ಅತ್ಯಾಧುನಿಕ ಎಐ ಮೂಲಸೌಕರ್ಯ ನಿರ್ಮಿಸಿದ ಕೀರ್ತಿ ಮೈಸೂರಿನದ್ದು:ಇಸ್ರೋ ಮಾಜಿ ಅಧ್ಯಕ್ಷ ಡಾ.ಎಸ್.ಸೋಮನಾಥ್ ಶ್ಲಾಘನೆ

ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶಿಯವಾಗಿ ನಿರ್ಮಿತ ‘ಫೆಮ್ಟೋ ’ (ಎಫ್‌ಇಎಂಟಿಒ) ಅನ್ನು ಬಿಡುಗಡೆಗೊಳಿಸಿ ಡಾ.ಎಸ್.ಸೋಮನಾಥ್ ಮಾತನಾಡಿದರು. ಶ್ರೀನಿವಾಸ್ ವರದರಾಜನ್, ಡಾ.ಬಿ.ಸುರೇಶ್, ಸಂಜೀವ್‌ಕುಮಾರ್ ಗುಪ್ತಾ ಇದ್ದರು.
ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶಿಯವಾಗಿ ನಿರ್ಮಿತ ‘ಫೆಮ್ಟೋ ’ (ಎಫ್‌ಇಎಂಟಿಒ) ಅನ್ನು ಬಿಡುಗಡೆಗೊಳಿಸಿ ಡಾ.ಎಸ್.ಸೋಮನಾಥ್ ಮಾತನಾಡಿದರು. ಶ್ರೀನಿವಾಸ್ ವರದರಾಜನ್, ಡಾ.ಬಿ.ಸುರೇಶ್, ಸಂಜೀವ್‌ಕುಮಾರ್ ಗುಪ್ತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇಶ ಅಲ್ಲದೆ ವಿದೇಶಿ ಸಂಸ್ಥೆಗಳಿಗೂ ಅತ್ಯಾಧುನಿಕ ಎ.ಐ.ಮೂಲ ಸೌಕರ್ಯವನ್ನು ನಿರ್ಮಿಸಿದ ಕೀರ್ತಿ ಮೈಸೂರಿನದ್ದಾಗಿದೆ
  • ದೇಶಿ ನಿರ್ಮಿತ ತಂತ್ರಾಂಶ ಗಡಿದಾಟಿ ಹೋಗುವುದಿಲ್ಲ. ಹಾಗಾಗಿ ದೇಶಿಯ ತಂತ್ರಾಂಶದಿಂದ ಭದ್ರತೆ ಹೆಚ್ಚು
ಮೈಸೂರು:ಮೈಸೂರು ಮೂಲದ ಡೀಪ್-ಟೆಕ್ ಕಂಪನಿಯಾದ ‘ವಿಗ್ಯಾನ್ ಲ್ಯಾಬ್ಸ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್’ ದೇಶೀಯವಾಗಿ ನೂತನವಾಗಿ ಆವಿಷ್ಕರಿಸಿರುವ ಅತ್ಯಾಧುನಿಕ ಎಐ-ಇನ್-ಎ-ಬಾಕ್ಸ್ ಪ್ಲಾಟ್‌ಫಾರ್ಮ್ ಆದ ‘ಫೆಮ್ಟೋ ’ (ಎಫ್‌ಇಎಂಟಿಒ) ಅನ್ನು ಬಿಡುಗಡೆ ಮಾಡಿದೆ.
ದೇಶ ಅಲ್ಲದೆ ವಿದೇಶಿ ಸಂಸ್ಥೆಗಳಿಗೂ ಅತ್ಯಾಧುನಿಕ ಎ.ಐ.ಮೂಲ ಸೌಕರ್ಯವನ್ನು ನಿರ್ಮಿಸಿದ ಕೀರ್ತಿ ಮೈಸೂರಿನದ್ದಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಡಾ.ಎಸ್.ಸೋಮನಾಥ್ ಶ್ಲಾಘಿಸಿದರು.
ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಫೆಮ್ಟೋ’ ಅನ್ನು ಅಧಿಕೃತವಾಗಿ ಉದ್ಘಾಟಿಸಿದ ಅವರು, ಇಷ್ಟು ದಿನಗಳ ಕಾಲ ವಿದೇಶಿ ನಿರ್ಮಿತ ತಂತ್ರಾಂಶ, ದತ್ತಾಂಶಗಳನ್ನು ಬಳಸುತ್ತಿದ್ದರಿಂದ ಮಾಹಿತಿ ಸೋರಿಕೆಯಾಗುತ್ತದೆ ಎನ್ನುವ ಆತಂಕವಿತ್ತು. ಆದರೆ ಈಗ ದೇಶಿ ನಿರ್ಮಿತ ತಂತ್ರಾಂಶ ಗಡಿದಾಟಿ ಹೋಗುವುದಿಲ್ಲ. ಹಾಗಾಗಿ ದೇಶಿಯ ತಂತ್ರಾಂಶದಿಂದ ಭದ್ರತೆ ಹೆಚ್ಚು ಎಂದು ಹೇಳಿದರು.
ವಿಗ್ಯಾನ್ ಲ್ಯಾಬ್ಸ್ ಎಐ ಮೂಲಕ ನೀಡುತ್ತಿರುವ ಸೇವೆ ವಿಶಿಷ್ಟವಾಗಿದ್ದು, ದೇಶದಲ್ಲೇ ಮೈಸೂರನ್ನು ಕೃತಕ ಬುದ್ಧಿಮತ್ತೆ ನಗರವನ್ನಾಗಿ ಗುರುತಿಸುವಂತೆ ಮಾಡುತ್ತಿದ್ದಾರೆ. ಈ ತಂತ್ರಾಂಶ ದೇಶದ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ಇಂತಹ ಪ್ರಯತ್ನ ಹೆಚ್ಚಬೇಕು ಎಂದು ಹೇಳಿದರು.
ವಿಗ್ಯಾನ್ ಸಂಸ್ಥಾಪಕ ಶ್ರೀನಿವಾಸ್ ವರದರಾಜನ್ ಮಾತನಾಡಿ, ಸುಮಾರು ಹತ್ತು ವರ್ಷಗಳ ಪ್ರಯತ್ನದ ಫಲದಿಂದ ಫೆಮ್ಟೊ ಆರಂಭಗೊಂಡಿದೆ. ಈ ಮೂಲಕ ಇಟರ್‌ನೆಟ್ ಸಹಾಯವಿಲ್ಲದೆ ದತ್ತಾಂಶ (ಡೇಟಾ) ಕ್ರೋಡೀಕರಿಸಲು ಸಾಧ್ಯ. ನೀರೂ ಇಲ್ಲದೆ ಡೇಟಾ ಸಂರಕ್ಷಣೆ ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಆದರೆ ಸತತ ಪ್ರಯತ್ನದಿಂದ ನೀರಿಲ್ಲದೆ ಗಾಳಿಯ ಮೂಲಕ ತಂತ್ರಾಂಶ, ದತ್ತಾಂಶ ತಂಪಾಗಿಸುವುದನ್ನು ಸಾಧಿಸಿ ತೋರಿಸಿದ್ದೇವೆ, ಈ ತಂತ್ರಾಂಶವು ದೇಶದ ಡಿಜಿಟಲ್ ಸಾಮರ್ಥ್ಯವನ್ನು ಬಲಪಡಿಸಲಿದೆ ಎಂದರು.
ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಿರುವ ಈ ತಂತ್ರಾಂಶವನ್ನು ಗ್ರಾಮೀಣ ಪ್ರದೇಶಗಳಲ್ಲಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದೆ. ಜತೆಗೆ ಜಾಗತಿಕವಾಗಿ ಪ್ರಸ್ತುತವಾದ ಎಐ ತಂತ್ರಜ್ಞಾನವನ್ನು ಮೈಸೂರಿನಿಂದ ಪ್ರತಿನಿಧಿಸಬೇಕು ಎಂಬ ಕಲ್ಪನೆಯಲ್ಲಿ ಈ ಯೋಜನೆ ಆರಂಭಿಸಿದ್ದೇವೆ ಎಂದು ಹೇಳಿದರು.
ಈಗಾಗಲೇ ಮೂರು ಐಐಟಿಗಳಲ್ಲಿ ಈ ತಂತ್ರಾಂಶ ಅಳವಡಿಸಿ ಕಾರ್ಯನಿರ್ವಹಣೆಯಾಗುತ್ತಿದೆ. ಪ್ರಪಂಚಕ್ಕೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಮೈಸೂರು ಕೃತಕ ಬುದ್ಧಿಮತ್ತೆಯ ಕೇಂದ್ರವಾಗಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಮ ಕುಲಾಪತಿ ಡಾ.ಬಿ.ಸುರೇಶ್, ಕರ್ನಾಟಕ ಡಿಜಿಟಲ್ ಎಕಾನಮಿ ಸಿಇಒ ಸಂಜೀವ್‌ಕುಮಾರ್ ಗುಪ್ತಾ , ವಿವಿಧ ಕಂಪನಿಗಳ ಮುಖ್ಯಸ್ಥರು, ಪ್ರತಿನಿಧಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net