ಮೈಸೂರಿನಲ್ಲಿ ಬಿಡಾಡಿ ವಾಹನಗಳ ತೆರವಿಗೆ ಮುಂದಾದ ನಗರ ಪಾಲಿಕೆ
ಮೈಸೂರು ನಗರದಲ್ಲಿ ದೀರ್ಘಕಾಲದಿಂದ ಒಂದೆಡೆ ನಿಲುಗಡೆ ಮಾಡಿರುವ ವಾಹನಗಳನ್ನು ತೆರವುಗೊಳಿಸಲು ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದರು.
Published on:
Copied
Follow Us
: ನಗರದ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಧಿಕೃ ತವಾಗಿ ನಿಲುಗಡೆ ಮಾಡಿರುವ ಹಾಗೂ ಬಳಕೆಯಲ್ಲಿಲ್ಲದ ವಾಹನಗಳನ್ನು ತೆರವುಗೊಳಿಸಲು ನಗರ ಪಾಲಿಕೆ ಮುಂದಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ರೀತಿ ಒಟ್ಟು 382 ವಾಹನಗಳನ್ನು ಗುರುತಿಸಲಾಗಿದ್ದು, ಸದರಿ ವಾಹನಗಳ ಮೇಲೆ ನೋಟಿಸ್ ಅಂಟಿಸುವ ಕಾರ್ಯಕ್ಕೆ ಮಂಗಳವಾರ ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಚಾಲನೆ ನೀಡಿದರು.
ಸಾರ್ವಜನಿಕ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಇಂತಹ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುವುದರೊಂದಿಗೆ, ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಅಲ್ಲದೆ, ಕೆಲವು ವಾಹನಗಳು ತ್ಯಾಜ್ಯ ಸಂಗ್ರಹಣೆ, ಅಕ್ರಮ ಚಟುವಟಿಕೆ ಹಾಗೂ ಸೊಳ್ಳೆ ಸೇರಿದಂತೆ ರೋಗವಾಹಕಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.
ಹೀಗಾಗಿ ನೋಟಿಸ್ ಅಂಟಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ಸಂಬಂಧಪಟ್ಟ ವಾಹನದ ಮಾಲೀಕರು ತಮ್ಮ ವಾಹನವನ್ನು ಸದರಿ ಸ್ಥಳದಿಂದ ತೆರವುಗೊಳಿಸಬೇಕು. ನಿಗದಿತ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದಲ್ಲಿ, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976ರ ಕಲಂ 127 ಹಾಗೂ ಮೈಸೂರು ನಗರ ಪಾಲಿಕೆಯ ಉಪವಿಧಿಗಳು ಮತ್ತು ಪಾಲಿಕೆ ಪರಿಷತ್ತಿನ ನಿರ್ಣಯದನ್ವಯ ವಾಹನವನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು.
ವಾಹನ ತೆರವು ಹಾಗೂ ಸಾಗಾಣಿಕೆ ವೆಚ್ಚವನ್ನು ಸಂಬಂಧಪಟ್ಟ ವಾಹನದ ಮಾಲೀಕರಿಂದ ವಸೂಲಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ವಾಹನವನ್ನು ಹರಾಜು ಅಥವಾ ಸ್ಕ್ರಾೃಪ್ ಮಾಡುವ ಕ್ರಮವನ್ನೂ ಕೈಗೊಳ್ಳಲಾಗುವುದು. ವಾಹನ ಮಾಲೀಕರು ಪಾಲಿಕೆಯ ಕ್ರಮಕ್ಕೆ ಅವಕಾಶ ನೀಡದೆ, ನಿಗದಿತ ಅವಧಿಯೊಳಗೆ ತಮ್ಮ ವಾಹನಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿ ಸಾರ್ವಜನಿಕ ರಸ್ತೆ ಮತ್ತು ಸ್ಥಳಗಳನ್ನು ಅಡೆತಡೆಮುಕ್ತವಾಗಿಡಲು ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.