ಮೈಸೂರಿಗೆ ಬೇಕಿದೆ ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ಜಾಗ

ಮೈಸೂರುಮಹಾನಗರಪಾಲಿಕೆ ಕಟ್ಟಡ
ಮೈಸೂರುಮಹಾನಗರಪಾಲಿಕೆ ಕಟ್ಟಡ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ಸೂಕ್ತ ಜಾಗವಿಲ್ಲದೆ ಮಾಲೀಕರು ಪರದಾಟ
  • ಪರಿಸರ ಅನೈರ್ಮಲ್ಯ, ಸಾಂಕ್ರಾಮಿಕ ಸೋಕು ಹರಡುವ ಭೀತಿ ಎದುರಾಗುತ್ತಿದೆ
  • ನಗರ ಬೆಳೆದಂತೆ ಖಾಲಿ ಜಾಗಗಳು ಇಲ್ಲದೆ ಸಮಸ್ಯೆ
ಆರ್.ಕೃಷ್ಣ ಮೈಸೂರು
ದೇಶದಲ್ಲೇ ‘ಸ್ವಚ್ಛನಗರಿ’ ಪ್ರಶಸ್ತಿ ಪಡೆದಿರುವ ನಗರದಲ್ಲಿ ಈಗ ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ಜಾಗದ ಸಮಸ್ಯೆ ಕಾಡಲಾರಂಭಿಸಿದೆ.
ರಾಜಧಾನಿ ಬೆಂಗಳೂರಿನ ಬಳಿಕ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ಸೂಕ್ತ ಜಾಗವಿಲ್ಲದೆ ಮಾಲೀಕರು ಪರದಾಡುವಂತಾಗಿದೆ.
ದೇಶದಲ್ಲೇ ಸ್ವಚ್ಛನಗರಿ ಎಂದು ಪ್ರಶಸ್ತಿ ಪಡೆದಿರುವ ನಗರದಲ್ಲಿ ಈಗ ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ಜಾಗ ನಿಗದಿಯಾಗದಿರುವುದು ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಅಲ್ಲದೇ ಬೀಡಾಡಿ ಹಸು, ಕುದುರೆ, ನಾಯಿಗಳು ನಾನಾ ಕಾರಣದಿಂದ ಸತ್ತಾಗ ಅವುಗಳನ್ನು ಜನರಿಲ್ಲದ ಕಡೆ ರಸ್ತೆ ಬದಿ, ಚರಂಡಿಯಲ್ಲಿ ಬಿಸಾಡುವುದು ಇಲ್ಲವೇ ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಅವುಗಳನ್ನು ಕಸದ ವಾಹನದಲ್ಲಿ ಹಾಕಿ ಕಸದೊಂದಿಗೆ ಸಾಗಿಸುವ ಕೆಲಸ ನಡೆಯುತ್ತಿದೆ. ಇದರಿಂದ ಸುತ್ತಮುತ್ತಲ ಪರಿಸರ ಅನೈರ್ಮಲ್ಯ, ಸಾಂಕ್ರಾಮಿಕ ಸೋಕು ಹರಡುವ ಭೀತಿ ಎದುರಾಗುತ್ತಿದೆ.
ನಗರ ಪ್ರದೇಶದಲ್ಲಿ ಹಲವರ ಜೀವನಾಧಾರಕ್ಕೆ ಪಶುಪಾಲನೆ ಮಾಡುವುದು ಸಾಮಾನ್ಯವಾಗಿದೆ. ಜತೆಗೆ ಪ್ರವಾಸಿತಾಣವಾದ ನಗರದಲ್ಲಿ ರಾಜರ ಕಾಲದಿಂದ ಪಾರಂಪರಿಕವಾಗಿ ಜಟಕಾ ಕುದುರೆಗಳನ್ನು ಸಾಕುವುದು ಸಾಗಿ ಬಂದಿದೆ. ಅವುಗಳನ್ನು ಈಗಲೂ ನೋಡಬಹುದಾಗಿದ್ದು, ಕುದುರೆಗಳೇ ಜೀವಾಳ.
ಆಧುನಿಕ ದಿನಗಳಲ್ಲಿ ಮನೆ ಕಾವಲಿನ ಜತೆಗೆ ಫ್ಯಾಷನ್ ಅಗಿಯೂ ನಗರದ ಜನರು ವಿವಿಧ ತಳಿಯ ನಾಯಿಗಳು, ಬೆಕ್ಕುಗಳು, ಲವ್‌ಬರ್ಡ್ಸ್‌ಗಳನ್ನು ಸಾಕುವುದು ರೂಢಿಯಾಗಿಸಿಕೊಂಡಿದ್ದಾರೆ. ಹೀಗೆ ಪ್ರೀತಿಯಿಂದ ಸಾಕಿದ ಪ್ರಾಣಿಗಳು ಮೃತಪಟ್ಟರೆ ನಗರದಲ್ಲಿ ಅವುಗಳ ಅಂತ್ಯ ಸಂಸ್ಕಾರ ಮಾಡಲು ಸೂಕ್ತ ಜಾಗವಿಲ್ಲದಂತಾಗಿದೆ.
ಮನುಷ್ಯರು ಮೃತಪಟ್ಟರೆ ಅಂತ್ಯ ಸಂಸ್ಕಾರ ಮಾಡಲು ವಿವಿಧ ಜಾತಿ, ಧರ್ಮಾಧಾರಿತ ವಿದ್ಯುತ್ ಚಿತಾಗಾರ, ಹೂಳುವ ಸ್ಮಶಾನಗಳು ನಗರದ ವಿವಿಧೆಡೆ ಇವೆ. ಆದರೆ ಸಾಕು ಪ್ರಾಣಿಗಳ ಅಂತ್ಯ ಸಂಸ್ಕಾರ ಜಾಗದ ಕೊರತೆ ಕಾಡುತ್ತಿದೆ. ಇದರಿಂದ ಮೃತಪಟ್ಟ ಸಾಕು ಪ್ರಾಣಿಗಳನ್ನು ಗೌರವಯುತವಾಗಿ ಹೇಗೆ ಅಂತ್ಯಕ್ರಿಯೆ ನಡೆಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ಖಾಲಿ ಜಾಗಗಳೂ ಇಲ್ಲ
ಇಷ್ಟು ದಿನಗಳು ಸಾಕು ಪ್ರಾಣಿಗಳು ಸಾವನ್ನಪ್ಪಿದಾಗ ಅಕ್ಕ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ಹೂಳಲಾಗುತ್ತಿತ್ತು. ಆದರೆ ಇತ್ತೀಚೆಗೆ ನಗರ ಬೆಳೆದಂತೆ ಖಾಲಿ ಜಾಗಗಳು ಇಲ್ಲದೆ ಮಾಲೀಕರಿಗೆ ಸಮಸ್ಯೆ ಎದುರಾಗಿದೆ. ಜತೆಗೆ ಬೀದಿನಾಯಿಗಳು ಸೇರಿದಂತೆ ಇತರ ಪ್ರಾಣಿಗಳು ವಯೋಸಹಜ ಇಲ್ಲವೇ ಅಪಫಾತದಿಂದ ಮೃತಪಟ್ಟರೆ ಅವುಗಳನ್ನು ರಸ್ತೆ ಬದಿ, ಇಲ್ಲವೇ ಚರಂಡಿ ಅಥವಾ ನಗರಪಾಲಿಕೆ ಕಸದ ವಾಹನಗಳಿಗೆ ತುಂಬಿ ಸಾಗಿಸಲಾಗುತ್ತಿದೆ. ಅವುಗಳನ್ನು ಸುಯೇಜ್ ಫಾರಂ ಅಥವಾ ಕಸಕ್ಕಾಗಿ ಮೀಸಲಾದ ಜಾಗದಲ್ಲಿ ಬಿಸಾಡಲಾಗುತ್ತಿದೆ. ಪ್ರಾಣಿಗಳನ್ನು ಸಾಕುವಾಗ ಮನೆಯ ಸದಸ್ಯರಂತೆ ಅವುಗಳನ್ನು ನೋಡಿಕೊಳ್ಳಲಾಗುತ್ತದೆ. ಹಾಗಾಗಿ ಅವುಗಳ ಅಗಲುವಿಕೆ ನೋವಿನ ಜತೆಗೆ ಅವುಗಳನ್ನು ಸೂಕ್ತವಾಗಿ ಅಂತ್ಯಕ್ರಿಯೆ ಮಾಡದಿದ್ದಾಗ ಮಾಲೀಕರಲ್ಲಿ ಮತ್ತಷ್ಟು ಬೇಸರ ಮೂಡಿಸುತ್ತದೆ.
ರೋಗರುಜಿನಕ್ಕೂ ಇದು ಕಾರಣ
ಹಸುವನ್ನು ಗೋಮಾತೆ ಎಂದು ಪೂಜಿಸುವ ಹಲವರು, ಜೀವಿತದಲ್ಲಿ ಕುಟುಂಬವನ್ನು ಸಾಕಿತ್ತು ಎನ್ನುವ ಭಾವನಾತ್ಮಕ ಸಂಬಂಧ ಇರುತ್ತದೆ. ಹಾಗಾಗಿ ಹಸು ಮೃತಪಟ್ಟಾಗ ವಿಧಿವಿಧಾನದಂತೆ ಅಂತ್ಯಕ್ರಿಯೆ ಮಾಡಲು ಸಾಕಿದವರು ಬಯಸುತ್ತಾರೆ. ಮೃತ ಪ್ರಾಣಿಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಕೊಳೆತ ದುರ್ವಾಸನೆಯಿಂದ ಸುತ್ತಮುತ್ತಲ ಜನರು ಕಿರಿಕಿರಿ ಅನುಭವಿಸುವಂತಾಗಿದೆ. ರೋಗರುಜಿನಕ್ಕೂ ಇದು ಕಾರಣವಾಗುತ್ತದೆ. ಹಾಗಾಗಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ನಗರದ ವಿವಿಧೆಡೆ ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕಾಗಿ ಹೂಳಲು ಜಾಗ ಅಥವಾ ಪ್ರಾಣಿ ಚಿತಾಗಾರ ನಿರ್ಮಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ಮುಂದೆ ಪರಿಶೀಲಿಸಲಾಗುವುದು
ಸಾಕುಪ್ರಾಣಿಗಳು, ಬೀಡಾಡಿ ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ನಿರ್ಧಿಷ್ಟ ಜಾಗ ಎಂದು ಇದುವರೆವಿಗೂ ನಗರಪಾಲಿಕೆಯಿಂದ ಜಾಗ ಗುರುತಿಸಿಲ್ಲ. ಅಲ್ಲದೇ ಇದುವರೆವಿಗೂ ಅಂತಹ ಸಮಸ್ಯೆ ಕಂಡು ಬಂದಿರಲಿಲ್ಲ. ಮುಂದೆ ಈ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಶೇಖ್ ತನ್ವೀರ್ ಅಸೀಫ್
ಆಯುಕ್ತರು, ನಗರಪಾಲಿಕೆ
ಜಾಗದ ಸಮಸ್ಯೆ ಕಾಡುತ್ತಿದೆ
ನಾವು ಪ್ರೀತಿಯಿಂದ ಸಾಕಿದ ಹಸು, ನಾಯಿ, ಬೆಕ್ಕು ಸತ್ತ ಮೇಲೆ ಎಲ್ಲಿ ಅಂತ್ಯಕ್ರಿಯೆ ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ. ಹಿಂದೆ ನಗರದಲ್ಲಿ ಇದ್ದ ಖಾಲಿ ಜಾಗದಲ್ಲಿ ನೆರವೇರಿಸಲಾಗುತ್ತಿತ್ತು. ಆದರೆ ನಗರ ಬೆಳೆದಂತೆ ಜಾಗದ ಸಮಸ್ಯೆ ಕಾಡುತ್ತಿದೆ. ಈಗ ಮಾಲೀಕರು ಸಾಕಷ್ಟು ಪರದಾಡುವ ಸ್ಥಿತಿಇತ್ತು. ಮೂಕ ಪ್ರಾಣಿಗಳಿಗೂ ಕೂಡ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಸೂಕ್ತ ಜಾಗದ ವ್ಯವಸ್ಥೆ ಮಾಡಿಕೊಡಬೇಕು.
ಡಿ.ನಾಗಭೂಷಣ್
ಪಶುಪಾಲರು, ನಗರಪಾಲಿಕೆ ಮಾಜಿ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net