2023 ಹಾಗೂ ಅದಕ್ಕಿಂತ ಹಿಂದೆ ನಡೆದ ಸರ್ವೇಕ್ಷಣೆಯಲ್ಲಿ ಸಿಟಿಜನ್ ಫೀಡ್‌ಬ್ಯಾಕ್‌ಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಆ ಸಂದರ್ಭ ಈ ವಿಭಾಗಕ್ಕೆ 2,250 ಅಂಕಗಳನ್ನು ನೀಡಲಾಗುತಿತ್ತು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಜನರ ಸಹಭಾಗಿತ್ವ ಹೆಚ್ಚಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ಕಳೆದ ಬಾರಿ ಈ ವಿಭಾಗಕ್ಕೆ ಕೇವಲ 500 ಅಂಕಗಳು ಮಾತ್ರ ನಿಗದಿಪಡಿಸಲಾಯಿತು. ಹೀಗಾಗಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಜನರ ಅಭಿಪ್ರಾಯವೊಂದರಿಂದಲೇ ಮೈಸೂರು ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯಲು ಸಾಧ್ಯವಿಲ್ಲ. ನಗರದ ಪ್ರತಿಯೊಂದು ಬಡಾವಣೆಗಳು ಶುಚಿಯಾಗಿ ಇದ್ದರಷ್ಟೇ ಪ್ರಶಸ್ತಿ ದೊರೆಯಲು ಸಾಧ್ಯ. ಹೀಗಾಗಿ ನಗರದಲ್ಲಿ ನಡೆಯುವ ಸ್ವಚ್ಛತಾ ಕಾರ್ಯದ ಮೇಲೆ ಕಣ್ಗಾವಲು ಇರಿಸುವುದು ಅತ್ಯಾವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಮುದಾಯ ಸಂಘಟಕರನ್ನು ನೇಮಕ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ.