್ಲಿ ಗಣೇಶೋತ್ಸವ ಮೂರ್ತಿಗಳನ್ನು ತಯಾರಿಸಿದ ಉದಾಹರಣೆ ಸಹ ಇದೆ. ಹೀಗೆ ಒಂದು ಮಗುವಿನ ಕೈಯಿಂದ ಆರಂಭವಾಗುವ ಪರಿಸರ ಪ್ರೀತಿ, ಇಡೀ ಕುಟುಂಬ, ಸಮಾಜಕ್ಕೆ ವಿಸ್ತರಿಸುತ್ತಿದೆ.