ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಮೈಸೂರಿನಲ್ಲಿ ವಿಫುಲ ಅವಕಾಶ : ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್

 ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್
ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್
Published on
ಮೈಸೂರು: ಪ್ರವಾಸೋದ್ಯಮ, ಆತಿಥ್ಯ ಹಾಗೂ ಹೂಡಿಕೆ ಕ್ಷೇತ್ರದಲ್ಲಿ ನಗರವು ಬೆಳವಣಿಗೆ ಹೊಂದಲು ಅಪಾರ ಅವಕಾಶಗಳನ್ನು ಹೊಂದಿದ್ದು, ಸೂಕ್ತ ನೀತಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಜಾಗತಿಕ ಪ್ರವಾಸಿ ತಾಣವಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಯನ್ನು ಹೊಂದಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹೇಳಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ನಗರವು 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿಶೇಷ ಆತಿಥೋದ್ಯಮ ಪ್ರೋತ್ಸಾಹ ಯೋಜನೆಗಳ ಲಾಭ ಪಡೆಯಬಹುದು. ರಾಜ್ಯ ಸರ್ಕಾರವೂ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು ಎಂದರು.
ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ರಾಜ್ಯಗಳು ಆತಿಥ್ಯೊದ್ಯಮ ಕ್ಷೇತ್ರಕ್ಕೆ ಏಕಗವಾಕ್ಷಿ ಅನುಮೋದನಾ ವ್ಯವಸ್ಥೆ, ಜಿಎಸ್‌ಟಿ ರಿಯಾಯಿತಿಗಳು ಹಾಗೂ ಬಂಡವಾಳ ಸಬ್ಸಿಡಿಗಳಂತಹ ಪ್ರೋತ್ಸಾಹಗಳನ್ನು ನೀಡುತ್ತಿವೆ. ಮಧ್ಯಪ್ರದೇಶದಲ್ಲಿ ಶೇ.33ರಷ್ಟು ಬಂಡವಾಳ ಸಬ್ಸಿಡಿ ನೀಡುತ್ತಿದ್ದು ಇದನ್ನು ಮಾದರಿಯಾಗಿ ಅನುಸರಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಮೈಸೂರಿನಲ್ಲಿ ದಸರಾದೊಂದಿಗೆ ವರ್ಷಪೂರ್ತಿ ವಿವಿಧ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಸ ಚಟುವಟಿಕೆಗಳು, ಚಾರಣ ಮಾರ್ಗಗಳು ಹಾಗೂ ಅನುಭವಾಧಾರಿತ ಪ್ರವಾಸಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಅಲ್ಲದೇ ಇಂದಿನ ಯುವ ಪೀಳಿಗೆ ಸ್ಮಾರಕಗಳಿಗಿಂತ ಅನುಭವಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಹಾಗಾಗಿ ಪ್ರವಾಸಿಗರು ಮೈಸೂರಿಗೆ ಒಂದು ದಿನ ಬಂದು ತೆರಳುವ ಬದಲು ಇನ್ನಷ್ಟು ದಿನ ತಂಗುವಂತೆ ಹೊಸ ಆಕರ್ಷಣೆಗಳನ್ನು ಸೃಷ್ಟಿಸಬೇಕಾಗಿದೆ ಎಂದರು.
ಪ್ರಸ್ತುತ ದೇಶದ ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ ಶೇ.6ರಷ್ಟಿದ್ದು, 2030ರ ವೇಳೆಗೆ ಅದನ್ನು ಶೇ.7ಕ್ಕೆ ಹಾಗೂ 2047ರ ವೇಳೆಗೆ ಶೇ.10ಕ್ಕಿಂತ ಹೆಚ್ಚು ಮಟ್ಟಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಅಲ್ಲದೇ ಪ್ರವಾಸೋದ್ಯಮವು ಉದ್ಯೊಗ ಸೃಷ್ಟಿ, ಮಹಿಳಾ ಸಬಲೀಕರಣ, ಸ್ಥಳೀಯ ಆರ್ಥಿಕತೆ ಬಲವರ್ಧನೆ ಹಾಗೂ ಭಾರತದ ಜಾಗತಿಕ ಬ್ರಾೃಂಡ್ ಮೌಲ್ಯ ಹೆಚ್ಚಿಸುವ ಪ್ರಮುಖ ಸಾಧನವಾಗಿದೆ ಎಂದರು.
ಜನರೇಷನ್-ಝಡ್ ಮತ್ತು ಜನರೇಷನ್-ಆಲ್ಫಾ ಯುವಜನರು ಪ್ರವಾಸ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕುಟುಂಬಗಳ ರಜಾ ಯೋಜನೆಗಳಲ್ಲಿಯೂ ಮಕ್ಕಳ ಅಭಿಪ್ರಾಯವು ಶೇ.70ಕ್ಕೂ ಹೆಚ್ಚು ಪ್ರಭಾವ ಬೀರುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಮಾರುಕಟ್ಟೆ ತಂತ್ರಗಳನ್ನು ಹೊಸ ತಲೆಮಾರಿನ ಆಸಕ್ತಿಗಳಿಗೆ ಅನುಗುಣವಾಗಿ ರೂಪಿಸಬೇಕಾಗಿದೆ ಎಂದರು.
ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ 300 ಕೋಟಿ ಗೂ ಹೆಚ್ಚು ಜನರು ದೇಶೀಯ ಪ್ರವಾಸ ತಾಣಗಳನ್ನು ಭೇಟಿ ಮಾಡಿರುವುದು ದಾಖಲಾಗಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡ ದೇಶೀಯ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ. ಥೈಲ್ಯಾಂಡ್, ದುಬೈ ಅಥವಾ ಶ್ರೀಂಕಾದೊಂದಿಗೆ ಕೇವಲ ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು ಹೋಲಿಸುವುದು ಸರಿಯಲ್ಲ. ದೇಶೀಯ ಮತ್ತು ವಿದೇಶಿ ಪ್ರವಾಸೋದ್ಯಮ ಎರಡನ್ನೂ ಒಟ್ಟಿಗೆ ಪರಿಗಣಿಸಿದರೆ ಭಾರತದ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಸರಿಸಾಟಿಯಿಲ್ಲ ಎಂದು ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net