ಮೂರು ತಿಂಗಳಲ್ಲಿ 44 ಪ್ರಕರಣ ಭೇದಿಸಿದ ಮೈಸೂರು ಖಾಕಿ ಪಡೆ

ಮೈಸೂರು ಪೊಲೀಸರು ವಶಪಡಿಸಿಕೊಂಡಿದ್ದ ಕಳವು ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು
ಮೈಸೂರು ಪೊಲೀಸರು ವಶಪಡಿಸಿಕೊಂಡಿದ್ದ ಕಳವು ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು
Published on

ಪ್ರಮುಖ ಮುಖ್ಯಾಂಶಗಳು

  • ಒಂದು ದರೋಡೆ ಸಂಚು, ಎರಡು ಸುಲಿಗೆ ಪ್ರಕರಣ, 10 ಕನ್ನ ಪ್ರಕರಣ, 9 ಮನೆ ಕಳ್ಳತನ,3 ವಂಚನೆ ಪ್ರಕರಣ ಸೇರಿದಂತೆ ಒಟ್ಟು 44 ಪ್ರಕರಣ ಪತ್ತೆ
  • ಒಟ್ಟು 2,09,37,645 ರೂ.ಮೌಲ್ಯದ 1.578 ಕೆ.ಜಿ. 743 ಮಿಲಿ ಚಿನ್ನಾಭರಣ, 3 ಕೆ.ಜಿ 578 ಗ್ರಾಂ ಬೆಳ್ಳಿ ಹಾಗೂ 2,76,786 ರೂ.ನಗದು ಸೇರಿದಂತೆ ಇತರ ಮಾಲು ಜಪ್ತಿ
ಮೈಸೂರು: ಮೂರು ತಿಂಗಳ ಅವಧಿಯಲ್ಲಿ ನಗರ ವ್ಯಾಪ್ತಿ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ, ವಂಚನೆ ಪ್ರಕರಣ ಸೇರಿದಂತೆ ವಿವಿಧ 44 ಪ್ರಕರಣಗಳನ್ನು ಭೇದಿಸಿರುವ ನಗರ ಪೊಲೀಸರು, ಕಳ್ಳರಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದರು.
ಒಂದು ದರೋಡೆ ಸಂಚು, ಎರಡು ಸುಲಿಗೆ ಪ್ರಕರಣ, 10 ಕನ್ನ ಪ್ರಕರಣ, 9 ಮನೆ ಕಳ್ಳತನ, 4 ಮನೆ ಕೆಲಸದವರಿಂದ ಕಳ್ಳತನ, 10 ವಾಹನ ಕಳ್ಳತನ, 5 ಸಾಮಾನ್ಯ ಕಳ್ಳತನ ಹಾಗೂ 3 ವಂಚನೆ ಪ್ರಕರಣ ಸೇರಿದಂತೆ ಒಟ್ಟು 44 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಪ್ರಕರಣಗಳಿಂದ ಒಟ್ಟು 2,09,37,645 ರೂ.ಮೌಲ್ಯದ 1.578 ಕೆ.ಜಿ. 743 ಮಿಲಿ ಚಿನ್ನಾಭರಣ, 3 ಕೆ.ಜಿ 578 ಗ್ರಾಂ ಬೆಳ್ಳಿ ಹಾಗೂ 2,76,786 ರೂ.ನಗದು ಸೇರಿದಂತೆ ಇತರ ಮಾಲುಗಳನ್ನು ಜಪ್ತಿ ಮಾಡಲಾಗಿದೆ. ಪತ್ತೆಯಾದ ಪ್ರಕರಣಗಳಲ್ಲಿ ಒಟ್ಟು 55 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಪತ್ತೆಯಾದ ಹಲವು ಪ್ರಕರಣಗಳು
ವಂಚನೆ ಪ್ರಕರಣ ಸಂಬಂಧ ಮಂಡಿ ಠಾಣಾ ಪೊಲೀಸರು ಇಬ್ಬರು ಆರೋಪಿಯನ್ನು ದಸ್ತಗಿರಿ ಮಾಡಿ 90 ಲಕ್ಷ ರೂ.ಮೌಲ್ಯದ 660 ಗ್ರಾಂ ಚಿನ್ನದ ಗಟ್ಟಿಯನ್ನು ವಶ ಪಡಿಸಿಕೊಂಡಿದ್ದಾರೆ. ಮನೆ ಕೆಲಸ ಮಾಡುತ್ತಿದ್ದ ಇಬ್ಬರನ್ನು ವಿಜಯನಗರ ಠಾಣಾ ಪೊಲೀಸರು ಬಂಧಿಸಿ, ಕಳವು ಮಾಡಿದ್ದ 23,50,000 ರೂ. ಮೌಲ್ಯದ 170 ಗ್ರಾಂ ಚಿನ್ನಾಭರಣ ಮತ್ತು ಗಾರ್ಮೆಂಟ್ಸ್ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು 4 ಕನ್ನ ಕಳವು ಪ್ರಕರಣದಲ್ಲಿ 21,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೇ ಒಂದು ವಂಚನೆ ಪ್ರಕರಣ ಪತ್ತೆ ಮಾಡಿ 4 ಆರೋಪಿಗಳನ್ನು ವಶಕ್ಕೆ ಪಡೆದು 2,74,000 ರೂ. ನಗದು ವಶಕ್ಕೆ ಪಡೆದಿದ್ದಾರೆ. ಸರಸ್ವತಿಪುರಂ ಠಾಣಾ ಪೊಲೀಸರು 4 ಮನೆ ಕಳ್ಳತನ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿ 18,40,000 ರೂ. ಮೌಲ್ಯದ 143 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಲಷ್ಕರ್ ಠಾಣಾ ಪೊಲೀಸರು 4 ಆರೋಪಿಗಳನ್ನು ಬಂಧಿಸಿ, ಒಟ್ಟು 4 ಪ್ರಕರಣದಲ್ಲಿ 11,45,000 ರೂ. ಮೌಲ್ಯದ 202 ಗ್ರಾಂ ಚಿನ್ನಾಭರಣಗಳು 196 ಗ್ರಾಂ ಬೆಳ್ಳಿ ಪದಾರ್ಥಗಳನ್ನು, ನಜರ್‌ಬಾದ್ ಠಾಣಾ ಪೊಲೀಸರು ಇಬರನ್ನು ಬಂಧಿಸಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಕಳವು ಮಾಡಿದ್ದ 9,25,000 ರೂ. ಮೌಲ್ಯದ 43 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ 250 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇಟಗಳ್ಳಿ ಠಾಣಾ ಪೊಲೀಸರು 13 ಆರೋಪಿಗಳನ್ನು 5 ದ್ವಿಚಕ್ರ ವಾಹನ ಸೇರಿದಂತೆ ವಿವಿಧ ಒಟ್ಟು 10 ಪ್ರಕರಣಗಳ ಭೇದಿಸಿ 8,22,645 ರೂ ಮೌಲ್ಯದ ಚಿನ್ನಾಭರಣ, 496 ಗ್ರಾಂ ಬೆಳ್ಳಿ ಪದಾರ್ಥಗಳು, 5 ದ್ವಿಚಕ್ರ ವಾಹನಗಳು, 2786 ಇನ್ನಿತರೆ ವಸ್ತು ವಶಪಡಿಸಿಕೊಂಡಿದ್ದಾರೆ.
ಉದಯಗಿರಿ ಪೊಲೀಸರು ಐವರನ್ನು ಬಂಧಿಸಿ, 3 ಪ್ರಕರಣದಲ್ಲಿ 5,45,000 ರೂ. ಮೌಲ್ಯದ 54 ಗ್ರಾಂ ಚಿನ್ನಾಭರಣ, 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ಠಾಣಾ ಪೊಲೀಸರು ಒಬ್ಬನನ್ನು ಬಂಧಿಸಿ 4,65,000 ರೂ. ಮೌಲ್ಯದ ಚಿನ್ನಾಭರಣ, ಕುವೆಂಪುನಗರ ಪೊಲೀಸರು 6 ಜನರನ್ನು ಬಂಧಿಸಿ 3 ಪ್ರಕರಣದಲ್ಲಿ 4,10,000 ರೂ. ಮೌಲ್ಯದ 30 ಗ್ರಾಂ ಚಿನ್ನ ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಲಕ್ಷ್ಮೀಪುರಂ ಠಾಣಾ ಪೊಲೀಸರು ಒಬ್ಬನನ್ನು ಬಂಧಿಸಿ 3,55,000 ರೂ. ಮೌಲ್ಯದ ಚಿನ್ನದ ಸರ, ವಿದ್ಯಾರಣ್ಯಪುರಂ ಪೊಲೀಸರು ಒಬ್ಬನನ್ನು ಬಂಧಿಸಿ 3 ಲಕ್ಷ ಮೌಲ್ಯದ 1576 ಗ್ರಾಂ ಬೆಳ್ಳಿ ಪದಾರ್ಥವನ್ನು ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಳ್ ಠಾಣಾ ಪೊಲೀಸರು 8 ಜನರನ್ನು ಬಂಧಿಸಿ 1,43,000 ರೂ. ಮೌಲ್ಯದ 1 ಮೊಬೈಲ್, 5 ಗ್ರಾಂ ತೂಕದ ಚಿನ್ನದ ಉಂಗುರ, 60 ಗ್ರಾಂ ಬೆಳ್ಳಿ ಸರ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ.
ಉಳಿದಂತೆ ವಿ.ವಿ.ಪುರಂ ಠಾಣಾ ಪೊಲೀಸರು ಮಹಿಳೆಯನ್ನು ಬಂಧಿಸಿ 90,000 ರೂ. ಮೌಲ್ಯದ ಚಿನ್ನಾಭರಣ, ದೇವರಾಜ ಠಾಣಾ ಪೊಲೀಸರು ಮೂವರನ್ನು ಬಂಧಿಸಿ 1,48,000 ರೂ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಎನ್.ಆರ್.ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ 25,000 ರೂ. ಮೌಲ್ಯದ ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net